ಹಾಶಿಮ್ ಪುರ ಹತ್ಯಾಕಾಂಡ: ಇಬ್ಬರು ಪೊಲೀಸರಿಗೆ ಸುಪ್ರೀಂನಿಂದ ಜಾಮೀನು - Mahanayaka
9:55 PM Saturday 21 - December 2024

ಹಾಶಿಮ್ ಪುರ ಹತ್ಯಾಕಾಂಡ: ಇಬ್ಬರು ಪೊಲೀಸರಿಗೆ ಸುಪ್ರೀಂನಿಂದ ಜಾಮೀನು

21/12/2024

ಕುಪ್ರಸಿದ್ಧ ಹಾಶಿಮ್ ಪುರ ಹತ್ಯಾಕಾಂಡದಲ್ಲಿ ಭಾಗಿಯಾದ ಉತ್ತರ ಪ್ರದೇಶದ ಪ್ರೊವಿನ್ಸಿಯಲ್ ಅರ್ಮ್ಡ್ ಕಾನ್ಸ್ಟೇಬಲರಿ ಅಥವಾ ಉತ್ತರ ಪ್ರದೇಶದ ಇಬ್ಬರು ಪೊಲೀಸರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. 1987 ಮೇ 22ರಂದು ಈ ಕುಪ್ರಸಿದ್ಧ ಮತ್ತು ಭಯಾನಕ ಹತ್ಯಾಕಾಂಡ ನಡೆದಿತ್ತು. ಮೀರತ್ ಸಮೀಪದ ಹಾಶಿಮ್ ಪುರಕ್ಕೆ ಬಂದ ಪೊಲೀಸರು 45 ಮುಸ್ಲಿಂ ಪುರುಷರನ್ನು ವಾಹನಕ್ಕೆ ತುಂಬಿ ಕರೆದೊಯ್ದಿದ್ದರು ಮತ್ತು ಆ ಬಳಿಕ ಅವರನ್ನು ಗುಂಡಿಕ್ಕಿ ಸಾಯಿಸಿ ಮೃತ ದೇಹಗಳನ್ನು ಎಸೆದಿದ್ದರು.

ಡಿಸೆಂಬರ್ 7ರಂದು 8 ಮಂದಿ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಇದೀಗ 82 ವರ್ಷದ ವ್ಯಕ್ತಿಯೂ ಸೇರಿದಂತೆ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಈತ ಆರು ವರ್ಷಗಳ ಕಾಲ ಜೈಲಲ್ಲಿದ್ದ.

ಈ ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶ ಸರಕಾರವು ಸಿಬಿಸಿಐಡಿ ಗೆ ವಹಿಸಿ ಕೊಟ್ಟಿತ್ತು.1996ರಲ್ಲಿ ಗಾಜಿಯಾಬಾದಿನ ಕ್ರಿಮಿನಲ್ ಕೋರ್ಟಿಗೆ ಚಾರ್ಜ್ ಶೀಟನ್ನು ಸಲ್ಲಿಸಲಾಗಿತ್ತು. 19 ಮಂದಿಯನ್ನು ಆರೋಪಿಗಳಾಗಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿತ್ತು. ಆಬಳಿಕ ಸುಪ್ರೀಂ ಕೋರ್ಟ್ ನ ಆದೇಶದಂತೆ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಲಾಯಿತು. ಈ ನಡುವೆ ಮೂರು ಮಂದಿ ಆರೋಪಿಗಳು ಸಾವಿಗೀಡಾಗಿದ್ದರು. ಉಳಿದವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತು. ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಯಿತು ಮತ್ತು ಹೈಕೋರ್ಟು ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿತಲ್ಲದೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಹೀಗೆ ವಿಚಾರಣೆಯ ಪ್ರಕ್ರಿಯೆ ಬಹಳ ದೀರ್ಘಕಾಲ ನಡೆದಿದ್ದರಿಂದ ಅಪರಾಧಿಗಳು ಅದಾಗಲೇ ವೃದ್ಧಾಪ್ಯಕ್ಕೆ ತಲುಪಿದ್ದರು. ಈಗ ಬಿಡುಗಡೆಗೊಳಿಸಲಾದ ಇಬ್ಬರು ಅಪರಾಧಿಗಳನ್ನು 2018ರಲ್ಲಿ ಬಂಧಿಸಿ ಜೈಲಿಗೆ ಹಾಕಲಾಗಿತ್ತು.

1987ರಲ್ಲಿ ಮೀರತ್ ನ ಹಾಶಿಂಪುರದಲ್ಲಿ ಕೋಮು ಗಲಭೆ ನಡೆದಿತ್ತು. ಇಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಮೇ 21ರಂದು ಆರ್ಮಿ ಮೇಜರ್ ಅವರ ಸಹೋದರನ ಹತ್ಯೆ ನಡೆಯಿತು. ಮಾತ್ರ ಅಲ್ಲ ಸಮಾಜಘಾತುಕರು ಪೊಲೀಸರ ಕೈಯಿಂದ ಬಂದೂಕು ಕಸಿದು ಪರಾರಿಯಾದರು.
ಇದರ ಪ್ರತೀಕಾರವೆಂಬಂತೆ ಹಾಶಿಮ್ ಪುರಕ್ಕೆ ದಾಳಿ ಇಟ್ಟ ಪೊಲೀಸರು 45 ಮಂದಿಯನ್ನು ಹೊತ್ತೊಯ್ದು ಹತ್ಯೆ ನಡೆಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ