ಹಸಿರು ಪರಿಸರಕ್ಕೆ ಅಳಿಲು ಸೇವೆ | ಜೆಸ್ಸಿ ಪಿ. ವಿ ಪುತ್ತೂರು - Mahanayaka
10:10 PM Friday 20 - September 2024

ಹಸಿರು ಪರಿಸರಕ್ಕೆ ಅಳಿಲು ಸೇವೆ | ಜೆಸ್ಸಿ ಪಿ. ವಿ ಪುತ್ತೂರು

environment day
05/06/2021

ದಿನ 1 ಸಹಜವಾದ ಮನೆಯ ಒಳಾಂಗಣ ದೃಶ್ಯ. ದಿನ 365  ಎಲ್ಲೆಂದರಲ್ಲಿ ಹಸಿರು ಗಿಡಗಳು ತುಂಬಿದ ಒಳಾಂಗಣ. ಇತ್ತೀಚೆಗೆ ವಾಟ್ಸಪ್ ನಲ್ಲಿ ಬಂದ ಚಿತ್ರವಿದು. ಇದು ನಗು ತರಿಸಬೇಕಾದ ಕಾರ್ಟೂನ್ ಅಲ್ಲ. ಚಿಂತನೆಗೆ ಹಚ್ಚಬೇಕಾದ ಚಿತ್ರ. ಇತ್ತೀಚೆಗೆ ಪ್ರಪಂಚ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲೊಂದು ಶುದ್ಧ ಗಾಳಿ. ವರ್ಷಾನುವರ್ಷ ಚಳಿಗಾಲದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ವಾಯುಮಾಲಿನ್ಯ ಅತ್ಯುಚ್ಛ ಸ್ಥಿತಿಗೆ ತಲುಪಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ಪರಿಸ್ಥಿತಿ, ಜನ ಮಾಸ್ಕ್ ಹಾಕಿ ಹೊರಹೋಗುವ ಪರಿಸ್ಥಿತಿ ಬಂದೊದಗುತ್ತಿದೆ. ವಾಯುಮಾಲಿನ್ಯದ ಭೀಕರ ಪರಿಣಾಮಗಳನ್ನು ಬೆಂಗಳೂರು ಆದಿಯಾಗಿ ಎಲ್ಲಾ ಪ್ರಮುಖ ಮಹಾನಗರಗಳೂ ಅನುಭವಿಸುತ್ತಿವೆ. ತತ್ಪರಿಣಾಮವಾಗಿ ಶ್ವಾಸಕೋಶ ಸಂಬಂಧೀ ಕಾಯಿಲೆಗಳು ಹೆಚ್ಚಾಗುತ್ತಿವೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲೇ ಶ್ವಾಸಕೋಶವನ್ನು ಹಾನಿಗೆಡವುವ ಕೋವಿಡ್-19 ಎಂಬ ಮಹಾಮಾರಿಯೂ ಲಗ್ಗೆಯಿಟ್ಟಿದೆ. ಕಲುಷಿತವಾದ ಪರಿಸರವನ್ನು ಸ್ವಚ್ಛಗೊಳಿಸುವುದು, ವಾಯುಮಾಲಿನ್ಯ ತಗ್ಗಿಸುವುದು, ಪ್ರಾಣವಾಯು ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುವುದು ಪ್ರಪಂಚದ ತುರ್ತು ಅಗತ್ಯಗಳಲ್ಲೊಂದು. ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆ, ಹೆಚ್ಚುತ್ತಲೇ ಇರುವ ವಾಹನ ದಟ್ಟಣೆ, ಹೊಸ ಹೊಸ ಕಾರ್ಖಾನೆಗಳ ಸ್ಥಾಪನೆ ವಾಯು ಶುದ್ಧವಾಗುವ ಸಾಧ್ಯತೆಯನ್ನು ಮತ್ತಷ್ಟೂ ದುರ್ಬಲಗೊಳಿಸುತ್ತಿದೆ. ವಿಶ್ವ ಭೂ ದಿನದಂದು ಜಾಲತಾಣದಲ್ಲಿ ಕಂಡ  ಮತ್ತೊಂದು ಚಿತ್ರ ನನ್ನ ಮನಸ್ಸಿಗೆ ನಾಟಿತು. ಬೆನ್ನಿಗೆ ಆಕ್ಸಿಜನ್ ಸಿಲಿಂಡರ್ ಕಟ್ಟಿಕೊಂಡ ಬಾಲಕನೊಬ್ಬ ಗಿಡ ನೆಡುತ್ತಿರುವ ಚಿತ್ರವದು. ಚಿತ್ರಗಳನ್ನು ಮೌನ ಸಂಗೀತವೆನ್ನುತ್ತಾರೆ. ಮೌನದ ಭಾಷೆಯಲ್ಲೇ ಚಿತ್ರಗಳು ಬಹಳಷ್ಟು ಮಾತನಾಡುತ್ತವೆ. ಹಲವು ಆಕ್ರಮಣಕಾರಿ ರೋಗಗಳಿಂದ ನಮ್ಮನ್ನು ರಕ್ಷಿಸಲು ನಮ್ಮ ಶ್ವಾಸಕೋಶಗಳನ್ನು ಬಲಿಷ್ಠವಾಗಿಡಲೇಬೇಕು. ಮಲಿನ ವಾಯುವನ್ನು ಉಸಿರಾಡುತ್ತಾ ಹೋದಂತೆ ನಮ್ಮ ಶ್ವಾಸಕೋಶ ದುರ್ಬಲವಾಗುತ್ತಾ ಹೋಗುತ್ತದೆ. ನಮ್ಮ ಶ್ವಾಸಕೋಶಗಳ ಸುಸ್ಥಿತಿಗಾಗಿ, ತನ್ಮೂಲಕ ನಮ್ಮ ಶರೀರದ ಆರೋಗ್ಯಕ್ಕಾಗಿ ಒಂದಷ್ಟು ಶುದ್ಧಗಾಳಿಯನ್ನು ನಾವೇ ಉತ್ಪಾದಿಸಿದರೆ ಹೇಗೆ?

ಸಸ್ಯಗಳೆಂಬ  ಆಮ್ಲಜನಕದ ಕಾರ್ಖಾನೆಗಳು:

ಭೂಮಿಯಲ್ಲಿನ ಆಮ್ಲಜನಕವನ್ನು ಬಳಸಿ ಬದುಕುವ ಜೀವಿಗಳಿಂದಾಗಿ ಭೂಮಿಯ ಆಮ್ಲಜನಕ ಬರಿದಾಗದಿರಲೆಂದು ದೇವರು ಆ ಜೀವಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಸ್ಯಗಳನ್ನು ಸೃಷ್ಟಿಸಿದರು. ಸಸ್ಯಗಳೂ ಆಮ್ಲಜನಕವನ್ನು ಉಸಿರಾಟಕ್ಕೆ ಬಳಸುತ್ತವೆ. ಆದರೆ ಅವುಗಳ ಆಹಾರ ತಯಾರಿಕೆ(ದ್ಯುತಿ ಸಂಶ್ಲೇಷಣೆ) ಕ್ರಿಯೆಯಲ್ಲಿ ಉಪ ಉತ್ಪನ್ನವಾಗಿ ಆಮ್ಲಜನಕ ಬಿಡುಗಡೆಯಾಗುತ್ತದೆ. ಪ್ರಪಂಚದಲ್ಲಿರುವ ಸಸ್ಯಗಳಲ್ಲಿ ಎಲ್ಲವೂ ಆಮ್ಲಜನಕವನ್ನು ಉತ್ಪಾದಿಸುತ್ತವೆಯಾದರೂ ಕೆಲವು ಸಸ್ಯಗಳು ಉಳಿದವುಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತವೆ. ಅಂತಹ ಸಸ್ಯಗಳನ್ನು ನಮ್ಮ ಮನೆಯ ಪರಿಸರದಲ್ಲಿ ಹೆಚ್ಚು ಹೆಚ್ಚಾಗಿ ನೆಟ್ಟು ಬೆಳೆಸಬೇಕು. ಹಿಂದಿನ ಕಾಲದಲ್ಲಿ ಪ್ರತಿಯೊಂದು ಊರಲ್ಲೂ ಕನಿಷ್ಠ ಒಂದಾದರೂ ಅರಳಿ ಮರ, ಅದರ ಸುತ್ತ ಒಂದು ಕಟ್ಟೆ ಇರುತ್ತಿತ್ತು. ಊರ ಪಂಚಾಯತಿ ಅದರ ಕೆಳಗೆ ಸೇರುತ್ತಿತ್ತು. ಆ ಮರ ಅತ್ಯಧಿಕ ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತದೆಯೆಂಬುದು ಅನಕ್ಷರಸ್ಥರಾದ ನಮ್ಮ ಪೂರ್ವಿಕರಿಗೆ ಹೇಗೋ ತಿಳಿದಿತ್ತು. ಇಂದು ರಸ್ತೆ ಅಗಲೀಕರಣ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳ ಹೆಸರಲ್ಲಿ ಈ ಅರಳಿಮರದ ಕಟ್ಟೆಗಳು ನಾಶವಾಗಿವೆ. ಟನ್ ಗಟ್ಟಲೆ ಆಮ್ಲಜನಕ ದಿನವೂ ಅದರಿಂದ ನಷ್ಟವಾಗಿದೆಯೆಂಬ ಘೋರ ಸತ್ಯವಂತೂ ಅಭಿವೃದ್ಧಿಯ ಜಪ ಮಾಡುವ ನಮಗೆ ಬೇಕಿಲ್ಲ.


Provided by

ಲಾಕ್ ಡೌನ್ ಮತ್ತು ಗಾರ್ಡನಿಂಗ್:

ಕಳೆದ ಲಾಕ್ ಡೌನ್ ಸಮಯದಲ್ಲಿ ಅನೇಕರು ತಮ್ಮ ಮನೆಯೆದುರು ಚಂದದ ಹೂತೋಟ ನಿರ್ಮಿಸಿಕೊಂಡರು. ಪರಿಸರ ಪ್ರಜ್ಞೆಯಿಂದ ಹೀಗೆ ಮಾಡಿದವರು ವಿರಳ.  ಆದರೂ ಇದು ಕೂಡಾ ಪರಿಸರದ ಆಮ್ಲಜನಕದ ಪ್ರಮಾಣ ಏರುವಲ್ಲಿ ಅತಿ ಸಣ್ಣ ಮಟ್ಟಿನಲ್ಲಾದರೂ ಸಹಕರಿಸುತ್ತಿದೆ ಎಂಬುದಂತೂ ಸತ್ಯ. ಮನೆಯ ಅಂಗಳಕ್ಕೆಲ್ಲಾ ಇಂಟರ್ ಲಾಕ್ ಹಾಕಿದ್ದೇವೆ. ಮನೆ ಹಾಗೂ ಅಂಗಳದ ಹೊರತಾಗಿ ಬೇರೆ ಜಾಗವಾಗ ತಮಗಿಲ್ಲ, ಎತ್ತರದ ಬಹುಮಹಡಿ ಕಟ್ಟಡದ ಫ್ಲಾಟ್ ಗಳಲ್ಲಿ ವಾಸಿಸುತ್ತಿದ್ದೇವೆ. ಅಂಗಳವೇ ಇಲ್ಲ ಎಂದು ಹಸಿರನ್ನೇ ಮರೆಯುವವರಿದ್ದಾರೆ. ಆದರೆ ಗಿಡ ನೆಡಲು ಮಣ್ಣಿನ ನೆಲವೇ ಬೇಕಿಲ್ಲ. ಗ್ರೋ ಬ್ಯಾಗ್ ಗಳಲ್ಲಿ, ಮಣ್ಣು/ ಸಿಮೆಂಟ್/ ಪ್ಲಾಸ್ಟಿಕ್ ಪಾಟ್ ಗಳಲ್ಲಿ ಗಿಡಗಳನ್ನು ಬೆಳೆಸಬಹುದು. ಈ ಪಾಟ್ ಗಳನ್ನು ಇಂಟರ್ ಲಾಕ್ ಮೇಲೂ ಇಡಬಹುದು. ಕಾಂಪೌಂಡ್ ಗೋಡೆಯ ಮೇಲೂ ಇಡಬಹುದು. ಫ್ಲಾಟ್ ನ ಬಾಲ್ಕನಿಯಲ್ಲೂ ಇಡಬಹುದು. ಟೆರೆಸಲ್ಲೂ ಇಡಬಹುದು. ಮನೆಯ  ಸಿಟೌಟಲ್ಲೂ ಹಾಲ್ ನಲ್ಲೂ ಬೆಡ್ ರೂಮ್ ನಲ್ಲೂ ಕಿಚನ್ ನಲ್ಲೂ ಗಿಡದ ಪಾಟ್ ಗಳನ್ನಿಡಬಹುದು.

ಒಳಾಂಗಣ ಗಿಡಗಳ ಆಯ್ಕೆ ಹೇಗೆ?

ಬಿಸಿಲಿಲ್ಲದೇ ಗಿಡ ಬೆಳೆಯುತ್ತವೆಯೇ? ಒಳಾಂಗಣದಲ್ಲಿ ಎಲ್ಲಿದೆ ಬಿಸಿಲು? ಪಾಟ್ ಗಳನ್ನು ಒಳಗಿಟ್ಟು ನೀರು ಹಾಕಿ ಗಿಡ ಬೆಳೆಸುವಾಗ ನೆಲವೆಲ್ಲಾ ಹಾಳಾಗದೇ? ಒಳಾಂಗಣಕ್ಕೆ ಸೂಕ್ತವಾದ ಗಿಡಗಳು ಯಾವುವು? ಇತ್ಯಾದಿ ನೂರೆಂಟು ಪ್ರಶ್ನೆಗಳು ನಿಮ್ಮಲ್ಲಿರಬಹುದು. ಹೊರಗೆ ಬಿಸಿಲಿನಲ್ಲಿ, ಮಣ್ಣಿನಲ್ಲಿ ಬೆಳೆಯುವ ಎಲ್ಲಾ ಗಿಡಗಳೂ ಒಳಾಂಗಣದಲ್ಲಿ ಬೆಳೆಯಲಾರವು. ಕಡಿಮೆ ಬೆಳಕಿನಲ್ಲಿ ಬೆಳೆಯುವ, ಕಡಿಮೆ ಬೆಳಕು ಅಥವಾ ನೆರಳನ್ನೇ ಬಯಸುವ ಗಿಡಗಳು ಹಲವುದಿದೆ. ಅವನ್ನು ಒಳಾಂಗಣದಲ್ಲಿ ಬೆಳೆಸಬಹುದು. ಪೀಸ್ ಲಿಲ್ಲಿ ಎಂಬ ಗಾಢ ಹಸಿರು ವರ್ಣದ ಎಲೆಯ ಬಿಳಿ ಹೂ ಬಿಡುವ ಗಿಡ ಅತ್ಯಂತ ಸುಂದರವಾದೊಂದು ಒಳಾಂಗಣ ಹೂಬಿಡುವ ಸಸ್ಯ. ಹಾಗೆಯೇ ಆಂಥೂರಿಯಂ ಗಿಡಗಳು ಸಹಾ ಬಹಳ ಕಾಲ ಬಾಳಿಕೆ ಬರುವ/ ತಾಜಾ ಆಗಿ ಉಳಿಯುವ ಹೂಗಳನ್ನು ಹೊಂದಿರುವ ಸಸ್ಯ. ಸಿಂಗೋನಿಯಂ ಅಥವಾ ಆ್ಯರೋಹೆಡ್ ಪ್ಲಾಂಟ್, ಅಲೋಕೇಶಿಯಾ, ಸ್ನೇಕ್ ಪ್ಲಾಂಟ್, ಅರೆಕ್ಯಾ ಪಾಮ್, ರಬ್ಬರ್ ಪ್ಲಾಂಟ್, ಝೀ ಝೀ ಪ್ಲಾಂಟ್, ಮನಿಪ್ಲಾಂಟ್, ಲಕ್ಕಿ ಬ್ಯಾಂಬೂ ಇತ್ಯಾದಿಗಳು ಅತ್ಯುತ್ತಮ ಒಳಾಂಗಣ ಸಸ್ಯಗಳು.  ಸ್ಪೈಡರ್ ಪ್ಲಾಂಟ್, ಟರ್ಟಲ್ ವೈನ್, ಇಂಗ್ಲಿಷ್ ಐವಿ, ಮನಿಪ್ಲಾಂಟ್ ಇತ್ಯಾದಿ ಹ್ಯಾಂಗಿಂಗ್ ಪ್ಲಾಂಟ್ ಗಳನ್ನೂ ಒಳಾಂಗಣದಲ್ಲಿ ಬೆಳೆಸಬಹುದು. ಖಾಲಿ ಬಾಟಲ್ ಗಳಲ್ಲಿ ನೀರು ತುಂಬಿಸಿ ಅದರಲ್ಲಿ ಮನಿಪ್ಲಾಂಟ್, ಸಿಂಗೋನಿಯಂ, ಕೆಲವು ರೀತಿಯ ಕ್ರಾಟನ್ ಗಿಡಗಳ ಗೆಲ್ಲುಗಳನ್ನಿಟ್ಟರೆ ಅವು ಅಲ್ಲಿ ಬೇರು ಬಿಟ್ಟು ಚಿಗುರಿ ಚೆನ್ನಾಗಿ ಬೆಳೆಯುತ್ತವೆ. ಡೈನಿಂಗ್ ಟೇಬಲ್, ಟೀಪಾಯ್, ಫ್ರಿಜ್, ವಾಷಿಂಗ್ ಮೆಷಿನ್, ಸ್ಟಡಿ ಟೇಬಲ್, ಬೆಡ್ ಸೈಡ್ ಟೇಬಲ್, ಕಿಟಕಿಗಳು, ಅಡುಗೆ ಮನೆಯ ಕೌಂಟರ್ ಟಾಪ್, ಮಹಡಿಯ ಮೆಟ್ಟಿಲುಗಳು ಹೀಗೆ ಎಲ್ಲೆಂದರಲ್ಲಿ ನೀವು ಗಿಡಗಳನ್ನು ನಿಮ್ಮ ಕಲ್ಪನೆಗನುಸಾರ ಅಂದವಾಗಿ ಜೋಡಿಸಬಹುದು. ಮಾರುಕಟ್ಟೆಯಲ್ಲಿ ಒಳಾಂಗಣ ಗಿಡಗಳಿಗೆಂದೇ ಸೆರಾಮಿಕ್, ಮೆಟಲ್ ಹಾಗೂ ಫೈಬರ್‌ನ ಅಂದವಾದ ವಿನ್ಯಾಸ ಹಾಗೂ ಬಣ್ಣಗಳ ಪಾಟ್ ಗಳು ಲಭ್ಯವಿದೆ. ನೀರನ್ನೇ ಬಯಸದ ಕ್ಯಾಕ್ಟಸ್ ಜಾತಿಯ ಸುಂದರ ಹಾಗೂ ವೈವಿಧ್ಯಮಯ ಗಿಡಗಳು, ಮಣ್ಣು- ನೀರು  ಏನೂ ಬೇಡದ, ದಾರದಲ್ಲಿ ಸುಮ್ಮನೆ ನೇತುಹಾಕಿ ಬೆಳೆಸಬಹುದಾದ ಏರ್ ಪ್ಲಾಂಟ್ (ಗಾಳಿ ಗಿಡಗಳು), ಗಾಳಿಯ ತೇವಾಂಶ ಹೀರಿ ಬದುಕುವ ಸಕ್ಕಲೆಂಟ್ ಗಳು ಇತ್ಯಾದಿ ಅತಿ ಸುಂದರವಾದ  ಸಸ್ಯಗಳು ಮನೆಯ ಒಳಾಂಗಣವನ್ನು ಸುಂದರವಾಗಿಡುವುದಷ್ಟೇ ಅಲ್ಲ, ಒಳಗಿನ ಗಾಳಿಯಲ್ಲಿರಬಹುದಾದ ಮಾಲಿನ್ಯಗಳನ್ನು ಹೀರಿ ಶುದ್ಧಗಾಳಿಯನ್ನು ತುಂಬಿಸುತ್ತವೆ.

ಒಳಾಂಗಣ ಗಿಡಗಳಲ್ಲಿ ಕೆಲವನ್ನು ಏರ್ ಪ್ಯೂರಿಫೈಯರ್ಸ್ ಎನ್ನುತ್ತಾರೆ. ಸ್ನೇಕ್ ಪ್ಲಾಂಟ್, ಅಲೋವೆರಾ ಇತ್ಯಾದಿ ಗಿಡಗಳು ಆ ಗುಂಪಿಗೆ ಸೇರಿವೆ. ಸ್ನೇಕ್ ಪ್ಲಾಂಟ್ ಗಳನ್ನು ಬೆಡ್ ರೂಮ್ ನಲ್ಲಿಡುವುದು ಉಸಿರಾಟದ ಸಮಸ್ಯೆ ಇರುವವರಿಗೆ ಒಳ್ಳೆಯದೆನ್ನುತ್ತಾರೆ ತಜ್ಞರು. ಈ ಲಾಕ್ ಡೌನ್ ಅವಧಿಯಲ್ಲಿ ನಮಗೆ ಪುಕ್ಕಟೆಯಾಗಿ ಸಿಕ್ಕಿರುವ ಧಾರಾಳ ಸಮಯವನ್ನು ಗಿಡ ನೆಡುವ ಕಾರ್ಯದ ಮೂಲಕ ಸದುಪಯೋಗಪಡಿಸೋಣ. ಗಿಡ ನೆಡಲು ನೆಲ ಬೇಡ. ಮನಸ್ಸೊಂದೇ ಸಾಕು.

  • ಜೆಸ್ಸಿ ಪಿ. ವಿ ಪುತ್ತೂರು

ಇತ್ತೀಚಿನ ಸುದ್ದಿ