“ಹಸಿವಾಗ್ತಿದೆ, ಅಪ್ಪ ನಮ್ಮೊಂದಿಗೆ ಮಾತನಾಡುತ್ತಿಲ್ಲ” ಎಂದ ಮಕ್ಕಳು | ಮನೆಗೆ ಹೋಗಿ ನೋಡಿದಾಗ ಕಾದಿತ್ತು ಶಾಕ್!
ಬರೇಲಿ: ಅಪ್ಪ, ನಮ್ಮ ಜೊತೆಗೆ ಮಾತನಾಡುತ್ತಿಲ್ಲ, ಹಸಿವಾಗ್ತಿದೆ ಊಟ ಕೊಡಿ ಎಂದು ನೆರೆಯ ಮನೆಗೆ 6 ಮತ್ತು 4 ವರ್ಷದ ಮಕ್ಕಳು ಬಂದು ಕೇಳಿದ್ದು, ಇದರಿಂದ ಅನುಮಾನಗೊಂಡು ಮನೆಗೆ ಹೋಗಿ ನೋಡುವಾಗ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ.
ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ತಮ್ಮ ತಂದೆಯ ಮೃತದೇಹದ ಜೊತೆಗೆ ಎರಡು ದಿನ ಕಳೆದ ಘಟನೆಯೊಂದು ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು, 6 ಹಾಗೂ 4 ವರ್ಷ ವಯಸ್ಸಿ ಈ ಇಬ್ಬರು ಮಕ್ಕಳ ಸ್ಥಿತಿ ಕಂಡು ಜನರು ಮರುಗಿದ್ದಾರೆ.
ನೋಯ್ಡಾದಲ್ಲ ಕೆಲಸ ಮಾಡುತ್ತಿದ್ದ 32 ವರ್ಷ ವಯಸ್ಸಿನ ಮನೋಜ್ ದಯಾಳ್ ಅವರು ಆತ್ಮಹತ್ಯೆ ಮಾಡಿಕೊಂಡಿರುವವರಾಗಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇವರ ಪತ್ನಿ, ಪತಿಯನ್ನು ಬಿಟ್ಟು ತವರಿಗೆ ಹೋಗಿದ್ದರು. ಆ ಬಳಿಕ ಮಕ್ಕಳು ತಮ್ಮ ತಂದೆಯ ಜೊತೆಗೆ ವಾಸಿಸುತ್ತಿದ್ದರು. ಲಾಕ್ ಡೌನ್ ಜಾರಿಯಾಗಿದ್ದರಿಂದಾಗಿ ಮನೋಜ್ ದಯಾಳ್ ತಮ್ಮ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಈ ನಡುವೆ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಂದೆ ಮೃತಪಟ್ಟಿರುವ ವಿಚಾರ ಮುಗ್ಧ ಮಕ್ಕಳಿಗೆ ತಿಳಿದಿಲ್ಲ. ಹೀಗಾಗಿ ಹಸಿವಾದಾಗ ತಂದೆಯ ಮೃತದೇಹದ ಬಳಿಯಲ್ಲಿ ಊಟ ಬೇಕೆಂದು ಕೇಳಿದರೂ ತಂದೆ ಮಾತನಾಡುತ್ತಿರಲಿಲ್ಲ. ಹಸಿವು ತಡೆಯಲಾಗದಿದ್ದಾಗ ಪಕ್ಕದ ಮನೆಗೆ ಹೋಗಿ ಏನಾದರೂ ತಿಂದು ಬರುತ್ತಿದ್ದರು.
ಮೊದಲ ದಿನ ಪಕ್ಕದ ಮನೆಯವರಿಗೆ ಅನುಮಾನ ಬಂದಿರಲಿಲ್ಲ, ಆದರೆ ಎರಡನೇ ದಿನವೂ ಮಕ್ಕಳು ಮೂರು ಹೊತ್ತಿನ ಊಟಕ್ಕೂ ತಮ್ಮ ಮನೆಗೆ ಮಕ್ಕಳು ಬರುತ್ತಿರುವುದನ್ನು ಕಂಡು ಅನುಮಾನಗೊಂಡ ನೆರೆಯವರು, ಮನೆಯಲ್ಲಿ ಊಟ ಮಾಡುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಆಗ “ನಮಗೆ ಹಸಿವಾಗ್ತಿದೆ, ಅಪ್ಪ ನಮ್ಮ ಜೊತೆ ಮಾತನಾಡುತ್ತಿಲ್ಲ”ಎಂದು ಮಕ್ಕಳು ಉತ್ತರಿಸಿದ್ದಾರೆ. ಏನೋ ಅನಾಹುತ ನಡೆದಿದೆ ಎನ್ನುವ ಶಂಕೆಯಿಂದ ನೆರೆಯವರು ಹೋಗಿ ಪರಿಶೀಲಿಸಿದಾಗ ಮನೋಜ್ ದಯಾಳ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ.
ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಇಬ್ಬರು ಮಕ್ಕಳನ್ನು ಮನೋಜ್ ದಯಾಳ್ ನ ತಮ್ಮನ ಆಶ್ರಯಕ್ಕೆ ನೀಡಲಾಗಿದೆ. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲವಾದರೂ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.