ಹಸಿವು ನೀಗಿಸಲು ಕೂದಲನ್ನೇ ತಿಂದ ಬಾಲಕಿ | ಹೊಟ್ಟೆಯಲ್ಲಿ ಶೇಖರಣೆಯಾಗಿತ್ತು 2 ಕೆಜಿ ಕೂದಲು
ಹೈದರಾಬಾದ್: ಹಸಿವು ತಾಳಲಾರದೇ ಕಳೆದ 5 ತಿಂಗಳಿನಿಂದ 17 ವರ್ಷದ ಯುವತಿ ತನ್ನ ತಲೆಕೂದಲನ್ನೇ ತಿಂದ ಘಟನೆ ನಡೆದಿದ್ದು, ಹೀಗೆ ತಿಂದ ತಲೆಗೂದಲು ಬರೋಬ್ಬರಿ 2 ಕೆ.ಜಿ.ಗಳಷ್ಟು ಹೊಟ್ಟೆಯಲ್ಲಿ ಶೇಖರಣೆಯಾಗಿದ್ದು, ಇದೀಗ ತೆಲಂಗಾಣದ ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ನಡೆಸಿ ಕೂದಲು ಹೊರ ತೆಗೆದಿದ್ದಾರೆ.
ಹೈದರಾಬಾದ್ ನ ಶಂಶಾಬಾದ್ ಮೂಲದ ಈ ಹುಡುಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಹಸಿವನ್ನು ನೀಗಿಸಲು ತನ್ನ ಕೂದಲನ್ನೇ ಸೇವಿಸುತ್ತಾ ಬಂದಿದ್ದಳು ಎಂದು ಹೇಳಲಾಗಿದೆ. ಹೀಗೆ ಸೇವಿಸಿದ್ದ ಕೂದಲು ಹೊಟ್ಟೆ ಹಾಗೂ ಸಣ್ಣ ಕರುಳಿನಲ್ಲಿ ಶೇಖರಣೆಯಾಗಿತ್ತು.
ಒಂದು ತಿಂಗಳ ಹಿಂದೆ ಬಾಲಕಿಯು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದಾಗ ಈ ವಿಚಾರ ಬೆಳಕಿಗೆ ಬಂದಿದೆ. ಬಾಲಕಿ ಚಿಕಿತ್ಸೆಗೆ ಆಗಮಿಸಿದ್ದ ವೇಳೆ ಆಕೆಗೆ ಕೊರೊನಾ ಪಾಸಿಟಿವ್ ಕೂಡ ಇದ್ದುದರಿಂದ ಮೊದಲು ಕೊರೊನಾಕ್ಕೆ ಚಿಕಿತ್ಸೆ ನೀಡಲಾಗಿದ್ದು, ಆ ಬಳಿಕ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಬಾಲಕಿಯ ಹೊಟ್ಟೆಯಿಂದ 2 ಕೆ.ಜಿಗಳಷ್ಟು ಕೂದಲನ್ನು ಹೊರತೆಗೆಯಲಾಗಿದೆ.
ಉಸ್ಮಾನಿಯ ಆಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದರ್ ಬಿ. ಅವರನ್ನೊಳಗೊಂಡ ವೈದ್ಯರ ತಂಡವು ಈ ಶಸ್ತ್ರ ಚಿಕಿತ್ಸೆ ನಡೆಸಿದ್ದು, 150 ಸೆಂ.ಮೀ. ಉದ್ದದ 2 ಕೆಜಿಗಳಷ್ಟು ಕೂದಲನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.