ರೇಖಾ ಕದಿರೇಶ್ ಅವರನ್ನು ಕೊಲೆ ಮಾಡಿದ್ದೇಕೆ? | ಆರೋಪಿಗಳು ಬಾಯ್ಬಿಟ್ಟಿದ್ದೇನು?
ಬೆಂಗಳೂರು: ಛಲವಾದಿಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿಗಳು ಹತ್ಯೆಗೀಡಾಗಿರುವ ರೇಖಾ ವಿರುದ್ಧವೇ ಗಂಭೀರವಾದ ಆರೋಪವನ್ನು ಮಾಡಿದ್ದಾರೆ ಎಂದು ವರದಿಯಾಗಿದೆ.
ರೇಖಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದೆ. ಪುರುಷೋತ್ತಮ್, ಪೀಟರ್, ಸೂರ್ಯ, ಸ್ಟೀಫನ್ ಬಂಧಿತ ಆರೋಪಿಗಳಾಗಿದ್ದು, ಇವರ ಜೊತೆಗೆ ಅರುಳ್ ಎಂಬಾತನ ಬಂಧನವಾಗಿದೆ ಎಂದು ಹೇಳಲಾಗಿದ್ದರೂ ಈ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿಲ್ಲವೆಂದು ತಿಳಿದು ಬಂದಿದೆ.
2018ರ ಫೆ.8ರಂದು ರೇಖಾ ಪತಿ ಕದಿರೇಶ್ ಹತ್ಯೆಯಾಗಿತ್ತು. ಕದಿರೇಶ್ ಅವರನ್ನು ಶೋಭನ್ ಮತ್ತು ಗ್ಯಾಂಗ್ ಕೊಲೆ ಮಾಡಿತ್ತು. ಈ ಕೊಲೆಗೆ ಪತ್ನಿ ರೇಖಾ ಕೈ ಜೋಡಿಸಿದ್ದಾರೆ. ನಮ್ಮನ್ನು ಕದಿರೇಶ್ ಅವರು ಮಕ್ಕಳಂತೆ ನೋಡುತ್ತಿದ್ದರು. ಅವರ ಜೊತೆಗೆ ನಾವು ಕೆಲಸ ಮಾಡುತ್ತಿದ್ದೆವು. ಆದರೆ, ರೇಖಾ ಸರಿಯಾಗಿ ನಮ್ಮನ್ನು ಗಮನಿಸುತ್ತಲೇ ಇರಲಿಲ್ಲ. ಕದಿರೇಶ್ ಕೊಲೆಗೆ ಸೇಡು ತೀರಿಸಿಕೊಳ್ಳಲು ನಾವು ರೇಖಾ ಅವರನ್ನು ಹತ್ಯೆ ಮಾಡಿದ್ದೇವೆ ಎಂದು ಆರೋಪಿಗಳು ಹೇಳಿರುವುದಾಗಿ ವರದಿಯಾಗಿದೆ.
ಇನ್ನೂ ಆರೋಪಿಗಳಾದ ಪೀಟರ್ ಮತ್ತು ಸೂರ್ಯಗೆ ಮಾಲ ಹಾಗೂ ಆಕೆಯ ಪುತ್ರ ಅರುಳ್ ನಿಕಟ ಸಂಪರ್ಕ ಹೊಂದಿದ್ದರು. ಇವರು ಆರೋಪಿಗಳ ಬ್ರೈನ್ ವಾಶ್ ಮಾಡಿ ಕೊಲೆಗೆ ಸಾಥ್ ನೀಡಿರಬಹುದು ಎನ್ನುವ ಅನುಮಾನಗಳು ಕೂಡ ಇವೆ ಎಂದು ಹೇಳಲಾಗಿದೆ. ಸದ್ಯ ಈ ಪ್ರಕರಣದ ತನಿಖೆಯನ್ನು ಪೊಲೀಸರು ಬಿರುಸುಗೊಳಿಸಿದ್ದಾರೆ. ಪೊಲೀಸರ ತನಿಖೆಯಿಂದ ಇನ್ನಷ್ಟು ಸತ್ಯಾಂಶಗಳು ಹೊರ ಬರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.