ಪೊಲೀಸ್ ಅಧಿಕಾರಿಗಳಿಗೆ ನೇರ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ
![kumaraswamy](https://www.mahanayaka.in/wp-content/uploads/2023/04/kumaraswamy.jpg)
ಬೆಂಗಳೂರು: ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಗೂ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗುವವರ ವಿರುದ್ಧ ಪೊಲೀಸರ ದೌರ್ಜನ್ಯ ಮಿತಿಮೀರಿದೆ. ಇದಕ್ಕೆ ಕಡಿವಾಣ ಹಾಕಿಕೊಳ್ಳದಿದ್ದರೆ ಪಶ್ಚಾತ್ತಾಪ ಅನುಭವಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಎಚ್ಚರಿಕೆ ನೀಡಿದರು.
ಯಲಹಂಕ ನ್ಯೂ ಟೌನ್ ಸೇರಿದಂತೆ ಕ್ಷೇತ್ರದ ಹಲವಾರು ಕಡೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ, ಪೊಲೀಸ್ ಇಲಾಖೆಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಯಲಹಂಕದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡುವ ಕೆಲಸ ಆಗುತ್ತಿದೆ. ಅನ್ಯ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಸೇರಲು ಬರುವ ಮುಖಂಡರು, ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗುತ್ತಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಈ ಅಧಿಕಾರಿಗಳಿಗೆ ಹೇಳಲು ಬಯಸುತ್ತೇನೆ, ನೀವು ಪ್ರತಿ ತಿಂಗಳು ಸಂಬಳ ಪಡೆಯುವುದು ಜನರ ತೆರಿಗೆ ದುಡ್ಡಿನಿಂದ. ನೀವು ಅವರ ಸೇವೆ ಮಾಡಬೇಕೆ ವಿನಾ ಯಾರೋ ಶಾಸಕ ಹೇಳಿದಕ್ಕೆಲ್ಲ ತಲೆ ಆಡಿಸುವುದಲ್ಲ. ಇನ್ನೂ ಒಂದೇ ತಿಂಗಳು, ಆಗ ಈ ಸರಕಾರ ಇರಲ್ಲ. ಆಗ ನೀವು ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕರ್ತರು, ಮುಖಂಡರು ಹೆದರಬೇಕಿಲ್ಲ, ಯಾವುದೇ ಸಂದರ್ಭ ಬಂದರೂ ನೇರವಾಗಿ ನನ್ನನ್ನು ಸಂಪರ್ಕ ಮಾಡಬಹುದು ಎಂದು ಕುಮಾರಸ್ವಾಮಿ ಅವರು ದೈರ್ಯ ತುಂಬಿದರು.
ನನಗೆ ದ್ವೇಷದ ರಾಜಕಾರಣ ಮಾಡಿ ಗೊತ್ತಿಲ್ಲ. ಎಲ್ಲರೂ ಸುಖ ಶಾಂತಿಯಿಂದ ಇರಬೇಕು ಎಂದು ಬಯಸುವವನು. ಹೀಗಾಗಿ ಇಂಥ ಆಡಳಿತ ಬೇಕು ಎನ್ನುವುದನ್ನು ಜನರೇ ತೀರ್ಮಾನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಯೋಜನೆಗಳ ಹೆಸರಿನಲ್ಲಿ ಲೂಟಿ:
ಬೆಂಗಳೂರಿನಲ್ಲಿ ಯೋಜನೆಗಳ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ. ಜನರ ತೆರಿಗೆ ಹಣವನ್ನು ಹೊಡೆದುಕೊಳ್ಳುತ್ತಿದ್ದಾರೆ. ಜೆಡಿಎಸ್ ಸರಕಾರ ಬಂದರೆ ಇದಕ್ಕೆಲ್ಲಾ ಇತಿಶ್ರೀ ಹಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ರಾಜಧಾನಿ ಬೆಂಗಳೂರಿನಲ್ಲಿ ಬಡವರಿಗೆ ಉಚಿತ ಮನೆ, ಉಚಿತ ಆರೋಗ್ಯ, ಅವರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಲಾಗುವುದು. ಸಾಮಾನ್ಯವಾಗಿ ಬಡ ಮಧ್ಯಮ ವರ್ಗದ ಜನರು ಸಾಲ ಮಾಡುವುದೇ ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಮನೆ ಕಟ್ಟುವುದಕ್ಕಾಗಿ. ಮುಂದೆ ಇವರು ಶಾಶ್ವತವಾಗಿ ಸಾಲ ಮಾಡುವುದನ್ನು ತಪ್ಪಿಸುವುದೇ ನನ್ನ ಉದ್ದೇಶ ಎಂದರು ಅವರು.
ಕ್ಷೇತ್ರದ ಅಭ್ಯರ್ಥಿ ಮುನೇಗೌಡ, ಮಾಜಿ ಶಾಸಕ ಇ ಕೃಷ್ಣಪ್ಪ, ಪಕ್ಷದ ಯಲಹಂಕ ಕ್ಷೇತ್ರದ ಅಧ್ಯಕ್ಷ ಕೃಷ್ಣಪ್ಪ, ಪಕ್ಷದ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್ ಮುಂತಾದವರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw