ಅವನಿಗೆ ಜಾತಿ ಮೇಲಿರುವ ಪ್ರೀತಿ ಮಗಳ ಮೇಲಿರಲಿಲ್ಲ: ಬೇರೆ ಜಾತಿಯವನನ್ನು ಪ್ರೀತಿಸಿದ್ದಕ್ಕೆ ಮಗಳ ಬರ್ಬರ ಹತ್ಯೆ
ಆಂಧ್ರಪ್ರದೇಶ: ಆ ಪಾಪಿ ತಂದೆಗೆ ತನ್ನ ಜಾತಿಯ ಮೇಲೆ, ತನ್ನ ಪ್ರತಿಷ್ಠೆಯ ಮೇಲಿರುವ ಪ್ರೀತಿ, ತನ್ನ ರಕ್ತವಾಗಿರುವ ಮಗಳ ಮೇಲಿರಲಿಲ್ಲ, ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಅನ್ನೋ ಒಂದೇ ಕಾರಣಕ್ಕೆ ಮಗಳ ರುಂಡವನ್ನೇ ಕತ್ತರಿಸಿರುವ ಪಾಪಿ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಈ ಘಟನೆ ನಡೆದಿರೋದು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಾಣ್ಯ ಮಂಡಲದಲ್ಲಿ. ಪ್ರಸನ್ನ(21) ತನ್ನ ತಂದೆಯಿಂದಲೇ ಹತ್ಯೆಗೀಡಾದ ಪುತ್ರಿಯಾಗಿದ್ದಾಳೆ. ದೇವೇಂದ್ರ ರೆಡ್ಡಿ ಎಂಬಾತ ಮಗಳನ್ನು ಹತ್ಯೆ ಮಾಡಿದ ಪಾಪಿ ತಂದೆಯಾಗಿದ್ದಾನೆ.
ಪ್ರಸನ್ನಗೆ ಎರಡು ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು. ಆದರೆ ಮದುವೆಗೂ ಮುನ್ನ ಆಕೆಗೆ ಬೇರೆ ಜಾತಿಯ ಯುವಕನೊಂದಿಗೆ ಪ್ರೇಮ ಇತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಆಕೆಗೆ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬನ ಜೊತೆಗೆ ಬಲವಂತವಾಗಿ ತಂದೆ ಮದುವೆ ಮಾಡಿಸಿದ್ದ. ಮದುವೆಯ ಬಳಿಕ ಪ್ರಸನ್ನ ಹೈದರಾಬಾದ್ ನಲ್ಲಿ ವಾಸಿಸುತ್ತಿದ್ದರು.
ಇತ್ತ ಮದುವೆಯಾದರೂ ಪ್ರಸನ್ನಗೆ ತಾನು ಪ್ರೀತಿಸಿದ ಯುವಕನನ್ನು ಮರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಎರಡು ವರ್ಷ ಬಳಿಕ ಊರಿಗೆ ಮರಳಿದ ಆಕೆ, ತಾನು ಮೊದಲು ಪ್ರೀತಿಸಿದ್ದ ಯುವಕನ ಸ್ನೇಹ ಬೆಳೆಸಿದ್ದಳು. ಅತ್ತ ತಂದೆ ಹೈದರಾಬಾದ್ ಗೆ ಹೋಗು ಎಂದರೂ ಹೋಗದೇ ಇದ್ದಾಗ, ತಂದೆಗೆ ಕೋಪ ಬಂದಿತ್ತು. ಮದುವೆಯಾದ ಬಳಿಕವೂ ಬೇರೆ ಜಾತಿಯ ಪ್ರಿಯಕರನೊಂದಿಗೆ ಮಗಳು ಹೋದರೆ, ತನ್ನ ಮರ್ಯಾದೆಗೆ ತೊಂದರೆಯಾಗುತ್ತದೆ ಎಂದು ಯೋಚಿಸಿದ ತಂದೆ ದೇವೇಂದ್ರ ರೆಡ್ಡಿ, ಮಗಳನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದಾನೆ.
ಫೆಬ್ರವರಿ 10ರಂದು ಮಗಳನ್ನು ಮನೆಯಲ್ಲೇ ನಿರ್ದಾಕ್ಷಿಣ್ಯವಾಗಿ ಕತ್ತು ಹಿಸುಕಿ ಕೊಂದು ದೇಹದಿಂದ ರುಂಡವನ್ನು ಕತ್ತರಿಸಿ, ನಂದ್ಯಾಲ—ಗಿದ್ದಲೂರು ಮಾರ್ಗದ ಅರಣ್ಯ ಪ್ರದೇಶದ ವಿವಿಧ ಜಾಗಗಳಲ್ಲಿ ಎಸೆದು, ಏನೂ ನಡೆದಿಲ್ಲ ಎಂಬಂತೆ ಮನೆಗೆ ಮರಳಿದ್ದನು.
ದೇವೇಂದ್ರ ರೆಡ್ಡಿಯ ತಂದೆ ಶಿವಾರೆಡ್ಡಿ, ನನ್ನ ಮೊಮ್ಮಗಳು ಎಲ್ಲಿದ್ದಾಳೆ ಎಂದು ಪ್ರಶ್ನಿಸಿದಾಗ ಕೊಲೆ ಮಾಡಿರುವ ವಿಚಾರವನ್ನು ದೇವೇಂದ್ರ ಒಪ್ಪಿಕೊಂಡಿದ್ದಾನೆ.
ಮಗಳು ತಾನು ಇಷ್ಟಪಟ್ಟ ಯುವಕನೊಂದಿಗೆ ಮದುವೆ ಮಾಡದೇ ಮೊದಲು ತಪ್ಪು ಮಾಡಿದ ದೇವೇಂದ್ರ ರೆಡ್ಡಿ, ನಂತರ ಆಕೆಗೆ ತನ್ನ ಜೀವನ ನರಕ ಎನಿಸಿ ಮತ್ತೆ ತಾನು ಪ್ರೀತಿಸಿದ ಯುವಕನನ್ನೇ ಹುಡುಕಿಕೊಂಡು ಬಂದಾಗಲೂ ಆತನಿಗೆ ತನ್ನ ಮಗಳ ನೆಮ್ಮದಿಗಿಂತಲೂ ತನ್ನ ಜಾತಿಯ ಮರ್ಯಾದೆಯೇ ಮುಖ್ಯವಾಗಿತ್ತು. ಅಷ್ಟಕ್ಕೂ ಈ ಜಾತಿ ಅನ್ನೋ ಮೂಢನಂಬಿಗೆ ಇಂತಹ 5ಜಿ ಯುಗದಲ್ಲೂ ಮರೆಯಾಗದೇ ಯುವ ಜನರ ಬಾಳನ್ನು ನರಕವಾಗಿಸುತ್ತಿರುವುದು ನಿಜಕ್ಕೂ ದುರಂತವಾಗಿದೆ.
ಇದೀಗ ಮಗಳನ್ನೇ ಕೊಂದ ತಂದೆಯನ್ನು ಪೊಲೀಸರು ಬಂಧಿಸಿದ್ದು, ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ. ಜಾತಿಯ ಕಾರಣಕ್ಕಾಗಿ ನಡೆಯುವ ಹತ್ಯೆಗಳಿಗೆ ಗಂಭೀರವಾದ ಶಿಕ್ಷೆಗಳನ್ನು ವಿಧಿಸದ ವಿನಃ ಜಾತಿ ಅನ್ನೋ ಮೂಢನಂಬಿಕೆ ದೇಶವನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಅನ್ನೋ ಮಾತುಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw