ಆಕೆಯನ್ನು ಒಂಟಿ ಮಾಡಬಾರದು ಎಂದು ಕೊಂದೆ: ಸಾಮೂಹಿಕ ಹತ್ಯೆ ಆರೋಪಿ ಅಫಾನ್ ಹೇಳಿದ್ದೇನು?

ತಿರುವನಂತಪುರಂ: ಕೇರಳದ ತಿರುವನಂತಪುರಂನ ವೆಂಜರಮೂಡು ಮತ್ತು ಸುತ್ತಮುತ್ತ ಮೂರು ಮನೆಗಳಲ್ಲಿ ಅಜ್ಜಿ, ತಂದೆಯ ಚಿಕ್ಕಪ್ಪ ಮತ್ತು ಚಿಕ್ಕಮ್ಮ, 13 ವರ್ಷದ ಸಹೋದರ ಮತ್ತು ಗೆಳತಿಯನ್ನು ಹತ್ಯೆ ಮಾಡಿದ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಕೊಲೆಯ ನಂತರ ಪೊಲೀಸರಿಗೆ ಶರಣಾಗಿದ್ದ ಆರೋಪಿ ಅಫಾನ್ ನನ್ನು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.
23 ವರ್ಷದ ಅಫಾನ್ ಸಾಲಗಾರರ ಕಿರುಕುಳದಿಂದ ತಪ್ಪಿಸಿಕೊಳ್ಳಲು ತನ್ನ ತಾಯಿ ಹಾಗೂ ಸಹೋದರನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಜಿಸಿದ್ದ, ಹೀಗಾಗಿ ತಾಯಿ ಮತ್ತು ತಮ್ಮನನ್ನು ಆತ್ಮಹತ್ಯೆಗೆ ಮನವೊಲಿಸುವ ಪ್ರಯತ್ನ ಮಾಡಿದ್ದನು ಎಂದು ತಿಳಿದು ಬಂದಿದೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ತಾಯಿ ಮತ್ತು ಸಹೋದರ ಒಪ್ಪಿಕೊಂಡಿರಲಿಲ್ಲ. ಹೀಗಾಗಿಯೇ ತಾಯಿ ಮತ್ತು ಸಹೋದರನನ್ನು ಕೊಂದು ತಾನು ಸಾಯಬೇಕು ಎಂದು ನಿರ್ಧಾರ ಮಾಡಿದ್ದನು ಎಂದು ತಿಳಿದು ಬಂದಿದೆ.
ಅಫಾನ್ 14 ಸಾಲಗಾರರಿಂದ 65 ಲಕ್ಷ ರೂ. ಸಾಲ ಪಡೆದಿದ್ದ, ತನ್ನ ಅಜ್ಜಿ ಮತ್ತು ಚಿಕ್ಕಪ್ಪ ಮತ್ತು ಚಿಕ್ಕಮ್ಮ ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತಿಲ್ಲ ಎಂದು ಅಫಾನ್ ಬೇಸರಗೊಂಡಿದ್ದ. ಹೀಗಾಗಿ, ಅಜ್ಜಿಯ ಮನೆಗೆ ಹೋಗಿ ಅಜ್ಜಿಯನ್ನು ಕೊಂದು ಆಕೆಯ ಚಿನ್ನದ ಸರವನ್ನು ಅಫಾನ್ ಕದ್ದಿದ್ದ.
ಮಾರಣಹೋಮ:
ಮೊದಲು ಅಫಾನ್ ತನ್ನ ಮನೆಯಲ್ಲಿ ತಾಯಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ. ಆಕೆ ಸತ್ತುಹೋದಳು ಎಂದು ಭಾವಿಸಿ ಅಲ್ಲಿಂದ ನೇರವಾಗಿ ಅಜ್ಜಿಯ ಮನೆಗೆ ಹೋಗಿ ಅಜ್ಜಿಯನ್ನು ಕೊಂದಿದ್ದ. ನಂತರ ಅಫಾನ್ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಮನೆಗೆ ಹೋಗಿ ಅವರನ್ನೂ ಕೊಂದನು. ಬಳಿಕ ತನ್ನ ಮನೆಗೆ ಆಗಮಿಸಿ, ತನ್ನ ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದು, ಆಕೆಯನ್ನೂ ಕೊಂದಿದ್ದಾನೆ. ನಂತರ ಆತನ 13 ವರ್ಷದ ಸಹೋದರನನ್ನೂ ಭೀಕರವಾಗಿ ಹತ್ಯೆ ಮಾಡಿದ್ದ. ನಂತರ ವೆಂಜರಮೂಡು ಪೊಲೀಸ್ ಠಾಣೆಗೆ ತೆರಳಿ, ತಾನು ತನ್ನ ಕುಟುಂಬದ 6 ಮಂದಿಯನ್ನು ಕೊಂದಿರುವುದಾಗಿಯೂ, ತಾನೂ ವಿಷ ಸೇವಿಸಿರುವುದಾಗಿಯೂ ತಿಳಿಸಿದ್ದಾನೆ.
ಗೆಳತಿ ಒಬ್ಬಂಟಿಯಾಗಬಾರದು ಎಂದು ಕೊಂದೆ!
ಸಾಲದ ಸುಳಿಯಲ್ಲಿ ಮುಳುಗಿದ್ದ ಅಫಾನ್ ತನ್ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಫರ್ಸಾನಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಆಕೆಯ ಮುಖವನ್ನು ಸುತ್ತಿಗೆಯಿಂದ ಜಜ್ಜಿ ವಿರೂಪಗೊಳಿಸಿದ್ದ. ಆಕೆಯನ್ನು ಯಾಕೆ ಕೊಂದೆ ಎಂದು ಪೊಲೀಸರು ಕೇಳಿದ ವೇಳೆ ಅಫಾನ್, ತಾನಿಲ್ಲದೆ ಅವಳು ಒಂಟಿಯಾಗಿರುತ್ತಾಳೆ ಎಂದು ಹೇಳಿದ್ದಾನಂತೆ.
ಹತ್ಯೆಗೆ ಹಣಕಾಸಿನ ತೊಂದರೆಯೇ ಕಾರಣವೇ?
ಅಫಾನ್ ನಡೆಸಿದ ಹತ್ಯೆಗಳಿಗೆ ಹಣಕಾಸಿನ ಹೊರೆಯ ಹೊರತಾಗಿ ಬೇರೆ ಯಾವುದೇ ಕಾರಣಗಳಿವೆಯೇ ಎಂದು ತನಿಖೆ ನಡೆಸುವುದಾಗಿತನಿಖಾಧಿಕಾರಿ ಸುದರ್ಶನ್ ಹೇಳಿದ್ದಾರೆ. ಅಫಾನ್ ಶರಣಾದ ನಂತರವೂ ಅವನ ನಡವಳಿಕೆ ಅಸಾಮಾನ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಮಾನಸಿಕ ಆರೋಗ್ಯ ತಜ್ಞರ ಸಮ್ಮುಖದಲ್ಲಿ ಅಫಾನ್ ನನ್ನು ಪ್ರಶ್ನಿಸಲಾಗುವುದು ಮತ್ತು ಅವನ ಮಾನಸಿಕ ಸ್ಥಿತಿಯನ್ನು ಸಹ ಪರೀಕ್ಷಿಸಲಾಗುವುದು. ಅವನಿಗೆ ಫರ್ಸಾನಾ ಮೇಲೆ ಯಾವುದೇ ದ್ವೇಷ ಇದ್ದಂತೆ ಕಾಣುತ್ತಿಲ್ಲ. ಅವನು ತನ್ನ ಸಾಮೂಹಿಕ ಆತ್ಮಹತ್ಯೆ ಯೋಜನೆಯ ಬಗ್ಗೆಯೂ ಅವಳಿಗೆ ಹೇಳಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಗನ ದಾಳಿಯಿಂದ ಬದುಕುಳಿದ ತಾಯಿ:
ಅಫಾನ್ ತನ್ನ ತಾಯಿ ಶೆಮಿನಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಆಕೆ ಸತ್ತುಹೋದಳು ಎಂದು ಭಾವಿಸಿದ್ದನು. ಇದೀಗ ಶೆಮಿನಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಪೊಲೀಸರು ಏನು ನಡೆಯಿತು ಎಂದು ಕೇಳಿದಾಗ ಆರಂಭದಲ್ಲಿ ಮಗನನ್ನು ಬಿಟ್ಟುಕೊಡದ ಶೆಮಿನಾ, ಹಾಸಿಗೆಯಿಂದ ಕೆಳಗೆ ಬಿದ್ದು ಗಾಯಗೊಂಡಿರುವುದಾಗಿ ಹೇಳಿದ್ದರು. ಆದರೆ ಬಳಿಕ ತನ್ನ ಮಗ ಹಲ್ಲೆ ನಡೆಸಿದ ನಂತರ ಏನು ಮಾಡಿದ್ದಾನೆ ಎನ್ನುವುದು ನನಗೆ ತಿಳಿದಿಲ್ಲ ಎಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೌದಿ ಅರೇಬಿಯಾದಿಂದ ಬಂದ ಪತಿ ರಹೀಮ್:
ಮಗ ನಡೆಸಿದ ಮಾರಣಾಹೋಮದಿಂದಾಗಿ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಪತಿ, ಮನೆಯ ಯಜಮಾನ ರಹೀಮ್ ಹಿಂದಿರುಗಿದ್ದಾರೆ. ಅವರ ಕುಟುಂಬದಲ್ಲಿ 65 ಲಕ್ಷ ಸಾಲವಾಗಿರುವ ವಿಚಾರ ಅವರಿಗೆ ತಿಳಿದಿರಲಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ. ಅಫಾನ್ ಬ್ಯಾಂಕ್ ಸಾಲ ಮತ್ತು ಸಂಬಂಧಿಕರಿಂದ ಪಡೆದ ಸಾಲ ಸೇರಿದಂತೆ 15 ಲಕ್ಷ ರೂ. ಸಾಲವನ್ನು ಹೊಂದಿದ್ದ ಎಂದು ಮಾತ್ರ ತನಗೆ ತಿಳಿದಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನೂ ಸಾಲ ತೀರಿಸಲು ಅಫಾನ್ ತನ್ನ ಪ್ರೇಯಸಿಯ ಚಿನ್ನದ ಸರ ಅಡವಿಟ್ಟಿದ್ದನು. ಅದನ್ನು ಬಿಡಿಸಲು ಮಗನಿಗೆ 60 ಸಾವಿರ ರೂಪಾಯಿಗಳನ್ನು ಕಳುಹಿಸಿ ಕೊಟ್ಟಿರುವುದಾಗಿ ತಂದೆ ಹೇಳಿದ್ದಾರೆ. ಇಷ್ಟೆಲ್ಲ ಸಾಲಗಳನ್ನು ಅಫಾನ್ ಯಾಕೆ ಮಾಡಿದ್ದ ಎನ್ನುವುದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: