ಜಾತಿ ನಿಂದನೆ: ಉಪೇಂದ್ರ ವಿರುದ್ಧದ ಎಫ್ .ಐ.ಆರ್ ಗೆ ಹೈಕೋರ್ಟ್ ತಡೆ
ಬೆಂಗಳೂರು:ಸ್ಯಾಂಡಲ್‌ವುಡ್ ನಟ ಉಪೇಂದ್ರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು,ಉಪೇಂದ್ರಂಗೆ ಸದ್ಯ ರಿಲೀಫ್ ಸಿಕ್ಕಂತಾಗಿದೆ.
ಇತ್ತೀಚೆಗೆ ಲೈವ್ನಲ್ಲಿ ಮಾತನಾಡಿದ್ದ ಉಪೇಂದ್ರ ಹೊಲಗೇರಿ ಶಬ್ದ ಬಳಕೆ ಮಾಡಿದ್ದರು. ಆಕ್ಷೇಪಾರ್ಹ ಪದ ಬಳಕೆ ಪ್ರಕರಣದಲ್ಲಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ ಜಾತಿನಿಂದನೆಯ ಅವಹೇಳನಕಾರಿ ಪದವನ್ನು ಬಳಸಿದ್ದಾರೆ ಎಂಬ ವಿಚಾರ ವಿಪರೀತ ಚರ್ಚೆಗೆ ಕಾರಣವಾಗಿದೆ. ಅವರು ಆಡಿದ ಮಾತುಗಳ ವಿಚಾರವಾಗಿ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ನಟ ಉಪೇಂದ್ರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಅವರನ್ನು ಗಡಿಪಾರು ಮಾಡುವಂತೆ ಕೋಲಾರದಲ್ಲಿ ಆಗ್ರಹಿಸಲಾಗಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಉಪೇಂದ್ರ ವಿರುದ್ಧ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯ ಎಸ್.ಎಂ.ವೆಂಕಟೇಶ್ ಹಾಗೂ ವಿಜಿ ನೇತೃತ್ವದಲ್ಲಿ ದೂರು ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಮೂರು ದೂರು ಹಾಗೂ ಕೋಲಾರದಲ್ಲಿ ಒಂದು ದೂರ ದಾಖಲಾದ ಬೆನ್ನಲ್ಲೇ ಮಂಡ್ಯದಲ್ಲೂ ಉಪೇಂದ್ರ ವಿರುದ್ದ ದೂರು ಸಲ್ಲಿಕೆಯಾಗಿದೆ. ಪರಿಶಿಷ್ಟ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಮದ್ದೂರು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಈ ದೂರು ಸಲ್ಲಿಕೆಯಾಗಿದೆ.
ಉಪೇಂದ್ರ ಅವರ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಆಗಸ್ಟ್ 13ರಂದು ಉಪೇಂದ್ರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈಗ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿದೆ.
ಪ್ರಕರಣ ಸಂಬಂಧ ತಕ್ಷಣ ವಿಚಾರಣೆಗೆ ಹಾಜರಾಗುವಂತೆ ಉಪೇಂದ್ರ ಅವರಿಗೆ ಸೂಚಿಸಲಾಗಿದೆ. ನಟನ ಕತ್ರಿಗುಪ್ಪೆ ಮತ್ತು ಸದಾಶಿವನಗರ ಮನೆಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸದ್ಯ ವಾಟ್ಸ್ಆ್ಯಪ್ ಮೂಲಕ ನೋಟಿಸ್ ರವಾನೆ ಮಾಡಲಾಗಿದ್ದು, ಪ್ರಕರಣ ಸಂಬಂಧ ಸ್ಥಳ ಮಹಜರು ನಡೆಯಿತು. ವಿಡಿಯೋ ಮಾಡಿದ ಜಾಗದ ಸ್ಥಳ ಮಹಜರನ್ನು ಪೊಲೀಸರು ಮಾಡಲಾಯಿತು.ದೂರುದಾರ ಸಮ್ಮುಖದಲ್ಲೇ ಈ ಪ್ರಕ್ರಿಯೆ ನಡೆಯಿತು.
ಉಪೇಂದ್ರ ಸಲ್ಲಿಸಿದ್ದ ಮನವಿಯನ್ನು ಏಕಸದಸ್ಯ ಪೀಠವು ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಉಪೇಂದ್ರ ಪರ ವಕೀಲ ಉದಯ್ ಹೊಳ್ಳ ವಾದ ಮಂಡಿಸಿ, ‘ಆ ಪದವನ್ನು ದುರುದ್ದೇಶದಿಂದ ಬಳಸಿದ್ದಲ್ಲ, ಉಪೇಂದ್ರ ಅವರು ಜನಪ್ರಿಯ ವ್ಯಕ್ತಿಯ ಜೊತೆ ಜವಾಬ್ದಾರಿಯುತ ವ್ಯಕ್ತಿಯು ಆಗಿದ್ದಾರೆ. ಅವರಿಗೆ ಎಲ್ಲರ ಬಗ್ಗೆಯೂ ಗೌರವವಿದೆ ಎಂದು ಮನವರಿಕೆ ಮಾಡಿಕೊಟ್ಟರು. ಉಪೇಂದ್ರ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಗೆ ಸಂಬಂಧಿಸಿದಂತೆ ಮಾತ್ರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hv1TpXr73MfF0Cet1rPZjq
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw