ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ನೀಡಿ ಎಂಬ ಹೈಕೋರ್ಟ್ ಆದೇಶದ ವಿರುದ್ಧ ಸು.ಕೋ. ಮೊರೆ ಹೋದ ಮೋದಿ ಸರ್ಕಾರ್
ನವದೆಹಲಿ: ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದ್ದು, ಈ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಆಸ್ಪತ್ರೆಯಲ್ಲಿ ಸಾಲು ಸಾಲು ಸಾವಾಗಿದ್ದು, ಈ ಪ್ರಕರಣ ಇಡೀ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಹೈಕೋರ್ಟ್, ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡುತ್ತಿದ್ದ 965 ಮೆಟ್ರಿಕ್ ಟನ್ ಆಕ್ಸಿಜನ್ ಪ್ರಮಾಣವನ್ನು 1,200 ಮೆಟ್ರಿಕ್ ಟನ್ ಗೆ ಏರಿಕೆ ಮಾಡಬೇಕು ಎಂದು ಆದೇಶಿಸಿತ್ತು.
ಇನ್ನೂ ಈ ಆದೇಶದ ವಿರುದ್ಧ ಕೇಂದ್ರ ಸರ್ಕಾರ, ಸುಪ್ರೀಂ ಕೊರ್ಟ್ ನ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠದಲ್ಲಿ ಮನವಿ ಮಾಡಿದೆ. ಹೈಕೋರ್ಟ್ ಆದೇಶವನ್ನು ತಕ್ಷಣವೇ ತಡೆ ಹಿಡಿಯ ಬೇಕು ಎಂದು ಹೇಳಿದೆ.
ಈ ಮೂಲಕ ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ನೀಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ರವಾನಿಸಿದೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವಿದೆ, ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರವಿದೆ. ಹೀಗಾಗಿ ಆಡಳಿತ ಸುಲಭವಾಗುತ್ತದೆ ಎಂದು ಜನರು ಅಂದುಕೊಂಡಿದ್ದರೆ, ಕರ್ನಾಟಕದ ಜನತೆ ಆಕ್ಸಿಜನ್ ಇಲ್ಲದೇ ಸಾಯುವಂತಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ತಂದೊಡ್ಡಲಿದೆಯೇ ಎನ್ನುವ ಭೀತಿ ಇದೀಗ ಜನತೆಯಲ್ಲಿ ಮನೆ ಮಾಡಿದೆ.