ಹಿಜಾಬ್ ಗೆ ಅವಕಾಶ ಕೋರಿ ಕರ್ನಾಟಕ ಬಂದ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ
ಮಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಲು ಒತ್ತಾಯಿಸಿ ಇಂದು ರಾಜ್ಯಾದ್ಯಂತ ಮುಸ್ಲಿಮರು ತಮ್ಮ ವ್ಯಾಪಾರ, ವ್ಯವಹಾರಗಳನ್ನು ಸ್ಥಗಿತಗೊಳಿಸಿ ಬಂದ್ ನಡೆಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಂಗಳೂರಿನ ಬಂದರು, ಸೆಂಟ್ರಲ್ ಮಾರ್ಕೆಟ್, ಸ್ಟೇಟ್ ಬ್ಯಾಂಕ್, ಎಪಿಎಂಸಿ ಮಾರುಕಟ್ಟೆ ಮತ್ತಿತರ ವ್ಯಾಪಾರ ಪ್ರದೇಶಗಳ ಮೀನುಗಾರಿಕಾ ಬಂದರು ಪ್ರದೇಶಗಳಲ್ಲಿ ಮೀನು, ತರಕಾರಿಗಳು ಮತ್ತು ಇತರ ವ್ಯಾಪಾರದೊಂದಿಗೆ ಪ್ರತೀನಿತ್ಯ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಆದರೆ ಇಂದು ಜನರಿಲ್ಲದೆ ಬಿಕೋ ಎನ್ನುತ್ತಿರುವ ದೃಶ್ಯಗಳು ಕಂಡು ಬಂದವು.
ಮಂಗಳೂರಿನಲ್ಲಿ ಮೀನು ಮತ್ತು ತರಕಾರಿ ವ್ಯಾಪಾರದಲ್ಲಿ ತೊಡಗಿರುವವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದು, ಬಂದ್ ಗೆ ಬೆಂಬಲ ನೀಡಲು ವ್ಯಾಪಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಪ್ರತಿ ನಿತ್ಯ ಮೀನು ಮತ್ತು ತರಕಾರಿಗಳನ್ನು ಖರೀದಿ ಮಾಡಲು ಬರುತ್ತಿದ್ದ ಜನರ ಮೇಲೆ ಬಂದ್ ಬಿಸಿ ತಟ್ಟಿದೆ.
ಮಂಗಳೂರು ಮತ್ತು ದಕ್ಷಿಣ ಕನ್ನಡದ ಇತರ ಭಾಗಗಳ ಮಾರುಕಟ್ಟೆಗಳಲ್ಲಿಯೂ ಚಿಕನ್, ಮಟನ್ ಸ್ಟಾಲ್‌ಗಳನ್ನು ಮುಚ್ಚಿ ಬೆಂಬಲ ನೀಡಲಾಗಿದೆ. ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ಉಳ್ಳಾಲದಲ್ಲಿಯೂ ಬಂದ್ ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಕಾಸರಗೋಡಿನ ಸಗಟು ಮಾರುಕಟ್ಟೆ ಕೂಡ ಬಿಕೋ ಎನ್ನುತ್ತಿದೆ.
ರಾಜ್ಯ ಬಂದ್ ಗೆ ಎಸ್ ಡಿಪಿಐ, ಪಿಎಫ್ಐ, ದಲಿತ್ ಮತ್ತು ಮೈನಾರಿಟಿ ಸೇನೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಮುಸ್ಲಿಂ ಸಂಘಟನೆಗಳ ಒಕ್ಕೂಟ ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಮುಸ್ಲಿಂ ಸಂಘಟನೆಗಳು ಹಾಗೂ ಮುಸ್ಲಿಂ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಬಂದ್ ಕರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಎಸ್ ಡಿಪಿಐ ಮುಖಂಡರು ತಿಳಿಸಿದ್ದಾರೆ.
ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ನೊಂದಿಗೆ ಶಿಕ್ಷಣ ಪಡೆಯಲ ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಅಮೀರ್-ಇ-ಷರಿಯತ್‌ನ ಮುಖ್ಯಸ್ಥ ಮೌಲಾನಾ ಸಗೀರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಸಿ ಗುರುವಾರ ಕರ್ನಾಟಕ ಬಂದ್ ಗೆ ತೀರ್ಮಾನ ಕೈಗೊಳ್ಳಲಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು