ಗಂಗೊಳ್ಳಿ: ಹಿಂದೂಗಳ ಮೀನುಮಾರುಕಟ್ಟೆಯನ್ನು ಮುಸ್ಲಿಮರು ಬಹಿಷ್ಕರಿಸಿದ್ದು ಯಾಕೆ? | ಒಂದೇ ತಾಯಿ ಮಕ್ಕಳಂತಿದ್ದವರ ನಡುವೆ ಏನಿದು ಗಲಾಟೆ?
ಉಡುಪಿ: ಜಿಲ್ಲೆಯ ಗಂಗೊಳ್ಳಿಯಲ್ಲಿ ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಅ.1ರಂದು ಪ್ರತಿಭಟನೆ ನಡೆದ ಬಳಿಕ ಗಂಗೊಳ್ಳಿ ಮೀನು ಮಾರುಕಟ್ಟೆಗೆ ಮುಸ್ಲಿಮರು ಬಹಿಷ್ಕಾರ ಹಾಕಿದ್ದಾರೆ ಎನ್ನುವ ವದಂತಿಗಳ ಹಿಂದಿನ ಸತ್ಯಾಂಶಗಳು ಇದೀಗ ಬಯಲಾಗಿದೆ.
ಗಂಗೊಳ್ಳಿಯಲ್ಲಿ ಮುಸ್ಲಿಮರು ಹಿಂದೂಗಳಿಂದ ಮೀನು ಖರೀದಿಸುವುದನ್ನು ಬಹಿಷ್ಕರಿಸಿದ್ದಾರೆ. ಈ ಬಗ್ಗೆ ಮುಸ್ಲಿಮರಿಗೆ ಸೂಚನೆ ನೀಡಲಾಗಿದೆ. ಗೋ ಹತ್ಯೆ ನಿಷೇಧಕ್ಕೆ ಒತ್ತಾಯಿಸಿದ್ದಕ್ಕೆ ಹಿಂದೂಗಳಿಂದ ಮೀನು ಖರೀದಿಗೆ ಮುಸ್ಲಿಮರು ಮುಂದಾಗಿಲ್ಲ ಎನ್ನುವಂತಹ ಹಲವು ವದಂತಿಗಳು ಹಬ್ಬಿತ್ತು. ಆದರೆ, ಇದೀಗ ಸುದ್ದಿ ಮಾಧ್ಯಮ ‘ಸನ್ಮಾರ್ಗ’ ಈ ಸಂಬಂಧ ನಡೆಸಿರುವ ಸಂದರ್ಶನದಲ್ಲಿ ಮುಸ್ಲಿಮ್ ಮುಖಂಡರು ಈ ಎಲ್ಲ ವದಂತಿಗಳಿಗೂ ಉತ್ತರ ನೀಡಿದ್ದಾರೆ.
ಇಲ್ಲಿನ ಮುಖಂಡರು ಹೇಳುತ್ತಿರುವಂತೆ, ಗೋಹತ್ಯೆ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಗಾಗಿ ಇಲ್ಲಿನ ಮುಸ್ಲಿಮರು ಮೀನು ಖರೀದಿಯನ್ನು ಬಹಿಷ್ಕರಿಸಿಲ್ಲ. ಪ್ರತಿಭಟನೆ ಯಾರು ಬೇಕಾದರೂ ನಡೆಸಬಹುದು, ಅದಕ್ಕೆ ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ, ಪ್ರವಾದಿಯವರ ಬಗ್ಗೆ ಅತ್ಯಂತಹ ಕೆಟ್ಟದಾದ ಘೋಷಣೆಗಳನ್ನು ಕೂಗಿರುವುದಿಂದ ಮುಸ್ಲಿಮರಿಗೆ ತೀವ್ರ ಬೇಸರವಾಗಿದೆ ಎಂದು ಹೇಳಿದ್ದಾರೆ.
ವಾಸ್ತವವಾಗಿ ಇಲ್ಲಿನ ಮೀನುಗಾರ ಸಮುದಾಯಗಳು ಮುಸ್ಲಿಮರ ಜೊತೆಗೆ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ಆದರೆ, ಮೊನ್ನೆ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಮ್ ಧರ್ಮದ ಬಗ್ಗೆ ಅವಹೇಳನಾಕಾರಿಯಾಗಿ ಘೋಷಣೆ ಕೂಗಿರುವುದು. ಸಮುದಾಯಕ್ಕೆ ತೀವ್ರವಾಗಿ ನೋವುಂಟು ಮಾಡಿದೆ. ಈ ನೋವಿನಿಂದ ಮೀನು ಖರೀದಿಸಲು ಹೋಗಿರದೇ ಇರಬಹುದು. ಹಾಗಂತ ಯಾರ ಮೇಲೆಯೂ ದ್ವೇಷ ಇಲ್ಲ. ಸ್ವಲ್ಪ ದಿನದಲ್ಲಿಯೇ ಇದೆಲ್ಲ ಸರಿಯಾಗಬಹುದು. ಜಮಾಅತ್ ನಿಂದ ಮೀನು ಖರೀದಿಗೆ ಬಹಿಷ್ಕಾರ ಹಾಕಲು ಯಾರಿಗೂ ಸೂಚನೆ ನೀಡಿಲ್ಲ. ಸಮುದಾಯದ ಜನರಿಗೆ ನೋವಾಗಿದೆ. ಹಾಗಾಗಿ ಅವರು ಹೋಗಿರಲಿಕ್ಕಿಲ್ಲ ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಎಲ್ಲ ವ್ಯಾಪಾರಗಳು ಸಹಜವಾಗಿಯೇ ನಡೆಯುತ್ತಿದೆ. ಮುಸ್ಲಿಮರು ಯಾವುದನ್ನೂ ಬಹಿಷ್ಕರಿಸಿಲ್ಲ. ಪೈಗಂಬರ್ ವಿರುದ್ಧ ಕೆಟ್ಟದಾಗಿ ಘೋಷಣೆಗಳನ್ನು ಕೂಗಿದ ಪ್ರತಿಭಟನೆಯಲ್ಲಿ ಮೀನುಗಾರರು ಕೂಡ ಭಾಗವಹಿಸಿದರಲ್ಲಾ, ಎನ್ನುವ ನೋವು ಸಮುದಾಯಕ್ಕೆ ಆಗಿದೆ ಅಷ್ಟೇ ಎಂದು ಮೌ.ಅಬ್ದುಲ್ ಬಾಖಿ ನದ್ವಿ ಹೇಳಿದ್ದಾರೆ.
ಇನ್ನೂ ಸ್ಥಳೀಯರು ಮಹಿಳೆಯೊಬ್ಬರು ಮಾತನಾಡುತ್ತಾ, ನಾವು ಒಂದು ತಾಯಿ ಮಕ್ಕಳಂತೆ ಇದ್ದೆವು. ಆದರೆ, ಮೊನ್ನೆ ನಡೆದ ಪ್ರತಿಭಟನೆಯ ನಂತರ ನಮ್ಮ ಎರಡು ತಾಯಿಯ ಮಕ್ಕಳಂತೆ ಇಲ್ಲಿನ ಸ್ಥಿತಿ ಆಗಿದೆ ಎಂದು ಹೇಳಿದ್ದಾರೆ.
ವಿಡಿಯೋ ನೋಡಲು ಈ ಲಿಂಕ್ ಗೆ ಕ್ಲಿಕ್ ಮಾಡಿ: https://youtu.be/A6rHd0zi2J4
ವಿಡಿಯೋ ಕೃಪೆ: ಸನ್ಮಾರ್ಗ ನ್ಯೂಸ್
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9