ಹಿಂದುತ್ವದ ಪರವಾಗಿ ಸರ್ಕಾರ ಇರಬೇಕು | ತೀವ್ರ ಮುಖಭಂಗದ ಬಳಿಕ ಯತ್ನಾಳ್ ಹೇಳಿಕೆ - Mahanayaka

ಹಿಂದುತ್ವದ ಪರವಾಗಿ ಸರ್ಕಾರ ಇರಬೇಕು | ತೀವ್ರ ಮುಖಭಂಗದ ಬಳಿಕ ಯತ್ನಾಳ್ ಹೇಳಿಕೆ

yathnal
28/07/2021

ಬೆಂಗಳೂರು: ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಾನೂ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿ ಎಂದು ಹೇಳಿದ್ದರು. ನಿನ್ನೆ ಇದೇ ನಿರೀಕ್ಷೆಯಲ್ಲಿ ತೆರಳಿದ್ದ ಯತ್ನಾಳ್ ಹಾಗೂ ತಂಡಕ್ಕೆ ತೀವ್ರ ನಿರಾಸೆಯಾಗಿತ್ತು. ಇದೀಗ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗುತ್ತಿದ್ದಂತೆಯೇ ಹಿಂದೂತ್ವದ ಪರವಾದ ಸರ್ಕಾರ ರಾಜ್ಯದಲ್ಲಿರಬೇಕು ಎಂದು ಅವರು ಹೇಳಿಕೆ ನೀಡಿದ್ದಾರೆ.

 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ವರಿಷ್ಠರು ಸಚಿವ ಸ್ಥಾನ ನೀಡಿದರೆ ಸಚಿವ ಸ್ಥಾನ ಅಲಂಕರಿಸಲು ಸಿದ್ಧ ಎಂದರು. ನನ್ನಲ್ಲಿನ ಸಂಘಟನೆಯ ಸಾಮರ್ಥ್ಯ, ಪ್ರಾಮಾಣಿಕತೆಯನ್ನು ಗುರುತಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರ ಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದರು. ಈಗ ಅದಕ್ಕಾಗಿ ಕೈ ಕಾಲು ಹಿಡಿಯುವ ಹಂತಕ್ಕೆ ಹೋಗುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

 

ಹಿಂದುತ್ವದ ಪರವಾಗಿ ಸರ್ಕಾರ ಇರಬೇಕು. ಭ್ರಷ್ಟಾಚಾರ ಮುಕ್ತವಾದ ಆಡಳಿತ ಕೊಡಬೇಕು. ಇದು ನಮ್ಮ ಉದ್ದೇಶ. ಕೆಲವು ನಿರೀಕ್ಷೆಗಳು ಬದಲಾವಣೆಯಾಗಿವೆ. ಕಾಲ ಕಾಲಕ್ಕೆ ಇನ್ನು ಬದಲಾವಣೆಯಾಗಲಿದೆ ಎಂದ ಅವರು, ಬಿಜೆಪಿ ನಾಯಕತ್ವದಲ್ಲಿ ಮತ್ತಷ್ಟು ಬದಲಾವಣೆಯಾಗಲಿದೆ ಎನ್ನುವ ಸುಳಿವು ನೀಡಿದರು.

 

ಬೊಮ್ಮಾಯಿ ಅವರು ಯಾರ ಹಂಗಿಲ್ಲದೆ ಆಡಳಿತ ನಡೆಸಲಿದ್ದಾರೆ. ಇನ್ನೊಬ್ಬರ ಕೈಗೊಂಬೆ ಎಂಬಂತಹ ಊಹಾಪೋಹ ಬೇಡ. ಭ್ರಷ್ಟಾಚಾರ ರಹಿತ ಆಡಳಿತವನ್ನು ಕೊಟ್ಟೇ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ