ಝೊಮೆಟೊ ಡೆಲಿವರಿ ಬಾಯ್ ಮೇಲೆ ಆರೋಪ ಮಾಡಿದ ಯುವತಿಗೆ ಹೊಸ ಸಂಕಷ್ಟ!
ಬೆಂಗಳೂರು: ಝೊಮೆಟೊ ಡೆಲಿವರಿ ಬಾಯ್ ಕಾಮರಾಜ್ ಅವರು ಹಲ್ಲೆ ನಡೆಸಿದ್ದಾರೆ ಎಂದು ಸೀನ್ ಕ್ರಿಯೇಟ್ ಮಾಡಿ, ಯುವಕನ ಜೀವನವನ್ನೇ ಸಂಕಷ್ಟಕ್ಕೆ ಸಿಲುಕಿಸಿದ್ದ, ಹಿತಾಶಾ ಚಂದ್ರಾನಿ ಇದೀಗ ತಾನೇ ಸಂಕಷ್ಟಕ್ಕೆ ಸಿಲುಕಿದ್ದಾಳೆ.
ಈ ಘಟನೆ ನಡೆದ ಆರಂಭದಲ್ಲಿ ಎಲ್ಲರು ಕೂಡ ಕಾಮರಾಜ್ ಅವರದ್ದೇ ತಪ್ಪು ಎಂದು ಅಂದುಕೊಂಡಿದ್ದರು. ಕಾಮರಾಜ್ ನೋಡಲು ದೃಢಕಾಯರಾಗಿದ್ದರು ಕೂಡ. ಈ ಸಂದರ್ಭದಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳ ಪ್ರಶ್ನಿಸಿದ್ದು, ಕಾಮರಾಜ್ ನಿಜವಾಗಿಯೂ ಮೂಗಿಗೆ ಪಂಚ್ ಮಾಡಿದ್ದರೆ, ಆಕೆ ಪರಲೋಕ ಸೇರುತ್ತಿದ್ದಳು, ಕನಿಷ್ಟ ಆಸ್ಪತ್ರೆ ಸೇರುತ್ತಿದ್ದಳು. ಇದರಲ್ಲೇನೋ ಇದೆ ಎಂದು ಸಂಶಯ ವ್ಯಕ್ತಪಡಿಸಿದ್ದರು.
ಇದಾದ ಬಳಿಕ ಸ್ವತಃ ಕಾಮರಾಜ್ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಬಂದು ಕಣ್ಣೀರು ಹಾಕಿ ನಡೆದ ಘಟನೆಯನ್ನು ವಿವರಿಸಿದರು. ದೃಡಕಾಯರಾಗಿದ್ದರೂ ಕೂಡ ಕಾಮರಾಜ್ ಸೌಮ್ಯ ಸ್ವಭಾವದವರಾಗಿದ್ದರು. ತಾವು ಆಹಾರ ವಿತರಣೆ ಮಾಡುವಾಗ ತಡವಾಗಿದ್ದು ನಿಜ. ರಸ್ತೆ ಕಾಮಗಾರಿಗಳು ನಡೆಯುತ್ತಿದ್ದುದರಿಂದ ತಡವಾಗಿ ಆಹಾರ ತಲುಪಿಸಿದ್ದೇನೆ. ಈ ವಿಚಾರ ತಾನು ಅವರಿಗೆ ಹೇಳಲು ಪ್ರಯತ್ನಿಸಿದ್ದೆ. ಆದರೆ ಅವರು ಅದಕ್ಕಿಂತ ಮೊದಲೇ ನನಗೆ ಅವಾಚ್ಯ ಶಬ್ಧಗಳಿಂದ ಬೈದರು. ನೀನು ಕೆಲಸ ಆಳು ಎಂದು ನಿಂದಿಸಿದರು. ಮತ್ತು ತನ್ನ ಮೇಲೆ ಚಪ್ಪಲಿಯಿಂದ ಎಸೆದರು. ಆಹಾರದ ಹಣವನ್ನು ಕೂಡ ಕೊಡಲಿಲ್ಲ ಎಂದು ಹೇಳಿದ್ದರು.
ಕಾಮರಾಜ್ ಅವರು ಸ್ಪಷ್ಟಣೆ ನೀಡುತ್ತಿದ್ದಂತೆಯೇ ನಟಿ ಪ್ರಣಿತಾ ಸೇರಿದಂತೆ ಹಲವು ಸೆಲೆಬ್ರೆಟಿಗಳು ಕೂಡ ಕಾಮರಾಜ್ ಪರವಾಗಿ ಧ್ವನಿಯೆತ್ತಿದರು. ಕನ್ನಡ ಪರ ಸಂಘಟನೆಗಳು ಕೂಡ ಕಾಮರಾಜ್ ಗೆ ಬೆಂಬಲ ನೀಡಿದರು. ಜೊತೆಗೆ ಕಾಮರಾಜ್ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಎನ್ನುವ ಅಭಿಯಾನವನ್ನು ಕೂಡ ಸಾರ್ವಜನಿಕರು ಆರಂಭಿಸಿದ್ದಾರೆ. ಈ ನಡುವೆ ಕಾಮರಾಜ್ ಅವರು, ಹಿತಾಶಾ ಚಂದ್ರಾಣಿಯ ಮೇಲೆ ದೂರು ನೀಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ಹಾಗೂ ನಿಂದನೆಯ ಆರೋಪದಲ್ಲಿ ಹಿತಾಶಾ ವಿರುದ್ಧ ದೂರು ದಾಖಲಾಗಿದೆ. ಚಪ್ಪಲಿಯಿಂದ ಹಲ್ಲೆ ನಡೆಸಿ, ಸುಳ್ಳು ಆರೋಪ ಮಾಡಿರುವ ಬಗ್ಗೆ ದೂರು ನೀಡಲಾಗಿದೆ. ಈ ಬಗ್ಗೆ ಎಫ್ ಐ ಆರ್ ದಾಖಲಿಸಲಾಗಿದ್ದು, ಉತ್ತರ ಭಾರತ ಮೂಲದ ಯುವತಿಯ ಈ ಕೃತ್ಯದ ವಿರುದ್ಧ ಪೊಲೀಸರು ಯಾವ ಕ್ರಮಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.