ಜೈಲಿನಲ್ಲಿದ್ದ 63 ಕೈದಿಗಳಿಗೆ ಏಡ್ಸ್!: ಈ ಜೈಲಿನಲ್ಲಿ ಅಡಗಿದೆ ಬೆಚ್ಚಿಬೀಳಿಸುವ ರಹಸ್ಯ!

ಲಖನೌ: ಜಿಲ್ಲಾ ಕಾರಾಗೃಹವೊಂದರ 63 ಕೈದಿಗಳಿಗೆ ಎಚ್ ಐವಿ ಪಾಸಿಟಿವ್ ಪತ್ತೆಯಾಗಿದ್ದು, ಭಾರೀ ಸಂಚಲನ ಮೂಡಿಸಿದೆ. ಜೈಲಿನಲ್ಲಿದ್ದ ಕೈದಿಗಳಿಗೆ ಎಚ್ ಐವಿ ಪಾಸಿಟಿವ್ ಬರಲು ಹೇಗೆ ಸಾಧ್ಯ ಅನ್ನೋ ಹಲವು ಪ್ರಶ್ನೆಗಳು ಕೇಳಿ ಬಂದಿವೆ.
ಡಿಸೆಂಬರ್ ನಲ್ಲಿ ಪರೀಕ್ಷೆ ನಡೆಸಿದಾಗ 36 ಕೈದಿಗಳಿಗೆ ಸೋಂಕು ತಗಲಿರುವುದು ಪತ್ತೆಯಾಗಿತ್ತು. ಇದೀಗ ಸೋಂಕಿತರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ. ವೈರಸ್ ಹರಡಲು ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ, ಆದ್ರೆ ಸೋಂಕಿತರ ಪೈಕಿ ಹೆಚ್ಚಿನವರು ಡ್ರಗ್ಸ್ ತೆಗೆದುಕೊಳ್ಳುವ ಅಭ್ಯಾಸ ಹೊಂದಿದ್ದವರು ಎಂದು ಹೇಳಲಾಗಿದ್ದು, ಒಂದೇ ಸಿರಿಂಜ್ ಬಳಸಿ ಡ್ರಗ್ಸ್ ತೆಗೆದುಕೊಂಡಿರುವ ಕಾರಣ ವೈರಸ್ ಹರಡಿರುವ ಸಾಧ್ಯತೆ ಇರಬಹುದು ಎಂದು ಅಂದಾಜಿಸಲಾಗಿದೆ.
ಜೈಲಿಗೆ ಬರುವ ಮುನ್ನ ಯಾವುದೇ ಕೈದಿಗಳಿಗೆ ಎಚ್ ಐವಿ ಸೋಂಕು ಇರಲಿಲ್ಲ, ಉತ್ತರ ಪ್ರದೇಶದ ಜೈಲುಗಳ ಆಡಳಿತ ನಿರ್ಲಕ್ಷ್ಯ, ಭ್ರಷ್ಟ ವ್ಯವಸ್ಥೆಯೇ ಈ ಘಟನೆಗೆ ಕಾರಣ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಕಳೆದ ಐದು ವರ್ಷದಲ್ಲಿ ಈ ಜೈಲಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಚ್‌ಐವಿ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು. ಇದಕ್ಕೆ ಕಾರಣಗಳ ಪತ್ತೆಗೆ ವಿಶೇಷ ತನಿಖೆ ನಡೆಸಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಒಂದೇ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಏಡ್ಸ್ ಪೀಡಿತರು ಕಂಡು ಬಂದಿರೋದರಿಂದ ಇತರ ಕೈದಿಗಳ ಆರೋಗ್ಯದ ಸುರಕ್ಷತೆಯ ಬಗ್ಗೆ ಜೈಲಿನಲ್ಲಿ ಆತಂಕ ಸೃಷ್ಟಿಯಾಗಿದೆ.