ಡ್ರಗ್ಸ್ ವಿರುದ್ಧ ಕ್ರಮಕೈಗೊಳ್ಳಲು ನಿರ್ಲಕ್ಷಿಸಿದರೆ ಅಧಿಕಾರಿಗಳೆ ಹೊಣೆ | ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ - Mahanayaka

ಡ್ರಗ್ಸ್ ವಿರುದ್ಧ ಕ್ರಮಕೈಗೊಳ್ಳಲು ನಿರ್ಲಕ್ಷಿಸಿದರೆ ಅಧಿಕಾರಿಗಳೆ ಹೊಣೆ | ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ

paramesgwar
30/11/2024

ಮಂಗಳೂರು: ಕೋಮುವಾದಿ ಶಕ್ತಿಗಳನ್ನು ಬೆಳೆಯಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಸ್ಪೆಷಲ್ ಟಾಸ್ಕ್ ಫೋರ್ಸ್ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ‌ ಮಾಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು.


Provided by

ಮಂಗಳೂರಿನ ಅತ್ತಾವರದಲ್ಲಿ ಮಂಗಳೂರು ನಗರ ಪೊಲೀಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ನೂತನ ಪೊಲೀಸ್ ವಸತಿ ಗೃಹ ಸಮುಚ್ಛಯಗಳು ಹಾಗೂ ಸುಬ್ರಹ್ಮಣ್ಯ ಮತ್ತು ಬಂಟ್ವಾಳ ಪೊಲೀಸ್ ಠಾಣೆಗಳ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ಬಹಳ ಸವಾಲುಗಳಿವೆ. ಸಮಾಜಕ್ಕೆ ಅತ್ಯಂತ ಅಪಾಯಕಾರಿ ಕೋಮುವಾದಿ ಶಕ್ತಿಗಳನ್ನು ಬೆಳೆಯಲು ಬಿಡಬಾರದು.‌ ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ‌ ನೀಡಿದ್ದೇನೆ ಎಂದರು.


Provided by

ಪಕ್ಷವು ಚುನಾವಣಾ ಪ್ರಣಾಳಿಕೆಯನ್ನು ಬರೆಯುವ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. ಪ್ರತಿ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಮಂಗಳೂರಿಗೆ ಆಗಮಿಸಿದ್ದಾಗ ವಿದ್ಯಾರ್ಥಿಗಳು, ಸಾರ್ವಜನಿಕರು ಭೇಟಿ ಮಾಡಿದ್ದರು. ಮಕ್ಕಳನ್ನು ಓದಿಸಲು ಬೇರೆ ಕಡೆ ಕಳುಹಿಸುವ ಪರಿಸ್ಥಿತಿ ಬಂದಿದೆ. ಉದ್ಯಮಗಳಿಗೆ ಹೂಡಿಕೆ ಮಾಡಲು ಬರುತ್ತಿಲ್ಲ ಎಂಬುದು ಗಮನಕ್ಕೆ ತಂದರು. ಕೋಮುವಾದಿಗಳನ್ನು ಹತ್ತಿಕ್ಕಲು ಕೆಲಸ ಮಾಡದೇ ಇದ್ದರೆ ಕಷ್ಟವಾಗುತ್ತದೆ ಎಂಬುದನ್ನು ಅರಿತು ಸ್ಪೇಷಲ್ ಟಾಸ್ಕ್ ಫೋರ್ಸ್  ರಚಿಸಲಾಯಿತು‌ ಎಂದು ತಿಳಿಸಿದರು.

ಇಲ್ಲಿನ ಜನರು ಶಾಂತಿಯಿಂದ ಬಾಳುವಂತೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಶಾಂತಿಯ ತೋಟವಾಗಬೇಕು. ಈ ನಿಟ್ಟಿನಲ್ಲಿ ಪೊಲೀಸರು ಮತ್ತಷ್ಟು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಸಬೇಕು ಎಂದು ಹೇಳಿದರು.

ದೇಶದಲ್ಲಿ ಪೊಲೀಸರಿಗೆ ಸುಸಜ್ಜಿತ ಮನೆಗಳನ್ನು ಯಾವ ರಾಜ್ಯಗಳು ನಿರ್ಮಿಸಿಲ್ಲ. ನಮ್ಮ ಸರ್ಕಾರವು ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಡುತ್ತಿದೆ. ಆರಂಭದಲ್ಲಿ ಒಂದು ಮನೆ ನಿರ್ಮಿಸಲು 16 ಲಕ್ಷ ರೂ. ಖರ್ಚು ಆಗುತ್ತಿತ್ತು. ಪ್ರಸ್ತುತ 20 ಲಕ್ಷ ರೂ. ಖರ್ಚಾಗುತ್ತಿದೆ. ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಗೆ ವಸತಿ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ. ಕಳೆದ ಜೂನ್‌ನಲ್ಲಿ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ, ರಾಜ್ಯ ಪೊಲೀಸರಿಗೆ ಮನೆ ಕಟ್ಟಿಸಲು 5000 ಕೋಟಿ ರೂ. ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಪ್ರತಿಯೊಬ್ಬರಿಗು ಮನೆ ಕಲ್ಪಿಸಬೇಕು ಎಂಬ ಚಿಂತನೆ ಇದೆ. ಪ್ರಸಕ್ತ ವರ್ಷ 1600 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ವರ್ಷ 500 ರಿಂದ 1000 ಕೋಟಿ ರೂ‌. ಮೀಸಲಿಡಲಾಗುವುದು ಎಂದರು.

ಡ್ರಗ್ಸ್ ಚಟುವಟಿಕೆಯನ್ನು‌ ಮಟ್ಟ ಹಾಕಲು ಯಾವುದೇ ರೀತಿಯ ಕಾನೂನು ಕ್ರಮ ತೆಗೆದುಕೊಂಡರು ಪೊಲೀಸರ ಜೊತೆಗೆ ಇರುತ್ತೇನೆ‌. ಕಳೆದ ಒಂದು ವರ್ಷದ ಅವಧಿಯಲ್ಲಿ ಕಾರ್ಯಾಚರಣೆ 200 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚಿದ್ದಾರೆ. ಪೊಲೀಸರು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸದೇ ಹೋಗಿದ್ದರೆ ಇಷ್ಟೊಂದು ಪ್ರಮಾಣದ ಡ್ರಗ್ಸ್ ಪತ್ತೆಯಾಗುತ್ತಿರಲಿಲ್ಲ. ಡ್ರಗ್ಸ್ ದಂಧೆಯನ್ನು ನಿಯಂತ್ರಿಸಲು ಸೂಕ್ತ‌ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದರೆ, ಆಯಾ ವ್ಯಾಪ್ತಿಯ ಇನ್‌ಸ್ಪೆಕ್ಟರ್, ಡಿವೈಎಸ್‌ಪಿಗಳನ್ನೇ ಹೊಣೆ ಮಾಡಲಾಗುವುದು ಎಂದು ಹೇಳಿದರು.

ಬಿಇ, ಎಮ್‌ಎಸ್ಸಿ, ಎಮ್‌ಎ ಪದವಿದರರು ಇಲಾಖೆಗೆ ಸೇರಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಬಹುದೊಡ್ಡ ಬದಲಾವಣೆಗಳು ಕಾಣುತ್ತಿವೆ. ರಾಜ್ಯ ಪೊಲೀಸ್ ಇಲಾಖೆಯು ಸಮರ್ಥವಾಗಿ ಕೆಲಸ ಮಾಡುತ್ತಿದೆ.‌ ಏನೆಲ್ಲ ಸವಲತ್ತುಗಳ ಅವಶ್ಯಕತೆ ಇದೆಯೋ ನೀಡಲಾಗುವುದು. ದೂರು ಕೊಡಲು ಬರುವ ಸಾರ್ವಜನಿಕರೊಂದಿಗೆ ಸಹನೆ, ಜನಸ್ನೇಹಿಯಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಅಶೋಕ್ ರೈ, ಐವಾನ್ ಡಿಸೋಜಾ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್, ಮಂಗಳೂರು ನಗರ ಡಿಸಿಪಿ ಸಿದ್ಧಾರ್ಥ್ ಗೋಯಲ್ ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ