ಸಲಿಂಗಕಾಮಿಯ ಹತ್ಯೆ: ಆರೋಪಿಗೆ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಜಾಮೀನು
ಸಲಿಂಗ ಕಾಮ ನಡೆಸಿದ ಹಿನ್ನೆಲೆಯಲ್ಲಿ ಜಯಾನಂದ ಆಚಾರ್ಯ ಎಂಬ ವ್ಯಕ್ತಿಯ ಹತ್ಯೆ ಮಾಡಿದ್ದ ಆರೋಪಿ ರಾಜೇಶ್ ಪೂಜಾರಿ ಆಲಿಯಾಸ್ ರಾಜಾ ಎಂಬಾತನಿಗೆ ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಎಂ. ಜೋಷಿ ಈ ಆದೇಶ ಹೊರಡಿಸಿದ್ದಾರೆ. ಆರೋಪಿಯ ಪರವಾಗಿ ಮಂಗಳೂರಿನ ನ್ಯಾಯವಾದಿ ಹರ್ಷಕುಮಾರ್ ಅವರು ವಾದಿಸಿದ್ದರು.
ಪ್ರಕರಣದ ವಿವರ:
2022ರ ಅಕ್ಟೋಬರ್ 7ರಂದು ಜಯಾನಂದ ಆಚಾರ್ಯ ಅವರು ಆರೋಪಿಯನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದರು. ಆದರೆ, ತಾವು ನೀಡಿದ ಭರವಸೆಯಂತೆ ಅನೈಸರ್ಗಿಕ ಲೈಂಗಿಕ ಕ್ರಿಯೆಯ ನಂತರ ಆರೋಪಿಗೆ ಹಣ ನೀಡಿರಲಿಲ್ಲ. ಇದರಿಂದ ಕೋಪೋದ್ರಿಕ್ತನಾದ ಆರೋಪಿ ರಾಜೇಶ್ ಪೂಜಾರಿ ಆಲಿಯಾಸ್ ರಾಜಾ ಪ್ಲಾಸ್ಟಿಕ್ ದಾರದಿಂದ ಕುತ್ತಿಗೆಗೆ ಬಿಗಿದು ಉಸಿರುಕಟ್ಟಿಸಿ ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು.
ಜಯಾನಂದ ಆಚಾರ್ಯ ಅವರನ್ನು ಹತ್ಯೆ ಮಾಡಿದ ಬಳಿಕ ಮೃತ ದೇಹದ ಮೇಲೆ ಲುಂಗಿ ಹೊದಿಸಿ ಆರೋಪಿ ಪರಾರಿಯಾಗಿರುವುದು ತನಿಖೆ ಮತ್ತು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ ಎಂದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪಿ ವಿರುದ್ಧದ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿದ್ದು, ಸಿಸಿಟಿವಿ ದೃಶ್ಯಾವಳಿ ಮತ್ತು ಆರೋಪಿಯ ತಪ್ಪೊಪ್ಪಿಗೆ ಹೇಳಿಕೆಯೂ ಇದಕ್ಕೆ ಪೂರಕವಾಗಿದೆ. ಮರಣದಂಡನೆ ಶಿಕ್ಷೆ ವಿಧಿಸುವ ಪ್ರಕರಣ ಇದಾಗಿದ್ದು, ಆರೋಪಿಗೆ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್ ಪರ ಸರ್ಕಾರಿ ವಕೀಲರು ವಾದ ಮಂಡಿಸಿದ್ದರು. ಆರೋಪಿಯು ಅಪರಾಧಿಕ ಹಿನ್ನೆಲೆ ಹೊಂದಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಇಂಥದ್ದೇ ಅಪರಾಧಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ಅವರು ವಾದಿಸಿದ್ದರು.
ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಪೊಲೀಸರು ಆರೋಪಪಟ್ಟಿಯನ್ನೂ ಸಲ್ಲಿಸಿದ್ದಾರೆ. ಲಭ್ಯ ಸಾಕ್ಷ್ಯಾಧಾರಗಳನ್ನು ಪೊಲೀಸರು ಈಗಾಗಲೇ ಸಂಗ್ರಹಿಸಿದ್ದು, ಆರೋಪಿಯು ಸ್ಥಳೀಯವನಾಗಿದ್ದ ಕಾರಣ ನ್ಯಾಯವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಆರೋಪ ಪರ ವಕೀಲರು ವಾದಿಸಿದ್ದರು.
ಇದನ್ನು ಪರಿಗಣಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಎಂ. ಜೋಷಿ ಅವರ ನೇತೃತ್ವದ ನ್ಯಾಯಪೀಠ, ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw