ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಯು.ಟಿ.ಖಾದರ್ ಅವರೇ… | ಡಿ.ಕೆ.ಶಿವಕುಮಾರ್ ಮಾತುಗಳು
ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಯು.ಟಿ ಖಾದರ್ ಅವರೇ, ಕರ್ನಾಟಕ ರಾಜ್ಯದ ವಿಧಾನಸಭೆಯ ಇತಿಹಾಸಕ್ಕೆ ನೀವು ಸೇರಿದ್ದೀರಿ. ವೈಯಕ್ತಿಕವಾಗಿ ಹಾಗೂ ಎಲ್ಲಾ ಸದಸ್ಯರು ಹಾಗೂ ಸದಸ್ಯರ ಪರವಾಗಿ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ,ಶಿವಕುಮಾರ್ ಹೇಳಿದರು.
ನೂತನ ಸಭಾಧ್ಯಕ್ಷರಾಗಿ ಯು.ಟಿ.ಖಾದರ್ ಆಯ್ಕೆಯಾದ ಬಳಿಕ ಅಭಿನಂದನೆ ಸಲ್ಲಿಸಿದ ಮಾತನಾಡಿದ ಅವರು, ನಾನು ನಿಮ್ಮ ತಂದೆ ಜತೆ ಶಾಸಕನಾಗಿ ಕೆಲಸ ಮಾಡಿದ್ದೆ. ನಿಮ್ಮನ್ನು ಸೇವಾದಳದ ಕಾರ್ಯಕರ್ತನಾಗಿ, ವಿದ್ಯಾರ್ಥಿ ಘಟಕದ ಕಾರ್ಯಕರ್ತನಾಗಿ, ಶಾಸಕನಾಗಿ, ಮಂತ್ರಿಯಾಗಿ ನೋಡಿದ್ದೇನೆ. ಇಂದು ನಿಮ್ಮನ್ನು ಸ್ಪೀಕರ್ ಸ್ಥಾನದಲ್ಲಿ ನೋಡುತ್ತಿದ್ದೇನೆ. ಆ ಸ್ಥಾನ ಬಹಳ ಶ್ರೇಷ್ಠವಾದುದು. ನಾವು ಮಾಜಿ ಸ್ಪೀಕರ್ ವೈಕುಂಟ ಬಾಳಿಗಾ ಅವರ ಇತಿಹಾಸ ಕೇಳಿದ್ದೇವೆ. ಎಸ್.ಎಂ. ಕೃಷ್ಣ, ಜಗದೀಶ್ ಶೆಟ್ಟರ್, ರಮೇಶ್ ಕುಮಾರ್ ಅವರು ಈ ಸ್ಥಾನದಲ್ಲಿ ಕೂತಿದ್ದರು. ಇವರೆಲ್ಲರೂ ಆಡಳಿತ ಅಥವಾ ವಿರೋಧ ಪಕ್ಷದ ಯುವ ಸದಸ್ಯರನ್ನು ಎಬ್ಬಿಸಿ ಮಾತನಾಡಲು ಹೇಳುತ್ತಿದ್ದರು ಎಂದರು.
ವಿರೋಧ ಪಕ್ಷದ ನಾಯಕರು ಹೇಳಿದಂತೆ ಅವರು ಮಾತು, ಅಭಿಪ್ರಾಯ ಇರಬೇಕು. ವಿರೋಧ ಪಕ್ಷದವರು ಬಲಿಷ್ಠವಾದಷ್ಟು ನಾವು ಬಲಿಷ್ಠವಾಗಿರುತ್ತೇವೆ. ಅವರು ದುರ್ಬಲರಾದರೆ, ನಾವು ದುರ್ಬಲರಾಗುತ್ತೇವೆ. ನಮ್ಮ ತಪ್ಪುಗಳನ್ನು ಹೇಳುವ ಶಕ್ತಿ ಸಾಮರ್ಥ್ಯ ಅವರಲ್ಲಿ ಇರಲಿ. ಆಗ ನಾವು ತಪ್ಪು ಮಾಡದಂತೆ ಎಚ್ಚರಿಕೆ ವಹಿಸುವಂತಾಗುತ್ತದೆ. ಯಾವುದೇ ತಪ್ಪುಗಳಿಗೆ ಅವಕಾಶ ನೀಡದೇ, ಉತ್ತಮ ಆಡಳಿತ ನೀಡುವುದು ನಮ್ಮ ಗುರಿ ಎಂದರು.
ನೀವು ಸ್ನೇಹಜೀವಿ, ಮಾನವೀಯತೆಯ ಪ್ರತೀಕ. ಕೋಮುಸೌಹಾರ್ದತೆಗೆ ಮತ್ತೊಂದು ಹೆಸರು ಯು.ಟಿ. ಖಾದರ್ ಫರೀದ್ ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ. ಎಲ್ಲಾ ಸಮಾಜದ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದೀರಿ. ಹಿಜಾಬ್, ಹಲಾಲ್ ಗಲಾಟೆ ಸಮಯದಲ್ಲೂ ನಿಮ್ಮ ನಿಲುವು ದೇಶದ ಹಿತಾಸಕ್ತಿ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನಕ್ಕೆ ಬದ್ಧವಾಗಿತ್ತು ಎಂದರು.
ನೀವು ಎಲ್ಲರನ್ನು ವಿಶಾಲ ಹೃದಯದಿಂದ ನೋಡಿದ್ದೀರಿ, ನೀವು ನ್ಯಾಯಾಧೀಶರ ಸ್ಥಾನದಲ್ಲಿ ಕೂತಿದ್ದು, ನ್ಯಾಯಪೀಠದಿಂದ ಅನ್ಯಾಯ ಆಗಬಾರದು ಎಂಬ ಮಾತಿನಂತೆ, ತಾವು ಈ ಸ್ಥಾನದಲ್ಲಿ ಕೂತು ಎಲ್ಲರಿಗೂ ನ್ಯಾಯ ಒದಗಿಸಿ. ನಮ್ಮ ತಪ್ಪುಗಳನ್ನು ನೀವು ಸರಿಪಡಿಸಿ. ಕೆಲವರು ಉತ್ಸಾಹದಿಂದ ಅಥವಾ ಆಕ್ರೋಶದಿಂದ ಎಲ್ಲೆ ಮೀರಿ ಮಾತನಾಡಲು ಮುಂದಾಗುತ್ತಾರೆ ಅಂತಹವರನ್ನು ನಿಯಂತ್ರಣ ಮಾಡಿ ಎಂದು ಸಲಹೆ ನೀಡಿದರು.
ನಾನು ಆಗಾಗ್ಗೆ ಹೇಳುವಂತೆ ದೇವರು ವರವನ್ನೂ ನೀಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶ ನಿಮಗೆ ಈ ಸ್ಥಾನದ ಮೂಲಕ ಸಿಕ್ಕಿದೆ. ಈ ಸ್ಥಾನದಲ್ಲಿ ಕೂತಿರುವ ಅನೇಕರು ನಂತರ ಎತ್ತರದ ಸ್ಥಾನಕ್ಕೆ ಹೋಗಿರುವುದನ್ನು ನೋಡಿದ್ದೇನೆ. ನೀವು ಕೂಡ ಅತ್ಯುನ್ನತ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ ಎಂದರು.
ಕಾಗೋಡು ತಿಮ್ಮಪ್ಪ ಅವರು ಈ ಸ್ಥಾನದಲ್ಲಿ ಕೂತು ಸರ್ಕಾರವನ್ನು ಬಡಿದೆಬ್ಬಿಸಿ ಸಾಮಾಜಿಕ ಬದ್ಧತೆ ಹಾಗೂ ರಾಜ್ಯದ ರೈತರ ರಕ್ಷಣೆಗೆ ಹೇಗೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು ಎಂಬುದನ್ನು ನೋಡಿದ್ದೇವೆ. ಸರ್ಕಾರದವರಿಗೆ ಒಂದು ವಿರೋಧ ಪಕ್ಷದವರಿಗೆ ಒಂದು ನ್ಯಾಯ ಬೇಡ. ಎಲ್ಲರನ್ನು ಸಮಾನರನ್ನಾಗಿ ನೋಡಿ, ಎಲ್ಲರನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗಿ. ನೀವು ಐದು ಬಾರಿ ಸತತವಾಗಿ ಆಯ್ಕೆಯಾಗಿದ್ದು, ಈ ಜವಾಬ್ದಾರಿ ನಿಭಾಯಿಸುವ ಸಾಮರ್ಥ್ಯ ನಿಮಗಿದೆ. ನಿಮ್ಮನ್ನು ಈ ಸ್ಥಾನದವರೆಗೂ ಬೆಳೆಸಿರುವ ನಿಮ್ಮ ಕ್ಷೇತ್ರದ ಜನರಿಗೂ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದರು.
ನೀವು ಈಗ ಪಕ್ಷಾತೀತರಾಗಿದ್ದೀರಿ, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ. ಸರ್ಕಾರ ಹಾಗೂ ಎಲ್ಲಾ ಸದಸ್ಯರು ನಿಮಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ನಿಮ್ಮ ಮುಂದಿರುವ ಗ್ರಂಥವೇ ಖುರಾನ್, ಬೈಬಲ್, ಭಗವದ್ಗೀತೆಯಾಗಿದೆ. ಅದನ್ನು ಇಟ್ಟುಕೊಂಡು ಎಲ್ಲರಿಗೂ ಮಾರ್ಗದರ್ಶನ ಮಾಡಿ. ನೀವು ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ಆ ಸ್ಥಾನ ಎಲ್ಲರಿಗಿಂತಲೂ ದೊಡ್ಡದು. ನೀವು ಪಕ್ಷಕ್ಕಾಗಿ ಅನೇಕ ತ್ಯಾಗ ಮಾಡಿದ್ದೀರಿ. ನಿಮಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw