ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ: ಕಿಚ್ಚ ಸುದೀಪ್ ಪ್ರತಿಕ್ರಿಯೆ - Mahanayaka
6:06 PM Wednesday 11 - December 2024

ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ: ಕಿಚ್ಚ ಸುದೀಪ್ ಪ್ರತಿಕ್ರಿಯೆ

darshan sudeep
20/12/2022

ನಟ ದರ್ಶನ್ ಮೇಲೆ ಹೊಸಪೇಟೆಯಲ್ಲಿ ಕಿಡಿಗೇಡಿಗಳು ಚಪ್ಪಲಿ ಎಸೆದು ಅವಮಾನಿಸಿರುವ ಘಟನೆಯನ್ನು ಇಡೀ ಸ್ಯಾಂಡಲ್ ವುಡ್ ಖಂಡಿಸಿದ್ದು, ಘಟನೆಯ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದೆ. ಈ ನಡುವೆ ದರ್ಶನ್ ಅವರ ಆಪ್ತ ಸ್ನೇಹಿತರಾಗಿದ್ದ ನಟ ಕಿಚ್ಚ ಸುದೀಪ್ ಅವರು ಕೂಡ ಘಟನೆಯನ್ನು ಖಂಡಿಸಿದ್ದಾರೆ.

ಹಲವು ಸಮಯಗಳ ವರೆಗೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದ ಕಿಚ್ಚ ಸುದೀಪ್ ಹಾಗೂ ದರ್ಶನ್ ಸ್ನೇಹವು ಚಾನೆಲ್ ವೊಂದರ ಸಂದರ್ಶನದಲ್ಲಿ ಕಿಚ್ಚ ಆಡಿದ ಮಾತಿನಿಂದ ಒಡೆದು ಹೋಯಿತು. ದರ್ಶನ್ ಹಾಗೂ ಸುದೀಪ್ ಅವರ ನಡುವೆ ಉಂಟಾದ ತಪ್ಪು ತಿಳುವಳಿಕೆ ಅವರ ಸ್ನೇಹಕ್ಕೆ ಕೊಳ್ಳಿ ಇಟ್ಟಿತ್ತು. ಇತ್ತೀಚೆಗಷ್ಟೇ ದರ್ಶನ್ ಹಾಗೂ ಸುದೀಪ್ ಅವರು ಮತ್ತೆ ಒಂದಾಗುವ ಲಕ್ಷಣಗಳು ಕಂಡು ಬರುತ್ತಿವೆ. ಇದೀಗ ದರ್ಶನ್ ಅವರಿಗೆ ಆಗಿರುವ ಅವಮಾನದ ವಿರುದ್ಧ ಸುದೀಪ್ ಧ್ವನಿ ಎತ್ತುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ದರ್ಶನ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ ಮಾತುಗಳನ್ನು ಗುರಿಯಾಗಿಟ್ಟುಕೊಂಡು, ಪುನೀತ್ ರಾಜ್ ಕುಮಾರ್ ಗೆ ಅವಮಾನ ಮಾಡಿದ್ದಾರೆ ಎಂದು ಕೆಲವರು ವಿವಾದ ಸೃಷ್ಟಿಸಿದ್ದರು. ದರ್ಶನ್ ಆಡಿದ ಮಾತುಗಳೇ ಬೇರೆ, ಆದರೆ ಸೃಷ್ಟಿಸಿರುವ ವಿವಾದಗಳೇ ಬೇರೆಯಾಗಿತ್ತು. ಈ ವಿವಾದ ಸುಖಾಂತ್ಯವಾಗಿತ್ತು. ಆದರೆ ಪುನೀತ್ ಅಭಿಮಾನಿಗಳ ನಡುವೆಯೇ ದರ್ಶನ್ ಅವರು ತಮ್ಮ ಕ್ರಾಂತಿ ಚಿತ್ರದ ಹಾಡನ್ನು ಬಿಡುಗಡೆ ಮಾಡಲು ತೀರ್ಮಾನಿಸಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಕಿಡಿಗೇಡಿಯೋರ್ವ ದರ್ಶನ್ ಅವರ ಮೇಲೆ ಚಪ್ಪಲಿ ಎಸೆಯುವ ಮೂಲಕ ವಿಕೃತಿ ಮೆರೆದಿದ್ದಾನೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್, ನಮ್ಮ ನೆಲ, ಭಾಷೆ ಮತ್ತು ಸಂಸ್ಕೃತಿ, ಪ್ರೀತಿ ಮತ್ತು ಗೌರವವನ್ನು ಸಾರುತ್ತದೆ. ಇಲ್ಲಿ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವಿದೆ. ಸಮಸ್ಯೆಯನ್ನು ಹಲವು ವಿಧಾನಗಳಲ್ಲಿ ಪರಿಹರಿಸಬಹುದು. ಪ್ರತಿಯೊಬ್ಬ ವ್ಯಕ್ತಿಯೂ ಗೌರವದಿಂದ ನಡೆಸಿಕೊಳ್ಳಲು ಅರ್ಹರಿರುತ್ತಾರೆ. ತಾಳ್ಮೆಯಿಂದ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬಹುದು ಎಂದಿದ್ದಾರೆ.

ಮೊನ್ನೆ ಹೊಸಪೇಟೆಯಲ್ಲಿ ನಡೆದ ಘಟನೆಯ ವಿಡಿಯೋ ನೋಡಿದ ನನ್ನ ಮನಸ್ಸಿಗೆ ತೀರಾ ನೋವಾಗಿದೆ. ಪಕ್ಕದಲ್ಲಿ ಚಿತ್ರದ ನಾಯಕಿ ಹಾಗೂ ಅನೇಕ ಮಂದಿ ಇದ್ದಾರೆ. ಅವರು ಈ ಯಾವುದೇ ಸಮಸ್ಯೆಯ ಭಾಗವಾಗಿರಲಿಲ್ಲ. ಆದರೂ ಸಾರ್ವಜನಿಕ ವೇದಿಕೆಯಲ್ಲಿ ಅವರನ್ನು ಕೂಡ ಅವಮಾನ ಮಾಡುವುದನ್ನು ನೋಡಿದರೆ, ನಾವು ಕನ್ನಡಿಗರು ಇಂತಹ ಅನ್ಯಾಯದ ಪ್ರಕ್ರಿಯೆಯನ್ನು ಎದುರಿಸಬೇಕೇ? ಅನ್ನೋ ಪ್ರಶ್ನೆ ಮೂಡುತ್ತದೆ. ಈ ರೀತಿ ಸಾರ್ವಜನಿಕವಾಗಿ ಆಕ್ರೋಶ ತೋರಿಸುವುದು ಸಮಸ್ಯೆಗೆ ಪರಿಹಾರವೇ? ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದ್ದಾರೆ.

ದರ್ಶನ್ ವಿಚಾರದಲ್ಲಿ ಅವರ ಬಗ್ಗೆ ಪುನೀತ್ ಅಭಿಮಾನಿಗಳಿಗೆ ಬೇಸರ, ಅಸಮಾಧಾನ ಇರಬಹುದು, ಆದರೆ ಇಂತಹ ಪ್ರತಿಕ್ರಿಯೆ ನೀಡುವುದನ್ನು ಸ್ವತಃ ಪುನೀತ್ ಅವರೇ ಪ್ರೋತ್ಸಾಹಿಸುತ್ತಿದ್ದರೆ? ಅವರು ಹೇಗೆ ಬದುಕಿದ್ದರು ಎಂದು ಅವರ ಅಭಿಮಾನಿಗಳಿಗೆ ಚೆನ್ನಾಗಿ ತಿಳಿದಿದೆ ಎಂದು ಭಾವಿಸುತ್ತೇನೆ. ತುಂಬಿದ ಜನರ ಮಧ್ಯೆ ಒಬ್ಬರ ಕ್ಷುಲ್ಲಕ ನಡವಳಿಕೆ ಇಡೀ ವ್ಯವಸ್ಥೆಯನ್ನು ಹಾಳು ಮಾಡಬಾರದು. ಪ್ರೀತಿ, ಗೌರವ ಮತ್ತು ಘಟನೆಯನ್ನು ಎತ್ತಿ ತೋರಿಸುವ ಪುನೀತ್ ಅಭಿಮಾನಿಗಳು ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರಬಹುದು.

ದರ್ಶನ್ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದಾಕ್ಷಣ ನನ್ನ ಮನಸ್ಸಿಗೆ ತಟ್ಟಿದ ವಾಸ್ತವ ವಿಷಯಗಳ ಬಗ್ಗೆ ಮಾತನಾಡುವುದನ್ನು ನಾನೆಂದಿಗೂ ನಿಲ್ಲಿಸುವುದಿಲ್ಲ. ಚಪ್ಪಲಿ ಎಸೆಯುವಂತಹ ಕೃತ್ಯಗಳಿಗೆ ಖಂಡಿತಾ ದರ್ಶನ್ ಅರ್ಹರಲ್ಲ, ಈ ಘಟನೆ ನನ್ನ ಮನಸ್ಸನ್ನು ಘಾಸಿಕೊಳಿಸಿದೆ ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ