ಸಿಎಎ ವಿರುದ್ಧ ಪ್ರತಿಭಟನೆಗೆ ಏರ್ಪಾಡು ಮಾಡುವುದು ಹೇಗೆ ಅಪರಾಧ? ದೆಹಲಿ ಹೈಕೋರ್ಟ್ ಪ್ರಶ್ನೆ
ಸಿಎಎ ವಿರುದ್ಧ ಪ್ರತಿಭಟನೆಗೆ ಏರ್ಪಾಡು ಮಾಡುವುದು ಯುಎಪಿಎ ಪ್ರಕಾರ ಹೇಗೆ ಅಪರಾಧವಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ. ದೆಹಲಿ ಗಲಭೆಯ ಸಂಚುಕೋರರೆಂದು ಆರೋಪಿಸಿ ಯುಎಪಿಎ ಪ್ರಕರಣದಡಿಯಲ್ಲಿ ಬಂಧಿತರಾಗಿ ವರ್ಷಗಳಿಂದ ಜೈಲಲ್ಲಿರುವ ಉಮರ್ ಖಾಲಿದ್, ಶಾರ್ಜಿಲ್ ಇಮಾಮ್, ಗುಲ್ಫಿಶ ಫಾತಿಮಾ, ಖಾಲಿದ್ ಸೈಫಿ ಮುಂತಾದವರ ಜಾಮೀನು ಕೋರಿಕೆಯ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುತ್ತಾ ದೆಹಲಿ ಹೈಕೋರ್ಟ್ ಈ ಪ್ರಶ್ನೆಯನ್ನು ಎತ್ತಿದೆ.
ಪ್ರತಿಭಟನೆಗೆ ಏರ್ಪಾಡು ಮಾಡುವುದು ನಿಯಮದ ಪ್ರಕಾರ ಅಪರಾಧವಾಗುತ್ತದೋ ಅಥವಾ ಆ ಪ್ರತಿಭಟನೆಯು ಸಂಘರ್ಷ ಸ್ಥಿತಿಗೆ ಕಾರಣವಾದಾಗ ಯುಎಪಿಎ ನಿಯಮವನ್ನು ಹೇರಲಾಗುತ್ತದೋ ಎಂದು ಜಸ್ಟಿಸ್ ನವೀನ್ ಚಾವ್ಲಾ ಮತ್ತು ಜಸ್ಟಿಸ್ ಶೈಲೇಂದ್ರ ಕೌರ್ ಎಂಬಿವರ ಡಿವಿಜನಲ್ ಬೆಂಚ್ ದೆಹಲಿ ಪೊಲೀಸರನ್ನು ಪ್ರಶ್ನಿಸಿದೆ.
ಇದೇ ವೇಳೆ ವಾಟ್ಸಪ್ ಗ್ರೂಪ್ ರಚಿಸಿ ಗಲಭೆಗೆ ಮತ್ತು ಹಿಂಸಾಚಾರಕ್ಕೆ ಈ ಮಂದಿ ಕರೆ ನೀಡಿರುವ ದಾಖಲೆ ನಮ್ಮ ಬಳಿ ಇದೆ ಎಂದು ಪೊಲೀಸರು ವಾದಿಸಿದರು. ಹಾಗಿದ್ದರೆ ಅವುಗಳನ್ನು ಕೋರ್ಟ್ ನ ಮುಂದೆ ಹಾಜರುಪಡಿಸಿ ಎಂದು ನ್ಯಾಯಾಲಯ ಪೊಲೀಸರಿಗೆ ಆದೇಶ ನೀಡಿದೆ. ಇದೇ ವೇಳೆ ನಿಯಮದ ವಿರುದ್ಧ ಪ್ರತಿಭಟನೆ ನಡೆಸುವ ಜನರು ರಸ್ತೆ ತಡೆ ನಿರ್ಮಿಸಿದರೆ ಅದಕ್ಕೂ ನೀವು ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸುತ್ತೀರಾ ಎಂದು ಕೋರ್ಟು ಪೊಲೀಸರನ್ನು ಪ್ರಶ್ನಿಸಿದೆ.
ಗಲಭೆಯ ಸಂಚು ನಡೆಸುವುದಕ್ಕಾಗಿ ಅವರು ವಾಟ್ಸಪ್ ಗ್ರೂಪ್ ರಚಿಸಿದ್ಧಾರೋ ಅಥವಾ ಪ್ರತಿಭಟನೆಗೆ ಜನರನ್ನು ಸೇರಿಸುವುದಕ್ಕಾಗಿ ವಾಟ್ಸಾಪ್ ಗ್ರೂಪ್ ರಚಿಸಿದ್ದಾರೋ ಎಂಬ ಬಗ್ಗೆ ನಿಮ್ಮಲ್ಲಿ ಸೂಕ್ತ ದಾಖಲೆಗಳಿದ್ದರೆ ಅದನ್ನು ಹಾಜರುಪಡಿಸಿ ಎಂದು ಕೂಡ ನ್ಯಾಯಾಲಯ ಹೇಳಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj