ಋತುಬಂಧವು ಮೂಳೆ ಮತ್ತು ಹೃದಯದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ: ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ? - Mahanayaka

ಋತುಬಂಧವು ಮೂಳೆ ಮತ್ತು ಹೃದಯದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ: ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ?

Bone and heart health
21/10/2024

ಎಲ್ಲಾ ಮಹಿಳೆಯರು ತಮ್ಮ ಜೀವನದ ಯಾವುದಾದರೊಂದು ಹಂತದಲ್ಲಿ ಋತುಬಂಧವನ್ನು ಅನುಭವಿಸುತ್ತಾರಾದರೂ ಸಹ, ಅದರಿಂದ ಅವರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಉಂಟಾಗುವ ಅದರ ಪರಿಣಾಮವು ಅವರಲ್ಲಿನ ಅನೇಕರಿಗೆ ನಿಜವಾಗಿಯೂ ಅರ್ಥವಾಗುವುದೇ ಇಲ್ಲ.

ಇದು ಹೆಚ್ಚು ಗಮನ ಹರಿಸದ ಒಂದು ಪರಿಸ್ಥಿತಿಯಾಗಿದ್ದು, ಅದರಿಂದಾಗಿ ಮಹಿಳೆಯರು ತಮ್ಮ ಜೀವನದಲ್ಲಿ ಈ ಮುಂದಿನ ಅಧ್ಯಾಯಕ್ಕೆ ಸಿದ್ಧರಾಗಲು ಕಷ್ಟವಾಗುತ್ತದೆ. ಋತುಬಂಧವು ವೈವಿಧ್ಯಮಯ ಚಿಂತೆಗಳನ್ನು ಹುಟ್ಟುಹಾಕುತ್ತದೆ. ಕೆಲವರಿಗೆ, ಇನ್ನು ಮುಂದಿನ ದಿನಗಳಲ್ಲಿ ಸೆಳೆತದಿಂದ ಬಿಡುಗಡೆಯಾಗುವ ಸಮಾಧಾನದ ಭಾವನೆ, ಮತ್ತು ಸ್ವಯಂ-ಶೋಧನೆಯ ಪ್ರಜ್ಞೆ ಮತ್ತು ಮುಂದೇನು ಎಂಬ ಕುತೂಹಲ. ಆದರೆ ಈ ಹಂತವು ತನ್ನೊಂದಿಗೆ ಮಹಿಳೆಯ ದೇಹದಲ್ಲಿ ಬದಲಾವಣೆಗಳನ್ನು ಮತ್ತು ಈಸ್ಟ್ರೊಜೆನ್ ಮಟ್ಟಗಳಲ್ಲಿ ಕುಸಿತವನ್ನು ಸಹ ತರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.

ಈ ಬದಲಾವಣೆಗಳಿಂದಾಗಿ, ಋತುಬಂಧದ ನಂತರ ಉಂಟಾಗಬಹುದಾದ ಸಾಮಾನ್ಯ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ಮಹಿಳೆಯರು ತಿಳಿದಿರಬೇಕು. ಬೆಂಗಳೂರಿನ ಅನುಗ್ರಹ ನರ್ಸಿಂಗ್ ಹೋಮ್‌ನ ಹಿರಿಯ ಸಲಹೆಗಾರ್ತಿ ಶೀಲಾ ಮಾನೆ ಮಾತನಾಡಿ, “ಭಾರತದಲ್ಲಿ ಋತುಬಂಧಕ್ಕೆ ಒಳಗಾಗುವ ಮಹಿಳೆಯರನ್ನು ಆಧರಿಸಿ ಮಾಡಿದ ಅಧ್ಯಯನಗಳಲ್ಲಿ ಸಾಮಾನ್ಯವಾಗಿ ವರದಿಯಾಗಿರುವ ರೋಗಲಕ್ಷಣಗಳಲ್ಲಿ ಮೈ ಬಿಸಿಯಾಗುವುದು ಮತ್ತು ರಾತ್ರಿಯಲ್ಲಿ ಬೆವರುವಿಕೆಗಳ ಜೊತೆಗೆ ಇತರ ರೋಗಲಕ್ಷಣಗಳಾದ ನಿದ್ರಾಹೀನತೆ, ಆತಂಕ, ಕಿರಿಕಿರಿ, ಕೀಲು ನೋವು ಮತ್ತು ಯೋನಿ ಶುಷ್ಕತೆ ಮುಂತಾದ ಲಕ್ಷಣಗಳು ಕಂಡುಬಂದಿವೆ. 1 ಇಂಡಿಯನ್ ಮೆನೋಪಾಸ್ ಸೊಸೈಟಿ ನಡೆಸಿದ ಅಧ್ಯಯನದಲ್ಲಿ, ಈ ರೋಗಲಕ್ಷಣಗಳ ಸಂಭವವು 75% ಎಂದು ಕಂಡುಬಂದಿದೆ.

ನಿಧಾನವಾಗಿ ಈ ರೋಗಲಕ್ಷಣಗಳ ಬಗೆಗಿನ ಅರಿವು ಬೆಳೆಯುತ್ತಿದ್ದರೂ, ಒಟ್ಟಾರೆ ಆರೋಗ್ಯದ ಮೇಲಿನ ಅದರ ಪರಿಣಾಮವನ್ನು ಬಹಳ ಕಡಿಮೆ ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾವು ಅಂದುಕೊಳ್ಳಬಹುದು, ಆದರೆ ಋತುಬಂಧದ ನಂತರದ ಸಾಮಾನ್ಯ ಪರಿಸ್ಥಿತಿಗಳನ್ನು ಹೆಚ್ಚಿನ ಜನರು ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ. ಮಹಿಳೆಯರು ಆಸ್ಟಿಯೊಪೊರೋಸಿಸ್, ಹೃದ್ರೋಗ ಮತ್ತು ಸ್ನಾಯುವಿನ ದ್ರವ್ಯರಾಶಿಯ ನಷ್ಟದ ಹೆಚ್ಚಿನ ಅಪಾಯವನ್ನು ಹೊಂದಿರಬಹುದು, ಈಸ್ಟ್ರೊಜೆನ್ ಮಟ್ಟದಲ್ಲಿನ ಇಳಿಕೆಯೇ ಇದಕ್ಕೆ ಹೆಚ್ಚಿನ ಕಾರಣವಾಗಿರುತ್ತದೆ. ಮೂಳೆ ಮತ್ತು ಹೃದಯದ ಆರೋಗ್ಯದ ಮೇಲೆ ಋತುಬಂಧದ ಪ್ರಭಾವವನ್ನು ಅರ್ಥಮಾಡಿಕೊಳ್ಳುವುದು ಅವುಗಳನ್ನು ತಡೆಗಟ್ಟಲು, ಗುರುತಿಸಲು ಅಥವಾ ಅವುಗಳನ್ನು ಮುಂಚಿತವಾಗಿ ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ.”

ಅಬಾಟ್ ಇಂಡಿಯಾದ ವೈದ್ಯಕೀಯ ವ್ಯವಹಾರಗಳ ಮುಖ್ಯಸ್ಥ ಡಾ. ರೋಹಿತಾ ಶೆಟ್ಟಿ ಅವರು, ”ಮೂಳೆ ಮತ್ತು ಹೃದಯದ ಆರೋಗ್ಯದ ಮೇಲೆ ಋತುಬಂಧವು ಬೀರುವ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಮಹಿಳೆಯರಿಗೆ ಸಹಾಯ ಮಾಡುವುದು ಮುಖ್ಯವಾಗಿದೆ. ಅಬಾಟ್ ಮತ್ತು ಇಪ್ಸೋಸ್ ನ ಸಮೀಕ್ಷೆಯ ಪ್ರಕಾರ, ಋತುಬಂಧವು ಮಹಿಳೆಯ ವೈಯಕ್ತಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ ಎಂದು 82% ಜನರು ನಂಬುತ್ತಾರೆ. ಋತುಬಂಧದ ಸಮಯದಲ್ಲಿ ಹಾಗೂ ಆ ನಂತರದಲ್ಲಿ ಮಹಿಳೆಯರು ತಮ್ಮ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಲು ಸಹಾಯ ಮಾಡುವುದು ಹೆಚ್ಚು ಮುಖ್ಯವಾಗುತ್ತದೆ.”

ಋತುಬಂಧದ ನಂತರದ ಅತ್ಯಂತ ಸಾಮಾನ್ಯವಾದ ಒಂದು ಪರಿಸ್ಥಿತಿಯೆಂದರೆ ಅದು ಆಸ್ಟಿಯೊಪೊರೋಸಿಸ್, ಇದು 50 ವರ್ಷಕ್ಕಿಂತ ಮೇಲ್ಪಟ್ಟ ಮೂರು ಮಹಿಳೆಯರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತದೆ.2 ಈಸ್ಟ್ರೊಜೆನ್ ಮಟ್ಟದಲ್ಲಿನ ಇಳಿಕೆಯಿಂದಾಗಿ ಮೂಳೆ ನಷ್ಟ ಮತ್ತು ದ್ರವ್ಯರಾಶಿಯ ನಷ್ಟ ಉಂಟಾಗಿ, ಅವುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಮುರಿಯುವ ಅಪಾಯವನ್ನು ಹೆಚ್ಚಿಸುತ್ತದೆ. 3 ಪ್ರಸ್ತುತ, ಭಾರತದಲ್ಲಿ ಸರಿಸುಮಾರು 61 ಮಿಲಿಯನ್ ಜನರು ಆಸ್ಟಿಯೊಪೊರೋಸಿಸ್ ಹೊಂದಿದ್ದಾರೆ ಮತ್ತು ಅವರಲ್ಲಿ 80% ರಷ್ಟು ಮಹಿಳೆಯರು.4 ಆಸ್ಟಿಯೊಪೊರೋಸಿಸ್ ಸಾಮಾನ್ಯವಾಗಿ ‘ಮೂಕ ಸ್ಥಿತಿ’ಯಾಗಿದ್ದು, ಮುರಿತ ಸಂಭವಿಸುವವರೆಗೆ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಕೆಲವೊಮ್ಮೆ, ಎತ್ತರವು ಕಡಿಮೆಯಾಗಬಹುದು, ಇದರ ಜೊತೆಗೆ ಬೆನ್ನು ನೋವು ಅಥವಾ ಬೆನ್ನು ಬಾಗುವಿಕೆ ಸಹ ಜೊತೆಗೂಡಬಹುದು. ಆಸ್ಟಿಯೊಪೊರೋಸಿಸ್‍ಗೆ ಸಂಬಂಧಿಸಿದ ಗಾಯಗಳು ಅತ್ಯಂತ ಗಂಭೀರವಾಗಿರಬಹುದು ಮತ್ತು ನೋವು ಮತ್ತು ದೀರ್ಘಾವಧಿಯ ಅಂಗವೈಕಲ್ಯವನ್ನು ಉಂಟುಮಾಡಬಹುದು.5 ನಿಮ್ಮ ವೈದ್ಯರ ಸಲಹೆ ಪಡೆಯುವುದು ಮತ್ತು ನಿಮ್ಮ ಅಪಾಯಕಾರಿ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ.

ನಿಮ್ಮ ಮೂಳೆಗಳನ್ನು ಬಲಪಡಿಸಲು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಹಣ್ಣುಗಳು, ತರಕಾರಿಗಳು ಮತ್ತು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ಸೇವಿಸುವುದು, ಧೂಮಪಾನವನ್ನು ನಿಲ್ಲಿಸುವುದು ಮತ್ತು ಮದ್ಯಸೇವನೆ ಕಡಿಮೆ ಮಾಡುವುದು ಮುಂತಾದ ಕೆಲವು ಜೀವನಶೈಲಿಯ ಬದಲಾವಣೆಗಳನ್ನು ನೀವು ಪರಿಗಣಿಸಬಹುದು.

ಋತುಬಂಧದ ನಂತರ ಮಹಿಳೆಯರಲ್ಲಿ ಸ್ನಾಯುವಿನ ದ್ರವ್ಯರಾಶಿಯ ನಷ್ಟದ ಅಪಾಯವಿರುರುತ್ತದೆ, ವಯಸ್ಸಾದಂತೆ ಚಲನಶೀಲತೆ, ಸಮತೋಲನ ಮತ್ತು ಶಕ್ತಿಗೆ ಇದು ಮುಖ್ಯವಾಗಿದೆ. ಮಹಿಳೆಯರಲ್ಲಿ ಸ್ನಾಯುವಿನ ದ್ರವ್ಯರಾಶಿಯ ನಷ್ಟ ಅಥವಾ ಸಾರ್ಕೊಪೆನಿಯಾ ತ್ವರಿತಗೊಳ್ಳುತ್ತದೆ, ಇದು ಋತುಬಂಧದಿಂದಾಗಿ ಪುರುಷರಿಗಿಂತ ಸುಮಾರು ಒಂದು ದಶಕಕ್ಕಿಂತ ಮುಂಚಿತವಾಗಿಯೇ ಸಂಭವಿಸುತ್ತದೆ. ಇದರಿಂದಾಗಿ ತೂಕದ ಹೆಚ್ಚಳದಂತಹ ತನ್ನದೇ ಆದ ಸಂಕೀರ್ಣತೆಗಳೂ ಬರುತ್ತವೆ ಮತ್ತು ಮೆಟ್ಟಿಲುಗಳನ್ನು ಹತ್ತುವಂತಹ ಸರಳ ಕಾರ್ಯಗಳನ್ನು ಹೆಚ್ಚು ಸವಾಲಾಗಿ ಮಾಡುತ್ತದೆ.6 ಆಯಾಸ ಮತ್ತು ಶಕ್ತಿಯು ಕಡಿಮೆಯಾಗುವುದು ವೈದ್ಯರನ್ನು ಸಂಪರ್ಕಿಸಲು ಎಚ್ಚರಿಕೆಯ ಚಿಹ್ನೆಗಳು. ಸ್ನಾಯುವಿನ ದ್ರವ್ಯರಾಶಿಯನ್ನು ಹೆಚ್ಚಿಸಲಿಕ್ಕಾಗಿ ನೀವು– ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ತೂಕವನ್ನು ಎತ್ತುವುದು, ಹಲವಾರು ಸ್ನಾಯುಗಳು ಕೆಲಸ ಮಾಡುವ ಸಂಪೂರ್ಣ-ದೇಹದ ವ್ಯಾಯಾಮಗಳನ್ನು ಮಾಡುವುದು, ಪೌಷ್ಟಿಕ ಆಹಾರವನ್ನು ತಿನ್ನುವುದು ಮತ್ತು ಉತ್ತಮ ಗುಣಮಟ್ಟದ ನಿದ್ರೆ ಮಾಡುವುದು – ಮುಂತಾದ. ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬಹುದು.

Bone and heart health 1

ಋತುಬಂಧದ ಪ್ರಾರಂಭದೊಂದಿಗೆ, ಹೃದ್ರೋಗದ ಅಪಾಯವೂ ಹೆಚ್ಚಾಗುತ್ತದೆ. ಏಕೆಂದರೆ ಈಸ್ಟ್ರೊಜೆನ್ ಕೊರತೆಯು ಕೊಲೆಸ್ಟ್ರಾಲ್ ಹೆಚ್ಚಳದಂತಹ ಲಿಪಿಡ್ ಮಟ್ಟದಲ್ಲಿನ ಬದಲಾವಣೆಗಳಿಗೆ ಕಾರಣವಾಗಬಹುದು. 7 ಋತುಬಂಧ-ಸಂಬಂಧಿತ ಮೈ ಬಿಸಿಯಾಗುವಿಕೆ ಮತ್ತು ರಾತ್ರಿಯಲ್ಲಿನ ಬೆವರುವಿಕೆಗಳು ಅಧಿಕ ರಕ್ತದೊತ್ತಡ ಮತ್ತು ಇತರ ಹೃದಯರಕ್ತನಾಳದ ಸಂಬಂಧಿತ ಅಪಾಯಕಾರಿ ಅಂಶಗಳಿಗೆ ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು.8 ಜೊತೆಗೆ, ಏರಿದ ವಯಸ್ಸಿನಲ್ಲಿ ಸಹಜ ಋತುಬಂಧ ಅನುಭವಿಸುವ ಮಹಿಳೆಯರಲ್ಲಿ ಹೃದಯರಕ್ತನಾಳದ ಕಾಯಿಲೆಯ ಅಪಾಯವು ಕಡಿಮೆಯಾಗಿರುತ್ತದೆ. ಸಂತಾನೋತ್ಪತ್ತಿ ವರ್ಷಗಳಲ್ಲಿ ಹದಗೆಟ್ಟ ಹೃದಯರಕ್ತನಾಳದ ಆರೋಗ್ಯ, ಧೂಮಪಾನ ಮತ್ತು ಪ್ರಾಯಶಃ ಜೆನೆಟಿಕ್ಸ್ ಗಳು ಬಹಳ ಬೇಗ ಋತುಬಂಧವು ಆರಂಭವಾಗಲು ಕಾರಣವಾಗುವ ಅಂಶಗಳು.7 ಋತುಬಂಧ ಪರಿವರ್ತನೆಯ ಸಮಯದಲ್ಲಿ ಖಿನ್ನತೆಯು ಹೃದಯರಕ್ತನಾಳದ ಕಾಯಿಲೆಯ ಹೆಚ್ಚಿನ ಅಪಾಯಕ್ಕೆ ಕಾರಣವಾಗಬಹುದು ಎಂದು ಸಂಶೋಧನೆಯು ತೋರಿಸುತ್ತದೆ.9 ಸಮಾಲೋಚನೆ, ಅರಿವಿನ ವರ್ತನೆಯ ಚಿಕಿತ್ಸೆ, ಅಥವಾ ಸಾವಧಾನತೆಯ ವಿಧಾನಗಳೊಂದಿಗೆ ನಿಭಾಯಿಸಲು ಮಾರ್ಗಗಳನ್ನು ಕಂಡುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ, ಇವೆಲ್ಲವೂ ಸಾಮಾಜಿಕ ಬೆಂಬಲವನ್ನು ಅವಲಂಬಿಸಿವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಮಹಿಳೆಯರು ವಯಸ್ಸಾದಂತೆ, ಋತುಬಂಧದ ನಂತರದ ಸಾಮಾನ್ಯ ಆರೋಗ್ಯ ಪರಿಸ್ಥಿತಿಗಳ ನಿಯಮಿತ ತಪಾಸಣೆ ಮತ್ತು ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಅವರಿಗೆ ಮುಖ್ಯವಾಗಿದೆ. ಯಾವ ಲಕ್ಷಣಗಳನ್ನು ಗಮನಿಸಬೇಕು ಎಂಬುದನ್ನು ತಿಳಿದುಕೊಳ್ಳುವ ಮೂಲಕ, ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಋತುಬಂಧದ ನಂತರದ ಜೀವನವನ್ನು ಉತ್ತಮವಾಗಿ ನಡೆಸಬಹುದು ಮತ್ತು ಅವರ ಜೀವನದ ಮುಂದಿನ ಅಧ್ಯಾಯವನ್ನು ಸುಲಭವಾಗಿ ಸ್ವೀಕರಿಸಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ