ನಮ್ಮ ಸಂಪಾದನೆಗೆ ಎಷ್ಟು ತೆರಿಗೆ ಕಟ್ಟುತ್ತಿದ್ದೇವೆ?
- ದಮ್ಮಪ್ರಿಯ ಬೆಂಗಳೂರು
ಮಾಯಾನಗರಿ ಬೆಂಗಳೂರು ನಮಗೆ ಬಹಳ ಹೆಮ್ಮೆಯ ನಗರ. ಸಾವಿರಾರು ವಲಸಿಗರಿಗೆ ಇದೊಂದು ಆಶ್ರಯ ತಾಣ. ಇಂತಹ ಅದೆಷ್ಟೋ ನಗರಗಳು ನಮ್ಮ ದೇಶದಲ್ಲಿವೆ. ಆದರೆ ಇಷ್ಟೊಂದು ವಲಸಿಗರಿಗೆ, ಕಾರ್ಮಿಕರಿಗೆ, ಸರ್ಕಾರಿ ನೌಕರರಿಗೆ, ಉದ್ಯೋಗವನ್ನು ಹರಸುತ್ತಾ ಬಂದ ನಿರುದ್ಯೋಗಿಗಳಿಗೆ, ತನ್ನ ಜೀವನ ಸಾಗಿಸಲು ಬಂದ ನಿರಾಶ್ರಿತರಿಗೆ, ಬಹಳ ಸೊಗಸಾಗಿ ಆಶ್ರಯ ನೀಡುತ್ತಿರುವುದೆ ನಮ್ಮ ಮಾಯಾನಗರಿ ಬೆಂಗಳೂರು.
ಇಂತಹ ನಗರಗಳು ಅದೆಷ್ಟೋ ನಾಗರೀಕ ಪ್ರಜೆಗಳನ್ನು ತನ್ನಲ್ಲಿ ನೆಲೆಸಲು ಪ್ರಚೋದಿಸುವಂತಿವೆ. ಮೊದಲು ದಿನಗಟ್ಟಲೆ ಕೆಲಸವಿಲ್ಲದೇ ಕಾಲಕಳೆಯುತ್ತಿದ್ದ ಜನರು ಬೆಂಗಳೂರಿನಂತಹ ನಗರದಲ್ಲಿ ಸಮಯದ ಹಿಂದೆ ಓಡುವಂತಾಗಿದೆ. ಓಡುತ್ತಿರುವ ವ್ಯಕ್ತಿಗಳು ಸಮಯಕ್ಕೆ ಸರಿಯಾಗಿ ಸಂಪಾದಿಸಿ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಇದರಿಂದ ಯಾವ ಪ್ರಜೆಯು ಹೊರತೇನಲ್ಲಾ, ಪ್ರತೀ ತಿಂಗಳ ಕೊನೆಯ ವಾರದ ದಿನಗಳು, ಅಥವಾ ಪ್ರತೀ ತಿಂಗಳ ಮೊದಲ ವಾರದ ದಿನಗಳು ಈ ನಾಗರೀಕ ಪ್ರಜೆಗಳನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಸಿಬಿಡುತ್ತಿವೆ. ಮಧ್ಯಮ ಮತ್ತು ತಳ ಸಮುದಾಯಗಳು, ಕೂಲಿ ಕಾರ್ಮಿಕರ ಪರದಾಟಗಳನ್ನು ಕಂಗೆಡಿಸುವ ಆರ್ಥಿಕ ಆಯಾಮಗಳೇ ಹೆಚ್ಚು. ಇದಕ್ಕೆಲ್ಲಾ ತಿಂಗಳಿಗೊಮ್ಮೆ ಮನೆಗೆ ಬರುವ ಬಿಲ್ಲುಗಳು ಅಂದರೆ ತಪ್ಪಾಗಲಾರದು. ನ್ಯೂಸ್ ಪೇಪರ್, ಟಿವಿ ಚಾನಲ್, ಹಾಲಿನ ಬಿಲ್ಲು , ನೀರಿನ ಬಿಲ್ಲು, ಕರೆಂಟ್ ಬಿಲ್ಲು, ಮಕ್ಕಳ ಸ್ಕೂಲ್ ಮಾಸಿಕ ಶುಲ್ಕಗಳ ಬಿಲ್ಲುಗಳು, ಸ್ಕೂಲ್ ವ್ಯಾನ್ ಬಿಲ್ಲು, ಇವೆಲ್ಲವನ್ನೂ ನಿಭಾಯಿಸಿದರು ಕೊನೆಗೆ ಯಾರಿಗೋ ಒಂದು ಅಥವಾ ಎರಡು ಬಿಲ್ ಪಾವತಿದಾರರಿಗೆ ಸಾಲವನ್ನು ಹೇಳಲೇಬೇಕಾದ ಅನಿವಾರ್ಯತೆಗಳು ಬಂದುಬಿಡುತ್ತವೆ. ಇದು ಇಂದಿನ ಸಾಮಾನ್ಯ ಜನರ ಬದುಕಿನ ಆರ್ಥಿಕ ಚಿತ್ರಣವಾಗಿದೆ.
ಜನಸಾಮಾನ್ಯರು ತನ್ನ ಸಂಪಾದನೆಗೆ ತಕ್ಕ ರೀತಿಯಲ್ಲಿ ಈಗಾಗಲೇ ಸರ್ಕಾರಕ್ಕೆ ತೆರಿಗೆಯನ್ನು ಕಟ್ಟಿರುತ್ತಾರೆ. ಆದರೆ ತಮ್ಮ ಅವಶ್ಯಕತೆಗಳನ್ನು ಪೂರೈಸಲು ದಿನನಿತ್ಯ ಬಳಕೆಯ ವಸ್ತುಗಳನ್ನು ಕೊಳ್ಳುವಾಗಲು ಮತ್ತೆ ತೆರಿಗೆಯನ್ನು ಕಟ್ಟುತ್ತಿದ್ದಾರೆ. ಎಂತಹ ವಿಪರ್ಯಾಸವಿದೆ ಈ ಸಮಾಜದೊಳಗೆ ಎನಿಸುತ್ತಿದೆ. ಹಾಗಾದರೆ ಒಬ್ಬ ನೌಕರ ದುಡಿದ ಹಣದಲ್ಲಿ ಸರ್ಕಾರಕ್ಕೆ ಕಟ್ಟುತ್ತಿರುವ ತೆರಿಗೆಯ ಪ್ರಮಾಣವೆಷ್ಟು ಎಂದು ಯೋಚಿಸಿದಾಗ, ತಾನು ದುಡಿಯುತ್ತಿರುವ ಸಂಸ್ಥೆಯು ಸಂಬಳ ನೀಡುವ ಸಂದರ್ಭದಲ್ಲಿ ಶೇಕಡ 20 ರಷ್ಟು ತೆರಿಗೆಯನ್ನು ಕಡಿತಗೊಳಿಸಿದರೆ ಮಿಕ್ಕ ಸಂಬಳವೆಲ್ಲ ನಾವೇ ಅನುಭವಿಸುತ್ತಿದ್ದೇವೆ ಎಂದುಕೊಳ್ಳುತ್ತೇವೆ. (ಕೆಲವೊಮ್ಮೆ ಶೇಕಡ 30% ರಷ್ಟು ಕಡಿತಗಗೊಳಿಸುವುದನ್ನು ನಾವು ಗಮನಿಸಬಹುದು) ಆದರೆ ನಮ್ಮ ಸಾಮಾಜಿಕ ಮಾರುಕಟ್ಟೆಯಲ್ಲಿ ಯಾವುದೇ ವಸ್ತುವನ್ನು ಖರೀದಿಸಿದರು, ಶೇಕಡ 9% ರಷ್ಟು ಇಲ್ಲವೇ ಶೇಕಡ 18 % ರಷ್ಟು ತೆರಿಗೆಯನ್ನು ಮತ್ತೆ ಕಟ್ಟುತ್ತಿದ್ದೇವೆ. ಇದಲ್ಲದೆ ಮತ್ತೆ ಸೆಸ್ ಮೂಲಕ ಶೇಕಡ 3 % ಹಣವನ್ನು ಸರ್ಕಾರಕ್ಕೆ ಸಂದಾಯ ಮಾಡುತ್ತಿದ್ದೇವೆ. ಹಾಗಾದರೆ ನಾವುಗಳು ಸಂಪಾದಿಸಿದ ಹಣದಲ್ಲಿ ಒಟ್ಟಾರೆಯಾಗಿ ಶೇಕಡ 51% ರಷ್ಟು ತೆರಿಗೆಯ ರೂಪದಲ್ಲಿಯೇ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸುತ್ತಿದ್ದೇವೆ.
ಈ ಸಾಮಾಜಿಕ ವ್ಯವಸ್ಥೆಯಲ್ಲಿ ಸ್ವಾಯುತ್ತ ಸಂಸ್ಥೆಗಳಾಗಿರುವ ಕೆಲವು ನಿಗಮಗಳು ತಮಗರಿವಿಲ್ಲದೆಯೇ ಜನಸಾಮಾನ್ಯರಿಂದ ಹೆಚ್ಚುವರಿಯಾಗಿ ಹಣವನ್ನು ಬಾಚುತ್ತಿರುವುದು ಬಹಳ ವೇದನೆಯ ಸಂಗತಿಯಾಗಿದೆ. ಎಲ್ಲ ವಿಭಾಗಗಳಲ್ಲು ನಾವು ಇಂತಹ ಸಮಸ್ಯೆಗಳನ್ನು ಗಮನಿಸಲು ಸಾಧ್ಯವಿರಬಹುದು. ಆದರೆ ನಮಗೆ ಇದುವರೆವಿಗೂ ಸಮಸ್ಯೆಯಾಗಿಯೇ ಇದ್ದು ಜನ ಸಾಮಾನ್ಯರಿಗೆ ಗೊಂದಲದ ಗೂಡಾಗಿರುವುದು ನಮ್ಮ ಬೆಸ್ಕಾಂ ನೀಡುತ್ತಿರುವ ಪ್ರತೀ ತಿಂಗಳ ವಿದ್ಯುತ್ ಬಿಲ್ಲಿನಲ್ಲಿ ಕಂಡುಬರುತ್ತಿರುವ ಅತೀ ಹೆಚ್ಚು ಅಥವಾ ಅತೀ ಕಡಿಮೆಯ ದರದ ಬಿಲ್ಲುಗಳು. ಕಳೆದ ತಿಂಗಳಿನಲ್ಲಿ ಕೇವಲ 450/- ರೂಪಾಯಿ ಬಂದಿದ್ದ ಬಿಲ್ಲು ಈ ಬಾರಿ 1500/- ರೂಪಾಯಿಗೂ ಹೆಚ್ಚಿದೆ ಎಂದು ತಿಳಿದ ತಕ್ಷಣವೇ ಗ್ರಾಹಕರ ಮನಸ್ಸು ತಳಮಳಗೊಳ್ಳುತ್ತಿದೆ. ದಿನನಿತ್ಯ ಕೂಲಿ ಮಾಡುವ ಕಾರ್ಮಿಕರ ಪರಿಸ್ಥಿತಿಯಂತೂ ಕೇಳಲಾಗುತ್ತಿಲ್ಲ. ಈ ಬಿಲ್ಲಿನಲ್ಲಿರುವ ಗೊಂದಲಗಳು ಏನು ಮತ್ತು ಯಾಕೆ ದುಬಾರಿಯಾಗುತ್ತಿವೆ ಎಂದು ನೋಡುತ್ತಿದ್ದಂತೆ ಬಹಳ ಬೇಸರವಾಯಿತು.
ಇದನ್ನು ವಿಚಾರಿಸಬೇಕೆಂದು ಬೆಸ್ಕಾಂ ನ ಎಂಜಿನಿಯರ್ ಬಳಿ ಹೋಗಿ ಕುಳಿತಾಗ, ಅಲ್ಲಿ ನೂರಾರು ಗ್ರಾಹಕರು ತಮ್ಮ ಹಳೆಯ ಬಿಲ್ಲುಗಳು ಮತ್ತು ಹೊಸ ಬಿಲ್ಲುಗಳನ್ನು ಹಿಡಿದು ಬಂದು ವಿವರವಾಗಿ ಕೇಳಲು ಪ್ರಯತ್ನಿಸುತ್ತಿದ್ದರು. ಇವರೆಲ್ಲರ ಮಾತುಗಳು ಒಂದೇ ಎನ್ನುವಂತಿತ್ತು. ಬಿಲ್ಲು ಈ ಬಾರಿ ದುಬಾರಿಯಾಗಿದೆ. ಯಾಕೆ ಇಷ್ಟು ಹಣ ಬಂದಿದೆ. ನಮ್ಮ ಬಿಲ್ಲುಗಳನ್ನು ಒಮ್ಮೆ ಪರಿಶೀಲಿಸಿ ಎಂದು ಕೇಳುತ್ತಿದ್ದರು. ಆದರೆ ಬೆಸ್ಕಾಂ ಅಧಿಕಾರಿಗಳಿಂದ ನ್ಯಾಯ ಸಿಗುತ್ತದೆ ಎಂದು ಭರವಸೆ ಇಟ್ಟುಕೊಂಡಿದ್ದ ಗ್ರಾಹಕರ ಮುಖಕ್ಕೆ ತಣ್ಣೀರು ಎರಚಿದಷ್ಟು ಸಪ್ಪೆ ಮೋರೆಯಿಂದ ಒಬ್ಬೊಬ್ಬರೇ ಹೊರಗಡೆಗೆ ನಡೆಯತೊಡಗಿದರು. ನಾನು ಅಲ್ಲಿಯೇ ನಿಂತಿದ್ದನ್ನು ಗಮನಿಸಿದ ಬೆಸ್ಕಾಂ ಅಧಿಕಾರಿ ನಿಮ್ಮದು ಏನು ಎಂದು ಕೇಳಿದರು. ನಾನು ನನ್ನ ಬಿಲ್ ಹಿಡಿದು ಕೇಳುತ್ತಿದ್ದಂತೆ, ಎಲ್ಲರಿಗು ಹೇಳಿದ್ದು ನಿಮಗೆ ಬೇರೆಯಾಗಿಯೇ ಹೇಳಬೇಕೇ ಎಂದು ತಾತ್ಸಾರವಾಗಿ ಮಾತನಾಡಿದರು. ಕೊನೆಗೆ ನನ್ನ ಸ್ವ ವಿವರವನ್ನು ಹೇಳುತ್ತಿದ್ದಂತೆ ಕುಳಿತುಕೊಳ್ಳಳು ಸೂಚಿಸಿ ಸಾವಧಾನವಾಗಿ ಮಾತನಾಡಲು ಪ್ರಾರಂಭಿಸಿದರು.
ನಾವು ಕೇಳಿದ ಮೊದಲ ಪ್ರಶ್ನೆ, ನನ್ನ ಬಿಲ್ಲಿನಲ್ಲಿ ಮೊದಲು 220 ಹಣವನ್ನು ಹಾಕಲಾಗಿದೆ. ಇದಕ್ಕೆ ಎಷ್ಟು ಯೂನಿಟ್ ವಿದ್ಯುತ್ ಬಳಕೆಯಾಗಬೇಕು ಎನ್ನುವ ಗೊಂದಲವಿದೆ ಎನ್ನುತ್ತಿದ್ದಂತೆ, 220 ರೂಪಾಯಿ ಎಲ್ಲರಿಗು KV ಮೇಲೆ ಹಾಕುವ ಚಾರ್ಜ್ ಗಳು ಅದಕ್ಕೆ ಯಾವುದೇ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದರು. ವಿದ್ಯುತ್ ಇಲ್ಲದ ಮೇಲೆ 220 ಅನ್ನು ಕಟ್ಟುವುದಾದರೂ ಏಕೆ ಎಂದಾಗ ನಮ್ಮ ಕಂಪನಿಯ ಮೀಟರ್ ನಿಮ್ಮ ಬಳಿ ಇರುತ್ತದೆ ಅದಕ್ಕೆ ಮಿನಿಮಮ್ ಚಾರ್ಜ್ ಎಂದರು. ಅಂದರೆ ನಾವು ಮೀಟರ್ ತೆಗೆದುಕೊಳ್ಳುವಾಗ ಕಟ್ಟುವ ನಿಗದಿತ ಠೇವಣಿಯೇ ಬಹಳ ದೊಡ್ಡಮಟ್ಟದ ಹಣವಾದರೂ ಮತ್ತೆ ಪ್ರತೀ ತಿಂಗಳು ಪುಕ್ಕಟ್ಟೆಯಾಗಿ 110, 220, 330, ಹೀಗೆ ಕೆವಿ ಲೆಕ್ಕದಲ್ಲಿ ಹಣ ವಸೂಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ಯಾವುದೇ ಲಾಭವಿಲ್ಲ. ಇದು ಒಂದು ಸಮಸ್ಯೆಯಾದರೆ. ಇನ್ನು ನಾವು ಎಷ್ಟು ಯುನಿಟ್ ವಿದ್ಯುತ್ ಬಳಕೆ ಮಾಡಿದ್ದೇವೆ ಎನ್ನುವುದನ್ನು ಮೊದಲು ಸ್ಲ್ಯಾಬ್ ಲೆಕ್ಕದಲ್ಲಿ ಬಿಲ್ಲು ಪಾವತಿಯಾಗುತ್ತಿತ್ತು. ಆದರೆ ಇಂದು ಯಾವುದೇ ಸ್ಲ್ಯಾಬ್ ಇಲ್ಲದೆ 141 ಯುನಿಟ್ ಬಳಕೆಯಾಗಿದೆ ಎಂದರೆ ಪ್ರತೀ ಯುನಿಟ್ ಗೆ 7 ರೂಪಾಯಿಯಂತೆ ಹಣವನ್ನು ವಸೂಲು ಮಾಡಲಾಗುತ್ತಿದೆ.
ಆದರೆ ನಮಗೆ ಗೊತ್ತಿಲ್ಲದಂತೆ ಹಿಂದಿನ ದಿನಗಳಲ್ಲಿ ಕೇವಲ ಶೇಕಡ 0.40 ಅಥವಾ 0. 60 ರಂತೆ ಇಂಧನ ಹೊಂದಾಣಿಕೆ ಶುಲ್ಕ ಎಂದು ಹಾಕಲಾಗುತ್ತಿತ್ತು. ಆದರೆ ಪ್ರಸ್ತುತ ಆಗಸ್ಟ್ 2023 ಬಿಲ್ಲಿನಲ್ಲಿ ಶೇಕಡ 2.05% ಎಂದು ನಿಗದಿಪಡಿಸಲಾಗಿದೆ. ಏನಿದು ಇಂಧನ ಹೊಂದಾಣಿಕೆಯ ಶುಲ್ಕ ಎಂದಾಗ ಡೀಸೆಲ್ ಪೆಟ್ರೋಲ್ ದರದಲ್ಲಿ ವ್ಯತ್ಯಾಸವಾದಂತೆ ಇಲ್ಲಿಯೂ ಬದಲಾಗುತ್ತೆ ಎನ್ನುವುದು ಬೆಸ್ಕಾಂ ಅಧಿಕಾರಿಗಳ ಉತ್ತರವಾಗಿದೆ. ಆದರೆ ಇತ್ತೀಚೆಗೆ ಅಷ್ಟೊಂದು ತೈಲಗಳ ದರ ಒಂದೇ ತಿಂಗಳಲ್ಲಿ ಬದಲಾಗಿದ್ದು ಎಲ್ಲಿಯೂ ವರದಿಯಾಗಿಲ್ಲ. ಹೇಗಿದೆ ನೋಡಿ ನಾವು ಪೆಟೋಲ್ ಡಿಸೇಲ್ ಗಳಿಗೂ ಬೆಲೆ ತೆತ್ತುವುದಲ್ಲದೆ ಬೆಸ್ಕಾಂ ಗೂ ಶೇಕಡ 2.05 % ತೆರಿಗೆ ಕಟ್ಟುವುದರ ಜೊತೆಗೆ ನಮ್ಮ ಯೂನಿಟ್ ಬಳಕೆಯ ಬಿಲ್ಲಿನ ಮೇಲೆ ಮತ್ತೆ ಶೇಕಡ 9 % ರಷ್ಟು ತೆರಿಗೆಯನ್ನು ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಪ್ರತೀ ಮೀಟರ್ ಗಳಿಗೆ ಮುಂಗಡ ಠೇವಣಿ ಕಟ್ಟಿರುತ್ತೇವೆ. ಆದರೆ ಪ್ರತೀ ತಿಂಗಳು ಯಾವ ಯೂನಿಟ್ ಇಲ್ಲದೆ ಪ್ರತೀ KV ಗೆ 110 ರೂಪಾಯಿಯಂತೆ ಹಣ ವಸೂಲು ಪುಕ್ಕಟ್ಟೆಯಾಗಿ ಮಾಡಲಾಗುತ್ತಿದೆ. ಯೂನಿಟ್ ದರದಲ್ಲಿ ಹೆಚ್ಚುವರಿಯಾಗಿದ್ದರು ಅದಕ್ಕೆ ಮತ್ತೆ ಇಂಧನ ಹೊಂದಾಣಿಕೆ ಶುಲ್ಕ, ಅದಕ್ಕೆ ಮತ್ತೆ ತೆರಿಗೆ, ಇಲ್ಲದೆ ಪ್ರತೀ ತಿಂಗಳು ವಸೂಲಾಗುವ ಹಣ. ಹೆವಿ ಲೋಡಿಂಗ್ ದಂಡವೆಂತಲೂ ಹಣವನ್ನು ವಸೂಲು ಮಾಡಲಾಗುತ್ತಿದೆ. ರೌಂಡ್ ಅಪ್, ಹೇಗೆಲ್ಲಾ ಸಾಮಾನ್ಯ ಜನರ ಹಣವನ್ನು ತಮಗರಿವಿಲ್ಲದೆ ವಸೂಲಿ ಮಾಡಲಾಗುತ್ತಿದೆ.ಇಂತಹ ಸಮಸ್ಯೆಗಳಿಂದ ಜನಸಾಮಾನ್ಯರಿಗೆ ಅತಿಯಾದ ಹೊರೆಯನ್ನು ಇಳಿಸುವ ಸಮಯ ಯಾವಾಗ ಬರುವುದೆಂದು ಹಾಗು ಜನಸಾಮಾನ್ಯರ ಗೊಂದಲಗಳಿಗೆ ಎಂದು ಮುಕ್ತಿ ಸಿಗುವುದೆಂದು ಕಾದು ನೋಡಬೇಕಾಗಿದೆ.