ಸಂಚಾರಕ್ಕೆ ಯೋಗ್ಯವಾದ ತಾತ್ಕಾಲಿಕ ರಸ್ತೆ ಮಾಡಿಕೊಡದೇ ಕಾಮಗಾರಿ ನಡೆಸುವುದು ಎಷ್ಟು ಸರಿ?: ಮಾಣಿ—ಕಲ್ಲಡ್ಕ ರಸ್ತೆ ಅದ್ವಾನ - Mahanayaka
9:10 PM Wednesday 8 - January 2025

ಸಂಚಾರಕ್ಕೆ ಯೋಗ್ಯವಾದ ತಾತ್ಕಾಲಿಕ ರಸ್ತೆ ಮಾಡಿಕೊಡದೇ ಕಾಮಗಾರಿ ನಡೆಸುವುದು ಎಷ್ಟು ಸರಿ?: ಮಾಣಿ—ಕಲ್ಲಡ್ಕ ರಸ್ತೆ ಅದ್ವಾನ

road
07/01/2025

ಮಂಗಳೂರು: ಪಾಣೆಮಂಗಳೂರಿನಿಂದ ಮಾಣಿವರೆಗಿನ ರಸ್ತೆ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದೆ. ಕಲ್ಲಡ್ಕ ಪ್ರದೇಶದಲ್ಲಿ ರಸ್ತೆಗೆ ನೀರು ಹಾಕಿ ಕೆಸರು ಮಯ ಮಾಡಲಾಗಿದ್ದರೆ, ಅಲ್ಪ ಸ್ವಲ್ಪ ರಸ್ತೆಯಾಗಿರುವ ಸ್ಥಳಗಳು ಧೂಳಿನಿಂದ ಮುಸುಕಿವೆ. ಈ ರಸ್ತೆಗಳಲ್ಲಿ ವಾಹನ ಸವಾರರು ಪರದಾಟ ನಡೆಸುತ್ತಾ ವಾಹನ ಚಲಾಯಿಸುವುದು ಅನಿವಾರ್ಯ ಎನ್ನುವಂತಾಗಿದೆ.

ರಸ್ತೆ ಕಾಮಗಾರಿ ಕೈಗೊಂಡಿರುವ ಕಂಪೆನಿಯವರು ಹೊಸ ರಸ್ತೆ ಆಗುವವರೆಗೆ ವಾಹನ ಸಂಚಾರಕ್ಕೆ ಸರಿಯಾದ ರಸ್ತೆಯನ್ನು ತಾತ್ಕಾಲಿಕವಾಗಿ ನಿರ್ಮಿಸಬೇಕು. ಆದರೆ, ಹೆಸರಿಗೆ ರಸ್ತೆ ಎಂಬಂತೆ ನಿರ್ಮಿಸಲಾಗಿದೆ. ವಾಹನಗಳು ಹೊಂಡ ಗುಂಡಿಗಳಲ್ಲಿಯೇ ಪ್ರಯಾಣಿಸುವುದು ಅನಿವಾರ್ಯ ಎನ್ನುವಂತಹ ಸ್ಥಿತಿಯನ್ನು ನಿರ್ಮಿಸಲಾಗಿದೆ.

ವಾಹನ ಸಂಚಾರಕ್ಕೆ ಯೋಗ್ಯವಾದ ಪರ್ಯಾಯ ರಸ್ತೆಯನ್ನು ನಿರ್ಮಿಸಿಕೊಡದೇ ಇರುವ ರಸ್ತೆಯನ್ನೂ ಅದ್ವಾನ ಮಾಡಿ ಹಾಕಲಾಗಿದೆ. ಕಲ್ಲಡ್ಕದಲ್ಲಿ ವಾಹನಗಳು ಕೆಸರು ರಸ್ತೆಯಲ್ಲಿ ಜಾರಿಕೊಂಡು ಹೋಗಬೇಕು, ಅಲ್ಪ ಸ್ವಲ್ಪ ರಸ್ತೆ ಮಾಡಿರುವ ಪ್ರದೇಶಗಳಲ್ಲಿ ಧೂಳುಗಳು ತುಂಬಿದ್ದು, ಎದುರಿನಿಂದ ಬರುವ ವಾಹನಗಳು ಕಾಣದಷ್ಟು ದಡ್ಡವಾದ ಧೂಳು ಆಕ್ರಮಿಸಿಕೊಂಡಿದೆ.

ಮಳೆ ಬಿಟ್ಟು ಎರಡು ತಿಂಗಳು ಕಳೆದರೂ ಇನ್ನೂ ಕೂಡ ಕಲ್ಲಡ್ಕದಲ್ಲಿ ಫ್ಲೈಓವರ್ ನಿರ್ಮಿಸುತ್ತಿರುವ ಸ್ಥಳದಲ್ಲಿ ಸಂಚಾರಕ್ಕೆ ಯೋಗ್ಯವಾದ ತಾತ್ಕಾಲಿಕ ರಸ್ತೆಯನ್ನೂ ನಿರ್ಮಿಸಿಲ್ಲ. ಗುಂಡಿಗಳು, ಕೆಸರುಗಳು, ಧೂಳು ಹೀಗೆ ವಾಹನ ಸವಾರರು ರಸ್ತೆಯಲ್ಲಿ ಸಾಹಸ ಮಾಡಿಕೊಂಡು ಹೋಗಬೇಕಿದೆ. ಪಾಣೆಮಂಗಳೂರಿನಿಂದ, ಮಾಣಿ ರಸ್ತೆಯವರೆಗೂ ವಾಹನ ಸವಾರರು ಸಾಹಸ ಮಾಡಿಕೊಂಡೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜನರು ಮಾತ್ರ ನಿಯಮ ಪಾಲಿಸಬೇಕೇ?

ವಾಹನಗಳಿಗೆ ಹೊಗೆ ಪರೀಕ್ಷೆ, ಮಾಡಿಸಿ, ಪರಿಸರ ರಕ್ಷಣೆಯ ಪಾಠ ಮಾಡುವ ಸರ್ಕಾರ ಅಧಿಕಾರಿಗಳಿಗೆ ರಸ್ತೆಯಿಂದ ಏಳುತ್ತಿರುವ ಧೂಳು ಕಾಣುತ್ತಿಲ್ಲವೇ? ರಸ್ತೆಯ ಧೂಳಿನಿಂದ ಪರಿಸರ ಮಾಲಿನ್ಯವಾಗುವುದಿಲ್ಲವೇ? ರಸ್ತೆಯ ಧೂಳಿನಿಂದ ಸ್ಥಳೀಯರ ಪರಿಸ್ಥಿತಿ ಏನು? ವಾಹನಗಳು ಮಣ್ಣಿನಲ್ಲೇ ಸಂಚರಿಸಿದರೆ ಧೂಳು ಏಳದೇ ಇನ್ನೇನಾಗುತ್ತದೆ. ಫ್ಲೈಓವರ್ ಗಳನ್ನೇ ನಿರ್ಮಿಸುವ ಕಂಪೆನಿಗೆ ಕನಿಷ್ಠ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನು ತಾತ್ಕಾಲಿಕವಾಗಿ ನಿರ್ಮಿಸಲು ಸಾಧ್ಯವಿಲ್ಲವೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.

ನಿಯಮಗಳನ್ನು ಜನರು ಮಾತ್ರ ಪಾಲಿಸಬೇಕು, ಕಂಪೆನಿಗಳಿಗೆಲ್ಲ ಯಾವುದೇ ನಿಯಮಗಳಿಲ್ಲವೇ? ಬೇಕಾಬಿಟ್ಟಿಯಾಗಿ ಕೆಲಸ ಮಾಡಿಕೊಂಡು ಕೇವಲ ತಮ್ಮ ಲಾಭ ಮಾತ್ರವೇ ನೋಡುವುದು ಎಷ್ಟು ಸರಿ? ಇದನ್ನೆಲ್ಲ ಪ್ರಶ್ನಿಸಬೇಕಾದ ಜನಪ್ರತಿನಿಧಿಗಳು ಯಾಕೆ ಮೌನವಾಗಿದ್ದಾರೆ? ಎನ್ನುವ ಉತ್ತರವಿಲ್ಲದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ.

ಕಂಪೆನಿ ದಂಡ ಪಾವತಿಸಲಿ:

ಟ್ರಾಫಿಕ್ ರೂಲ್ಸ್ ಮೀರಿದರೆ ಸಾರ್ವಜನಿಕರಿಗೆ ಹೇಗೆ ಪೊಲೀಸ್ ಇಲಾಖೆ ದಂಡ ವಿಧಿಸುತ್ತದೋ, ಹಾಗೆಯೇ ಸಂಚಾರಕ್ಕೆ ಯೋಗ್ಯವಾದ ರಸ್ತೆ ನಿರ್ಮಿಸದೇ ಕಾಮಗಾರಿ ನಡೆಸುವ ಕಂಪೆನಿಗೆ ಸರ್ಕಾರ ದಂಡ ವಿಧಿಸಲಿ, ಖಾಸಗಿ ಕಂಪೆನಿಗಳು ರಸ್ತೆ ಮಾಡಿಕೊಡುವವರೆಗೂ ಜನರು ಕಾಯಬೇಕು, ಕಲ್ಲು ಗುಂಡಿ, ಮಣ್ಣುಗಳಲ್ಲಿ ಸಂಚರಿಸಬೇಕು, ರಸ್ತೆಯಾದ ಬಳಿಕ ಟೋಲ್ ಕೂಡ ಪಾವತಿಸಿ ಹೋಗಬೇಕು, ಸರ್ಕಾರಗಳು ಮಾಡುವ ತಪ್ಪಿಗೆ ಜನರು ಅನುಭವಿಸುವಂತಾಗಿದೆ. ಯಾವ ಸರ್ಕಾರವಿದ್ದರೂ, ಜನರು ಅನುಭವಿಸುವುದು ಅನುಭವಿಸಲೇ ಬೇಕು ಎನ್ನುವಂತಾಗಿದೆ. ಕಲ್ಲಡ್ಕ ಬಳಿಯ ನರಹರಿ ಪರ್ವತ ಸಮೀಪದ ರಸ್ತೆ ನರಕದ ದಾರಿಯಾಗಿ ಕಾಣುತ್ತದೆ. ರಸ್ತೆ ಎಲ್ಲಿದೆ ಎಂದು ಹುಡುಕಿ ವಾಹನ ಸವಾರರು ಪ್ರಯಾಣಿಸಬೇಕಿದೆ. ರಾತ್ರಿ ವೇಳೆ ಪ್ರಯಾಣಿಸುವವರು, ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಬೇಕು. ಇಂತಹ ದುಸ್ಥಿತಿಯನ್ನು ಜನರು ಇನ್ನೆಷ್ಟು ದಿನ ಅನುಭವಿಸಬೇಕು? ಎನ್ನುವ ಪ್ರಶ್ನೆಗಳಿಗೆ ಜನಪ್ರತಿನಿಧಿಗಳು ಉತ್ತರಿಸಬೇಕು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಘಟಾನುಘಟಿ ರಾಜಕಾರಣಿಗಳಿದ್ದಾರೆ, ಆದರೂ ಈ ರಸ್ತೆ ಅವ್ಯವಸ್ಥೆ ಬಗ್ಗೆ ತುಟಿಯೂ ಬಿಚ್ಚದೇ ಯಾಕೆ ಮೌನವಾಗಿದ್ದಾರೆ ಎನ್ನುವುದೇ ಅನುಮಾನಕ್ಕೆ ಕಾರಣವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

 

ಇತ್ತೀಚಿನ ಸುದ್ದಿ