ಮತಗಟ್ಟೆ ಸಮೀಕ್ಷೆ ಎಷ್ಟು ಸತ್ಯ? ಎಷ್ಟು ಸುಳ್ಳು: ಸಮೀಕ್ಷೆಗಳು ನಿಜವೇ? - Mahanayaka

ಮತಗಟ್ಟೆ ಸಮೀಕ್ಷೆ ಎಷ್ಟು ಸತ್ಯ? ಎಷ್ಟು ಸುಳ್ಳು: ಸಮೀಕ್ಷೆಗಳು ನಿಜವೇ?

exit poll 2024
31/05/2024

ನವದೆಹಲಿ:  ಲೋಕಸಭಾ ಚುನಾವಣಾ ಅಂತಿಮ ಹಂತಕ್ಕೆ ಬಂದಿದೆ. ಜೂನ್ 1ರಂದು ಕೊನೆಯ ಹಂತದ ಮತದಾನ ಮುಗಿಯಲಿದೆ. ಕೊನೆಯ ಹಂತದ ಮತದಾನ ಮುಗಿದು 1 ಗಂಟೆಯೊಳಗೆ  ವಿವಿಧ ಮಾಧ್ಯಮಗಳು ಲೋಕಸಭಾ ಚುನಾವಣೆ 2024ರ ಮತಗಟ್ಟೆ ಸಮೀಕ್ಷೆ (Exit Poll) ಪ್ರಕಟಿಸಲು ಸಿದ್ಧವಾಗಿವೆ.

ಪ್ರತಿ ಚುನಾವಣೆಗಳಲ್ಲೂ  ಮತಗಟ್ಟೆ ಸಮೀಕ್ಷೆಗಳನ್ನು ಮಾಧ್ಯಮಗಳು ಪ್ರಕಟಿಸುತ್ತವೆ. ಆದರೆ ಈ ಸಮೀಕ್ಷೆಗಳು ಎಷ್ಟು ಸತ್ಯ ಎನ್ನುವುದು ಚುನಾವಣಾ ಫಲಿತಾಂಶ ಬಂದ ನಂತರವೇ ತಿಳಿಯಬೇಕಿದೆ. ಚುನಾವಣಾ ಫಲಿತಾಂಶಕ್ಕೂ ಮುನ್ನ  ಮಾಧ್ಯಮಗಳು ಅಂದಾಜಿಗೆ ಎಸೆಯುವ ಕಲ್ಲು, ಚುನಾವಣಾ ಫಲಿತಾಂಶಕ್ಕೆ ಹತ್ತಿರವಾಗಿದ್ದರೆ, ನಮ್ಮ ಸಮೀಕ್ಷೆಯೇ ಸರಿ ಎಂದು ವಾದಿಸಿಕೊಂಡು ಮುಂದುವರಿಯುವುದು ವಾಡಿಕೆಯಾಗಿದೆ.

ಯಾವುದೇ ಮಾಧ್ಯಮಗಳು ಚುನಾವಣಾ ಸಮೀಕ್ಷೆಯನ್ನು ಸಮರ್ಪಕವಾಗಿ ನೀಡಲು ಸಾಧ್ಯವಿಲ್ಲ. ಒಂದು ಕ್ಷೇತ್ರದಲ್ಲಿ ಇಂತಹ ಅಭ್ಯರ್ಥಿ ಅಥವಾ ಪಕ್ಷ ಗೆಲ್ಲುತ್ತದೆ ಎಂದು ಹೇಳಬೇಕಾದರೆ ಶೇ.75ಕಿಂತಲೂ ಅಧಿಕ ಮತದಾರರ ಅಭಿಪ್ರಾಯಗಳನ್ನು ಮಾಧ್ಯಮಗಳು ಪಡೆಯಬೇಕಾಗುತ್ತದೆ. ಆದರೆ, ಸಾಕಷ್ಟು ಮಾಧ್ಯಮಗಳ ಸಮೀಕ್ಷೆಗಳು ಕಾಲ್ಪನಿಕವಾಗಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ.


Provided by

ಎಕ್ಸಿಟ್ ಪೋಲ್ ಗಳು ಸತ್ಯವಲ್ಲ ಎನ್ನುವುದಕ್ಕೆ ಈ ಹಿಂದಿನ ವಿದ್ಯಮಾನಗಳೇ ಸಾಕ್ಷಿಯಾಗಿದೆ.  2004 ರ ಲೋಕಸಭಾ ಚುನಾವಣೆ ಮತ್ತು ಅದರ ಮತಗಟ್ಟೆ ಸಮೀಕ್ಷೆ. ಬಹುತೇಕ ಎಲ್ಲ ಸಮೀಕ್ಷೆಗಳು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ ಡಿಎ ಸರ್ಕಾರ ಬಹುಮತ ಗಳಿಸಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ನಿಜವಾದ ಫಲಿತಾಂಶ ಎಲ್ಲರನ್ನೂ ಅಚ್ಚರಿಗೆ ದೂಡಿತ್ತು.

2004 ರ ಚುನಾವಣೆಯಲ್ಲಿ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಜಯಗಳಿಸಿದ ಬಿಜೆಪಿ ಅದೇ ಹುಮ್ಮಸ್ಸಿನಲ್ಲಿ ಲೋಕಸಭೆ ಚುನಾವಣೆ ಗೆಲ್ಲಲು ಮುಂದಡಿ ಇರಿಸಿತ್ತು. ಕೇಂದ್ರದ ಅಂದಿನ ಆಡಳಿತಾರೂಢ ಬಿಜೆಪಿಯು ‘ಇಂಡಿಯಾ ಶೈನಿಂಗ್’ ಘೋ‍ಷಣೆಯೊಂದಿಗೆ, ಅವಧಿಪೂರ್ವ ಮರುಚುನಾವಣೆಗೆ ಪ್ರಯತ್ನಿಸಿತು. ಎಕ್ಸಿಟ್ ಪೋಲ್‌ ಗಳು ಬಿಜೆಪಿ ನೇತೃತ್ವದ ಎನ್‌ ಡಿಎಗೆ 240 ರಿಂದ 250 ಸ್ಥಾನಗಳನ್ನು ನಿರೀಕ್ಷಿಸಿದ್ದವು, ಆದರೆ ನಿಜವಾದ ಫಲಿತಾಂಶಗಳು ಬಂದಾಗ, ಸಂಖ್ಯೆಗಳು ಸಂಪೂರ್ಣವಾಗಿ ವಿರುದ್ಧವಾಗಿದ್ದವು.

ದೆಹಲಿಯಲ್ಲಿ 2015 ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) 70 ರಲ್ಲಿ 67 ಸ್ಥಾನಗಳನ್ನು ಗಳಿಸಿ ಅಮೋಘ ಜಯ ಸಾಧಿಸಿತು. ಮತದಾನದ ದಿನದಂದು ನಡೆಸಿದ ಎಕ್ಸಿಟ್ ಪೋಲ್‌ಗಳು ಎಎಪಿಗೆ ಸ್ಪಷ್ಟ ಬಹುಮತವನ್ನು ನಿರೀಕ್ಷಿಸಿದ್ದವು. ಒಂದು ಎಕ್ಸಿಟ್ ಪೋಲ್ ಮಾತ್ರ 50ಕ್ಕಿಂತ ಹೆಚ್ಚು ಸ್ಥಾನ ನಿರೀಕ್ಷಿಸಿತ್ತು. ಉಳಿದವು ಇಂತಹ ಭರ್ಜರಿ ಗೆಲುವನ್ನು ಅಂದಾಜಿಸಿರಲಿಲ್ಲ.

ಬಿಹಾರ ವಿಧಾನಸಭೆಗೆ 2015 ರಲ್ಲಿ ನಡೆದ ಚುನಾವಣೆಯಲ್ಲಿ ನಿಕಟ ಪೈಪೋಟಿಯನ್ನು ಊಹಿಸುವ ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದ್ದವು. ಯಾವುದೇ ಮೈತ್ರಿಗೆ ಸ್ಪಷ್ಟ ಬಹುಮತ ದೊರೆಯುವುದಿಲ್ಲ ಎಂದು ಅಂದಾಜಿಸಲಾಗಿತ್ತು. ಆದರೆ, ಫಲಿತಾಂಶ ಬಂದಾಗ, ಆರ್‌ಜೆಡಿ-ಜೆಡಿಯು-ಕಾಂಗ್ರೆಸ್ ಒಕ್ಕೂಟವು ಭರ್ಜರಿ ಜಯ ಸಾಧಿಸಿತ್ತು. ಲಾಲು ಪ್ರಸಾದ್ ಅವರ ಆರ್‌ ಜೆಡಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ನೋಟು ಅಮಾನ್ಯೀಕರಣದ ನಂತರ ನಡೆದ 2017 ರ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ, ನಿರ್ಗಮನ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಅತಂತ್ರ ವಿಧಾನಸಭೆ ಬರಲಿದೆ ಎಂದು ನಿರೀಕ್ಷಿಸಿದ್ದವು. ಆದರೆ, ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಈ ಭವಿಷ್ಯವಾಣಿಗಳಿಗೆ ವ್ಯತಿರಿಕ್ತವಾಗಿ, ಬಿಜೆಪಿ 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಎಲ್ಲರನ್ನೂ ಅಚ್ಚರಿಗೆ ಕೆಡವಿತು. ಇದು ನಿರೀಕ್ಷಿತ ಫಲಿತಾಂಶಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದ ವ್ಯತ್ಯಾಸವಿದೆ. 2012 ರಲ್ಲಿ ಗಳಿಸಿದ 47 ಸ್ಥಾನಗಳಿಂದ 2017 ರಲ್ಲಿ403 ಸ್ಥಾನಗಳ ಪೈಕಿ 312 ಸ್ಥಾನಗಳನ್ನು ಕೇಸರಿ ಪಕ್ಷ ಗೆದ್ದುಕೊಂಡಿತ್ತು.

2014 ರ ಲೋಕಸಭಾ ಚುನಾವಣೆಯಲ್ಲಿ, ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ ಡಿಎ ಗೆಲುವನ್ನು ಮುನ್ನಂದಾಜಿಸಿದ್ದವು. ಆದರೆ ಬಿಜೆಪಿಗೆ ಸಂಪೂರ್ಣ ಬಹುಮತವನ್ನು ಯಾವ ಸಮೀಕ್ಷೆಯೂ ಅಂದಾಜಿಸಿರಲಿಲ್ಲ. ಅಂತಿಮ ಫಲಿತಾಂಶವು 300 ಸ್ಥಾನಗಳನ್ನು ಮೀರಿ ಎನ್‌ ಡಿಎಗೆ ಗಣನೀಯ ವಿಜಯವನ್ನು ಸಾಧಿಸಿತು, ಬಿಜೆಪಿ ಮೊದಲ ಸಲನಿರ್ಣಾಯಕ 272 ಸ್ಥಾನಗಳ ಗಡಿಯನ್ನು ದಾಟಿತು. ಈ ಸಂಪೂರ್ಣ ವ್ಯತಿರಿಕ್ತತೆಯನ್ನು ಎಕ್ಸಿಟ್ ಪೋಲ್‌ಗಳು ಊಹಿಸಿರಲಿಲ್ಲ. ಕಾಂಗ್ರೆಸ್ ಪಕ್ಷ ಗಮನಾರ್ಹ ಹಿನ್ನಡೆ ಅನುಭವಿಸಿದ್ದು, ಕೇವಲ 44 ಸ್ಥಾನಗಳನ್ನು ಗಳಿಸಿತ್ತು.

ಸಾಕಷ್ಟು ಮಾಧ್ಯಮ  ಸಮೀಕ್ಷೆಗಳು ಪೂರ್ವಾಗ್ರಹ ಪೀಡಿತ ಹಾಗೂ ಕಾಲ್ಪನಿಕ ಆಧಾರದಲ್ಲಿ ಮೂಡಿಬರಬಹುದಷ್ಟೆ,  ಆದರೆ ವಾಸ್ತವ ಸ್ಥಿತಿಯನ್ನು ಸಮೀಕ್ಷೆಗಳು ಹೇಳಲು ಸಾಧ್ಯವಿಲ್ಲ. ಕೆಲವೊಂದು ಬಾರಿ, ಕಲ್ಪನೆಗೆ ಹತ್ತಿರವಾದ ಸಮೀಕ್ಷೆಗಳು ಬರಬಹುದು ಆದರೆ, ಅಂತಿಮ ಫಲಿತಾಂಶ ಹೀಗೆ ಬರುತ್ತದೆ ಎನ್ನುವುದು ಹೇಳುವುದು ಕಷ್ಟ ಸಾಧ್ಯ. ಏನೇ ಆಗಲಿ ಸಮೀಕ್ಷೆಗಳನ್ನು ನಂಬುವುದಕ್ಕಿಂತಲೂ ಅಂತಿಮ ಫಲಿತಾಂಶದ ದಿನದವರೆಗೆ ಮತದಾರರು ಫಲಿತಾಂಶಕ್ಕಾಗಿ ಕಾಯಲೇ ಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ