ಡೆಂಗ್ಯೂ ಹಾವಳಿ ಹೆಚ್ಚಾದ ಬೆನ್ನಲ್ಲೇ ಕಿವಿ ಹಣ್ಣು, ಪಪ್ಪಾಯಿಗೆ ಭಾರೀ ಬೇಡಿಕೆ!
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಡೆಂಗ್ಯೂ ಹಾವಳಿ ಹೆಚ್ಚುತ್ತಿದೆ. ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಬಗ್ಗೆ ಸಾರ್ವಜನಿಕರು ಚಿಂತಾಕ್ರಾಂತರಾಗಿದ್ದಾರೆ. ಡೆಂಗ್ಯೂ ಹಾವಳಿಯ ನಡುವೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪಪ್ಪಾಯಿ(Papaya) ಹಾಗೂ ಕಿವಿ ಹಣ್ಣಿಗೆ(Kiwi Fruit)ಗೆ ಭಾರೀ ಬೇಡಿಕೆಯಿದ್ದು, ಈ ಹಣ್ಣುಗಳ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ.
ಪಪ್ಪಾಯಿ ಮತ್ತು ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಪಾಲಿಫಿನಾಲ್ ಮತ್ತು ಆಂಟಿ ಆಕ್ಸಿಡೆಂಟ್ ಗಳಿದ್ದು, ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುವುದು ಜನರ ನಂಬಿಕೆಯಾಗಿದೆ.
ಕಿವಿ ಹಣ್ಣು ಕೆ.ಜಿ.ಗೆ ರೂ. 140 ರಿಂದ 300 ರೂ. ವರೆಗೆ ಮಾರಾಟವಾಗುತ್ತಿದ್ದರೆ, ಪಪ್ಪಾಯಿ ಕೆ.ಜಿ.ಗೆ ರೂ. 33 ರಿಂದ 50 ರೂ. ಗಳವರೆಗೆ ಮಾರಾಟವಾಗುತ್ತಿದೆ. ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಿವಿ ಹಣ್ಣಿನ ಬೆಲೆ ಪ್ರತಿ ಕೆಜಿಗೆ ರೂ. 240 ರಿಂದ ರೂ. 380ಕ್ಕೆ ಏರಿಕೆಯಾಗಿದ್ದರೆ, ಪಪ್ಪಾಯಿ ಬೆಲೆಯಲ್ಲಿ ಸಾಮಾನ್ಯ ದರಕ್ಕಿಂತ 5 ರೂಪಾಯಿ ಹೆಚ್ಚಾಗಿದೆ. ಕೆ.ಜಿ.ಗೆ 40 ರೂ.ಗಳಿದ್ದ ಪಪ್ಪಾಯಿ ಹಣ್ಣನ್ನು ಇದೀಗ 45 ರೂಪಾಯಿಗೆ ಮಾರಾಟ ಮಾಡುತ್ತಿರುವುದಾಗಿ ಹಣ್ಣಿನ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿಯಲ್ಲಿ (HOPCOMS), ಪಪ್ಪಾಯಿ ಹಣ್ಣು ಕೆಜಿಗೆ ರೂ. 33 ರಷ್ಟಿದ್ದರೆ, ಕಿವಿ ಕೆಜಿಗೆ 140 ರೂ. ಗಳಿತ್ತು. ಸಾಮಾನ್ಯವಾಗಿ ಕಿವಿ ಹಣ್ಣಿಗೆ ಬಾಳೆಹಣ್ಣು ಅಥವಾ ಸೇಬಿಗೆ ಇರುವ ಬೇಡಿಕೆಯಿಲ್ಲ. ಆದರೆ, ಕಳೆದ ಎರಡು ವಾರಗಳಿಂದ ಕಿವಿ ಹಣ್ಣಿನ ಖರೀದಿ ಹೆಚ್ಚಾಗುತ್ತಿದೆ. ಆನ್ ಲೈನ್ ಶಾಪಿಂಗ್ ಸೈಟ್ ಗಳಲ್ಲಿ, ಕಿವಿ ಹಣ್ಣಿನ ಬೆಲೆ ಕೆಜಿಗೆ ರೂ. 150 ರಷ್ಟಿದೆ.
ಸಲಹೆ:
ಪಪ್ಪಾಯಿ ಮರದ ಎಲೆಯ ರಸ ಸೇವಿಸುವುದರಿಂದ ರಕ್ತದಲ್ಲಿ ಪ್ಲೇಟ್ ಲೆಟ್ ಗಳ ಸಂಖ್ಯೆ ಹೆಚ್ಚಳವಾಗುತ್ತದೆ. ಇದರಿಂದ ಡೆಂಗ್ಯೂ ವಿರುದ್ಧ ಹೋರಾಡಲು ಸಹಕಾರಿಯಾಗಿದೆ ಎಂದು ಸಾಕಷ್ಟು ಜನರು ನಂಬಿದ್ದಾರೆ. ಆದರೆ ಡೆಂಗ್ಯೂ ಸೋಂಕು ತಗಲಿದರೆ, ಅದಕ್ಕೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಹಾಗಾಗಿ ಹಣ್ಣುಗಳ ಸೇವನೆ ಮಾತ್ರವಲ್ಲ, ಅದರ ಜೊತೆಗೆ ವೈದ್ಯರ ಸಲಹೆ ಪಡೆಯುವುದು ಕೂಡ ಸೂಕ್ತವಾಗಿದೆ. ಜೊತೆಗೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸೊಳ್ಳೆಗಳ ಉತ್ಪತ್ತಿಗೆ ನಮ್ಮ ಪರಿಸರದಲ್ಲಿ ಅವಕಾಶ ನೀಡಬಾರದು. ಮುಂಜಾಗೃತಾ ಕ್ರಮ ವಹಿಸಬೇಕು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: