ಸಿಕ್ರಂ ಸಂಸ್ಥೆಯಿಂದ ಮಾನವ ಹಕ್ಕುಗಳು ಮತ್ತು ಕಾನೂನು ಸಲಹಾ ಶಿಬಿರ
ದಕ್ಷಿಣ ಭಾರತದ ಮಾನವ ಹಕ್ಕುಗಳ ಶಿಕ್ಷಣ ಮತ್ತು ಸಂರಕ್ಷಣ ಘಟಕದ, ಮೈಸೂರು ಸಿಕ್ರಂ ಜಿಲ್ಲಾ ಮಾನವ ಹಕ್ಕುಗಳ ಕೇಂದ್ರದ ವತಿಯಿಂದ ಮೈಸೂರು ನಗರದಲ್ಲಿರುವ ಕುದುರೆ ಮಾಳದಲ್ಲಿ ಮಾನವ ಹಕ್ಕುಗಳು ಮತ್ತು ಕಾನೂನು ಸಲಹಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಕುದುರೆ ಮಾಳದಲ್ಲಿ ವಾಸಿಸುತ್ತಿರುವ ಮಕ್ಕಳು, ಪೋಷಕರು ಹಾಗೂ ಪ್ರಮುಖರು ಭಾಗವಹಿಸಿದ್ದರು. ಈ ಶಿಬಿರವನ್ನು ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರು ಪಾಲ್ಗೊಂಡು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು.
ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ಮತ್ತು ಸಂವರ್ಧನೆಯಲ್ಲಿ ಸರ್ಕಾರೇತರ ಸಂಸ್ಥೆಗಳ ಪಾತ್ರ ವಿಶೇಷವಾಗಿ ಸಿಕ್ರಂಗೆ ಸಂಬಂಧಿಸಿದಂತೆ ಒಂದು ಅಧ್ಯಯನವೆಂಬ ಗಹನ ವಿಷಯದ ಕುರಿತು ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವ ಹಾಗೂ ಸಿಕ್ರಂ ಮೈಸೂರು ಜಿಲ್ಲಾ ಮಾನವ ಹಕ್ಕುಗಳ ಕೇಂದ್ರದ ಸಂಯೋಜಕರಾಗಿರುವ ಡಾ.ದೇವರಾಜು.ಎಸ್ .ಎಸ್ ರವರು ವೇದಿಕೆಯ ಮೇಲಿದ್ದವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣದಲ್ಲಿ ಸಿಕ್ರಂ ಸಂಸ್ಥೆಯ ಕಾರ್ಯ ಸಾಧನೆಗಳಾದ ಮಾನವ ಹಕ್ಕುಗಳ ಶಿಕ್ಷಣ ಮತ್ತು ತರಬೇತಿ, ಮಾನವ ಹಕ್ಕುಗಳ ಸಹಾಯವಾಣಿ, ಸಂಚಾರಿ ಕಾನೂನು ಘಟಕ, ಸತ್ಯಶೋಧನ ವರದಿ, ಮಾನವ ಹಕ್ಕುಗಳ ಕುರಿತಾದ ವಕಾಲತ್ತು ಹಾಗೂ ಮಾನವ ಹಕ್ಕುಗಳು ಮನೆ ಮಾತಾಗುವಂತೆ ಮಾಡುವಲ್ಲಿ ಸಿಕ್ರಂ ಸಂಸ್ಥೆ ನಿರ್ವಹಿಸಿದ ಪಾತ್ರ ಮತ್ತು ಮಾನವ ಹಕ್ಕುಗಳು ಹಾಗೂ ಕಾನೂನು ಸಲಹಾ ಶಿಬಿರದ ಔಚಿತ್ಯತೆಯ ಕುರಿತು ಮಾತನಾಡಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಡಾ. ಗುರುಸ್ವಾಮಿಯವರು ಪೌರಕಾರ್ಮಿಕರ ಸುರಕ್ಷತೆ ಮತ್ತು ಕ್ಷೇಮಭಿವೃದ್ಧಿಗಾಗಿ ಇರುವ ಕಾನೂನಿನ ಅನುಷ್ಠಾನದಲ್ಲಿ ಇರಬಹುದಾದ ಅನಾನುಕೂಲತೆಗಳ ಬಗ್ಗೆ ಸರ್ವರ ಗಮನ ಸೆಳೆದರು. ಪೌರಕಾರ್ಮಿಕರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಔದ್ಯೋಗಿಕ ಉನ್ನತಿಗಾಗಿ ಸರ್ಕಾರಗಳು ಯೋಜನೆಗಳನ್ನು ರೂಪಿಸಿದ್ದರೂ ಅವು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ, ತತ್ಪರಿಣಾಮವಾಗಿ ಪೌರಕಾರ್ಮಿಕರು ಇನ್ನು ಶೋಚನೀಯ ಸ್ಥಿತಿಯಲ್ಲೇ ಇದ್ದಾರೆ. ಆದ್ದರಿಂದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಕಾಲಾನುಕಾಲಕ್ಕೆ ಮಾಡುತ್ತಿರುವ ಶಿಫಾರಸುಗಳು ತತ್ಸಂಬಂಧಿತ ಕಾಯ್ದೆ ಕಾನೂನುಗಳಲ್ಲಿರುವ ಅವಕಾಶಗಳು ಬರಿ ಕಾಗದಕ್ಕೆ ಸೀಮಿತವಾದ ಶುಷ್ಕ ಶಬ್ದಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ನಾಗರಿಕ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಎಚ್. ಆರ್ .ಗೋವಿಂದರಾಜು ರವರು, ಆರ್ಯ ದ್ರಾವಿಡರಾದಿಯಿಂದಾಗಿ ಹುಟ್ಟಿ ಬೆಳೆದ ಜಾತಿ ಆಧಾರಿತ ಅಸಮಾನತೆಗಳು ವ್ಯಕ್ತಿ ಸ್ವಾತಂತ್ರ್ಯ, ಘನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವ್ಯತಿರಿಕ್ತವೆಲ್ಲಬಹುದಾದ ಅಪಾಯಗಳನ್ನುಂಟು ಮಾಡುತ್ತಿವೆ. ಡಾ.ಬಿ.ಆರ್ ಅಂಬೇಡ್ಕರ್ ಅವರಿಂದ ಪ್ರತಿಪಾದಿಸಲ್ಪಟ್ಟ ಶಿಕ್ಷಣ, ಸಂಘಟನೆ ಮತ್ತು ಹೋರಾಟದಂತಹ ಧ್ಯೇಯ ತತ್ವಗಳನ್ನು ಚಾಚು ತಪ್ಪದೇ ಅನುಷ್ಠಾನಗೊಳಿಸುವುದಕ್ಕಾಗಿ ಸಾಮೂಹಿಕ ಪ್ರಯತ್ನ ನಿರಂತರವಾಗಿ ಆಗಬೇಕೆಂದು ಪ್ರತಿಪಾದಿಸಿದರು. ಪಠ್ಯ ಪುಸ್ತಕಗಳಲ್ಲಿ ಮಾನವ ಹಕ್ಕುಗಳು ಮತ್ತು ಅವುಗಳನ್ನು ಅನುಷ್ಠಾನಗೊಳಿಸಲು ಇರುವ ಕಾನೂನುಗಳ ಕುರಿತು ವಿಚಾರಗಳು ಮೂಡಿ ಬರಬೇಕಾದ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲಾ ರೈತ ಮುಖಂಡರಾದ ಪಿ.ಮರಂಕಯ್ಯನವರು, ಒಂದುವರೆ ವರ್ಷಗಳ ಕಾಲ ಕೃಷಿ ಮಸೂದೆಯ ವಿರುದ್ಧ ದಿಟ್ಟ ಹೋರಾಟ ನಡೆಸಿದ ರೈತರನ್ನು ಮತ್ತು ರೈತ ಚಳುವಳಿಯನ್ನು ನಿಗ್ರಹಿಸುವಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ಮುಗ್ಧ ರೈತರ ಮಾನವ ಹಕ್ಕುಗಳ ಮಾರಣಹೋಮಕ್ಕೆ ಹೇಗೆ ಕಾರಣವಾದವೆಂಬುದನ್ನು ನಿರೂಪಿಸಿದರು. ಅಲ್ಲದೆ ಇಂತಹ ಸಮಾಜಮುಖಿ ಶಿಬಿರಗಳು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಬೇಕೆಂದು ಅಭಿಪ್ರಾಯಪಟ್ಟರು.
ಪತ್ರಕರ್ತರಾದ ಹೆಗ್ಗೂರು ಸತೀಶ್ ರವರು, ಮಕ್ಕಳಂತೆಯೇ ಪೋಷಕರು ಮತ್ತು ಅಧಿಕಾರಸ್ಥರು ಸಹ ಮಾನವ ಹಕ್ಕುಗಳ ಕುರಿತಾದ ವಿವಿಧ ಕಾಯ್ದೆ ಕಾನೂನುಗಳ ಕುರಿತು ಜಾಗೃತರಾಗುವ ಅಗತ್ಯತೆ ಈ ದಿನದ ಬಹುದೊಡ್ಡ ಅನಿವಾರ್ಯತೆಯಾಗಿದೆ ಎಂದು ಸಭಿಕರಿಗೆ ಮನವರಿಕೆ ಮಾಡಿಕೊಟ್ಟರು.
ಕುದುರೆ ಮಾಳದಲ್ಲಿರುವ ತಳ ಸಮುದಾಯದಂತಹ ಜನತೆಗೆ ಕಾನೂನು ಸಲಹಾ ಶಿಬಿರದಂತಹ ಕಾರ್ಯಕ್ರಮಗಳು ಇನ್ನು ಅಧಿಕ ಸಂಖ್ಯೆಯಲ್ಲಿ ಆಯೋಜಿತಗೊಂಡರೆ ಧ್ವನಿ ಇಲ್ಲದ ದುರ್ಬಲ ವರ್ಗದವರು ಶಶಕ್ತರಾಗುತ್ತಾರೆ ಅಲ್ಲದೆ ಪುರುಷರಂತೆ ಸ್ತ್ರೀಯರು ಸಹ ಸ್ವಾತಂತ್ರ್ಯ, ಸಮಾನತೆ ಮತ್ತು ವ್ಯಕ್ತಿಘನತೆ ಮತ್ತು ನ್ಯಾಯತತ್ವದ ಫಲಗಳನ್ನು ಅನುಭವಿಸಲು ಸಾಧ್ಯ ಎಂದು ಕುದುರೆ ಮಾಳದ ಶ್ರೀ ಶಕ್ತಿ ಸಂಘದ ರತ್ನಮ್ಮ ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರಾದ ಪ್ರೊ. ಕೃಷ್ಣಹೊಂಬಳ್ ರವರು ಮಕ್ಕಳಿಗೆ ಮಕ್ಕಳ ಭಾಷೆಯಲ್ಲಿಯೇ ಮಾನವ ಹಕ್ಕುಗಳನ್ನು ಅಧಿಕಾರಯುತವಾಗಿ ಅನುಭವಿಸಿ ಚಲಾಯಿಸಲು ಮತ್ತು ಪರರ ಮಾನವ ಹಕ್ಕುಗಳನ್ನು ಗೌರವಿಸಲು ಪೂರಕವಾದ ಸೂಕ್ತ ಅವಕಾಶಗಳನ್ನು ಸೃಷ್ಟಿಸುವ ಅಗತ್ಯತೆ ಇದೆ ಎಂದು ತಿಳಿಸಿಕೊಟ್ಟರು. ಪೋಕ್ಸೋ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ, ರಾಷ್ಟ್ರೀಯ ಮಹಿಳಾ ದೌರ್ಜನ್ಯ ಪ್ರತಿಬಂಧ ಕಾಯಿದೆ, ವರದಕ್ಷಿಣೆ ನಿಷೇಧ ಕಾಯ್ದೆ, ಕೌಟುಂಬಿಕ ದೌರ್ಜನ್ಯ ಕಾಯ್ದೆಯಂತಹ ವಿವಿಧ ಕಾಯ್ದೆ ಕಾನೂನುಗಳ ಕುರಿತು ದೊಡ್ಡ ಮಟ್ಟದಲ್ಲಿ ಜನಜಾಗೃತಿ ಆಗಬೇಕಾದ ಅಗತ್ಯತೆ ಇದೆ ಎಂದು ಒತ್ತಿ ಹೇಳಿದರು. ವಿವಿಧ ಮಾನವ ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿದ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಪ್ರತಿಪಾದಿಸಿದರು. ವಿವಿಧ ಜನ ಸಮುದಾಯಗಳ ಹಕ್ಕುಗಳ ರಕ್ಷಣೆಯಲ್ಲಿ ರಾಜ್ಯ ಮತ್ತು ಸರ್ಕಾರದಂತಹ ರಾಜ್ಯಆಡಳಿತದಂತಹ ಸಂಸ್ಥೆಗಳು ಮತ್ತು ವಿವಿಧ ನವ ಸಮಾಜ ಚಳುವಳಿಗಳ ನೇತೃತ್ವ ವಹಿಸಿದ ಮುಖಂಡರು ಮತ್ತು ಮೇಧಾವಿಗಳು ಸಕಾಲಿಕ ಮಧ್ಯಸ್ಥಿಕೆ ವಹಿಸದಿದ್ದರೆ ಸಂವಿಧಾನದಂತಹ ಪರಮೋಚ್ಚ ಶಾಸನಗಳು ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಶಾಸನಗಳು, ಒಡಂಬಡಿಕೆಗಳು ಮತ್ತು ಘೋಷಣೆಗಳು ಒಣಘೋಷ ವಾಕ್ಯವಾಗಿಯೇ ಉಳಿಯುತ್ತವೆ. ಸತ್ವಪೂರ್ಣ ಸಮಾಜ ನಿರ್ಮಾಣಕ್ಕೆ ಮತ್ತು ಸದೃಢ ರಾಷ್ಟ್ರ ಮತ್ತು ಮನುಕುಲದ ನಿರ್ಮಾಣಕ್ಕೆ ಸರ್ವರ ಸುಖಮಯ ಜೀವನಕ್ಕೆ ಶಕ್ತಿ ಆಗಬಲ್ಲ ಮಾನವ ಹಕ್ಕುಗಳೇ ಆಶಾಕಿರಣಗಳಾಗಿವೆ ಎಂದರು.
ಈ ಕಾರ್ಯಕ್ರಮದಲ್ಲಿ ಸಿಕ್ರಂ ನ ಮೈಸೂರು ಜಿಲ್ಲಾ ಕೇಂದ್ರದ ಕಾನೂನು ಸಲಹೆಗಾರರಾದ ಪ್ರಕಾಶ್ ರವರು ಎಲ್ಲರಿಗೂ ವಂದಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಕಾನೂನು ಶಾಲೆಯ ವಿದ್ಯಾರ್ಥಿಯಾದ ಗಿರೀಶ್ ಬೆಂಡರವಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಕುದುರೆ ಮಾಳದ ಪ್ರಮುಖರುಗಳಾದ ಪಳನಿ ಸ್ವಾಮಿ, ರಾಜು, ಕುಮಾರ್, ಮಹದೇವು, ರಮ್ಯಾ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರಾದ ಸಂತೋಷ್ ಕುಮಾರ್ ಎಚ್ .ಜೆ ಹಾಗೂ ಮನು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw