ತವರು ಮನೆಯಿಂದ ಹಣ ತರುವಂತೆ ಪೀಡಿಸಿ ಪತ್ನಿಯ ಕತ್ತು ಕೊಯ್ದ ಬರ್ಬರ ಹತ್ಯೆ ಮಾಡಿದ ಪತಿ
15/09/2023
ಮೈಸೂರು: ತವರು ಮನೆಯಿಂದ ಹಣ ತರುವಂತೆ ತನ್ನ ಪತ್ನಿಯನ್ನು ಪೀಡಿಸಿದ ವ್ಯಕ್ತಿಯೋರ್ವ ಬ್ಲೇಡ್ ನಿಂದ ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಂಜನಗೂಡು ಸಮೀಪದ ಚಾಮಲಾಪುರ ಹುಂಡಿಯಲ್ಲಿ ನಡೆದಿದೆ.
ಶೋಭಾ(26) ಕೊಲೆಯಾದ ಮಹಿಳೆಯಾಗಿದ್ದಾರೆ. ಪತಿ ಮಂಜುನಾಥ್ (27) ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. 8 ವರ್ಷಗಳ ಹಿಂದೆ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ 5 ವರ್ಷದ ಮಗು ಕೂಡ ಇದೆ. ಶೋಭಾ ತುಂಬು ಗರ್ಭಿಣಿಯಾಗಿದ್ದರಿಂದ ಹೆರಿಗೆಯ ಆರೈಕೆಗಾಗಿ ತವರಿಗೆ ಬಂದಿದ್ದರು. ಈ ವೇಳೆ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ ಪತಿ ಮಂಜುನಾಥ್, ಪತ್ನಿಯ ತವರು ಮನೆಗೆ ಬಂದು ಪತ್ನಿಯ ಬಳಿ ಜಗಳವಾಡಿದ್ದಲ್ಲೇ ಬ್ಲೇಡ್ ನಿಂದ ಆಕೆಯ ಕತ್ತು ಕೊಯ್ದು ಗಂಭೀರವಾಗಿ ಗಾಯಗೊಳಿಸಿದ್ದನು.
ಕೂಡಲೇ ಶೋಭಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆರೋಪಿ ಮಂಜುನಾಥ್ ಕುಡಿದು ಬಂದು ತವರಿಂದ ಹಣ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ಹೇಳಲಾಗಿದೆ.