ತಮಿಳುನಾಡಿಗಾಗಿ ಪ್ರಾಣ ಒತ್ತೆ ಇಟ್ಟ ವ್ಯಕ್ತಿಯ ಮೊಮ್ಮಗ ನಾನು: ಕೊಲೆ ಬೆದರಿಕೆ ಹಾಕಿದ ಅಯೋಧ್ಯಾ ಸ್ವಾಮಿಗೆ ಉದಯನಿಧಿ ಸ್ಟಾಲಿನ್ ತಿರುಗೇಟು
ಚೆನ್ನೈ: ಸನಾತನ ಎನ್ನುವುದು ಡೆಂಗ್ಯೂ ಮಲೇರಿಯಾ ಎಂದು ತಮಿಳುನಾಡು ಸಿಎಂ ಪುತ್ರ, ಸಚಿವ, ನಟ ಉದಯ ನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಬ್ರಾಹ್ಮಣ್ಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ನಡುವೆ ಅಯೋಧ್ಯಾ ಸ್ವಾಮೀಜಿ ಪರಮಹಂಸ ಆಚಾರ್ಯ ಉದಯನಿಧಿ ಸ್ಟಾಲಿನ್ ತಲೆಯನ್ನು ಕತ್ತರಿಸಿದವರಿಗೆ 10 ಕೋಟಿ ನೀಡುವುದಾಗಿ ಘೋಷಿಸಿದ್ದಾರೆ. ಸ್ವಾಮೀಜಿಯ ಹೇಳಿಕೆಗೆ ಇದೀಗ ಉದಯನಿಧಿ ಸ್ಟಾಲಿನ್ ನೀಡಿದ ಉತ್ತರ ತಮಿಳುನಾಡಿನಾದ್ಯಂತ ಸಿಕ್ಕಪಟ್ಟೆ ವೈರಲ್ ಆಗುತ್ತಿದೆ.
ಇಂತಹ ಹೇಳಿಕೆಗಳಿಗೆ ನಾನು ಹೆದರುವುದಿಲ್ಲ, ನನ್ನ ಅಜ್ಜ ಕರುಣಾನಿಧಿ ಅವರ ಹಾದಿಯಲ್ಲಿ ನಾನು ಸಾಗುತ್ತಿದ್ದೇನೆ. ಅವರಿಗೂ ಅನೇಕ ಬೆದರಿಕೆಗಳು ಬಂದಿದ್ದವು. ನನ್ನ ಹೇಳಿಕೆಗೆ ಸಾಕಷ್ಟು ಟೀಕೆಗಳು ಬರುತ್ತವೆ ಎಂದು ನನಗೆ ತಿಳಿದಿತ್ತು ಅಂದುಕೊಂಡಂತೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಅಮಿತ್ ಶಾರಿಂದ ನಡ್ಡಾವರೆಗೆ ಎಲ್ಲರೂ ಉದಯ ನಿಧಿ ಬಗ್ಗೆ ಮಾತನಾಡುತ್ತಿದ್ದಾರೆ. ಭಾರತದಾದ್ಯಂತ ನನ್ನನ್ನು ಬಂಧಿಸುವಂತೆ ದೂರು ದಾಖಲಾಗಿದೆ. ಇಂದು ಒಬ್ಬ ಸಂತ ನನ್ನ ತಲೆಗೆ ಬಹುಮಾನ ಘೋಷಿಸಿದ್ದಾರೆ. ಇವನನ್ನು ಸಾಧು ಎಂದು ಯಾರು ಹೇಳಿದರೋ ಅಂತ ನಾನು ಕೇಳುತ್ತೇನೆ, ನನ್ನ ತಲೆಯ ಮೇಲೆ ಆತನಿಗೇನು ಪ್ರೀತಿ? ನೀವು ಸಂತನೇ ಆಗಿದ್ದರೆ, ನಿಮ್ಮ ಬಳಿ 10 ಕೋಟಿ ಇರಲು ಹೇಗೆ ಸಾಧ್ಯ? ನೀವು ಸಂತರೇ ಅಥವಾ ನಕಲಿ ಸಂತರೇ ಎಂದು ಪ್ರಶ್ನಿಸಿದರಲ್ಲದೇ, ನನ್ನ ತಲೆ ಕಡಿಯಲು 10 ಕೋಟಿ ಯಾಕೆ? ಒಂದು ಬಾಚಣಿಗೆಗೆ 10 ರೂಪಾಯಿ ಕೊಟ್ಟರೆ ನನ್ನ ಕೂದಲನ್ನು ನಾನೇ ಬಾಚಿಕೊಳ್ಳಬಲ್ಲೆ ಎಂದು ತಿರುಗೇಟು ನೀಡಿದ್ದಾರೆ.
ಇಂತಹ ಬೆದರಿಕೆಗಳಿಗೆಲ್ಲ ನಾವು ಹೆದರುವುದಿಲ್ಲ, ತಮಿಳುನಾಡಿಗಾಗಿ ಪ್ರಾಣ ಒತ್ತೆ ಇಟ್ಟ ವ್ಯಕ್ತಿಯ ಮೊಮ್ಮಗ ನಾನು ಎಂದು ಸ್ವಾಮೀಜಿಗೆ ಪ್ರತಿ ಸವಾಲು ಹಾಕಿದ್ದಾರೆ.