ನಾನು ಹಾಗೂ ನನ್ನ ದಾಖಲೆಗಳು ಕ್ಲೀನ್ ಆಗಿವೆ; ಬಿಜೆಪಿ ಕುತಂತ್ರ ಫಲಿಸುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ - Mahanayaka
11:13 PM Thursday 14 - November 2024

ನಾನು ಹಾಗೂ ನನ್ನ ದಾಖಲೆಗಳು ಕ್ಲೀನ್ ಆಗಿವೆ; ಬಿಜೆಪಿ ಕುತಂತ್ರ ಫಲಿಸುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

dk shivakumar
20/10/2023

ಬೆಂಗಳೂರು/ ಕೊಚ್ಚಿನ್: “ನಾನು ಮತ್ತು ನನ್ನ ದಾಖಲೆಗಳು  ಎರಡೂ ಕ್ಲೀನ್ ಇವೆ. ಬಿಜೆಪಿಯ ಯಾವುದೇ ಕುತಂತ್ರಗಳು ಫಲ ನೀಡುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣಲ್ಲಿ ಸಿಬಿಐ ವಿಚಾರಣೆಗೆ ಹೈಕೋರ್ಟ್ ಹಸಿರು ನಿಶಾನೆ ನೀಡಿರುವ ಬಗ್ಗೆ ದೇವನಹಳ್ಳಿ ವಿಮಾನ ನಿಲ್ದಾಣ ಹಾಗೂ ಕೇರಳದ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಗುರುವಾರ ಅವರು ಈ ರೀತಿ ಪ್ರತಿಕ್ರಿಯಿಸಿದರು;

“ಬಿಜೆಪಿಯ ಕುತಂತ್ರದಿಂದ ಅಕ್ರಮ ಆಸ್ತಿ ಗಳಿಕೆಯ ಪ್ರಕರಣವನ್ನ ಬಲವಂತವಾಗಿ ನನ್ನ ಮೇಲೆ ಹಾಕಲಾಗಿದೆ. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಇದ್ದ ಅಡ್ವೋಕೇಟ್ ಜನರಲ್ ಅವರೇ ‘ಇದು ಸಿಬಿಐ’ಗೆ ನೀಡುವಂತಹ ಪ್ರಕರಣವಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಆದರೂ ಕಾನೂನು ಬಾಹಿರವಾಗಿ ಸಿಬಿಐಗೆ ಪ್ರಕರಣ ವಹಿಸಿ, ನನ್ನ ಮೇಲೆ ದ್ವೇಷ ರಾಜಕಾರಣ ಮಾಡಲಾಗುತ್ತಿದೆ. ನಾವು ನ್ಯಾಯಾಲಯಕ್ಕೆ ಸಿಬಿಐ ದಾಖಲಿಸಿರುವ ಎಫ್‌ಐಆರ್ ಸರಿ ಇಲ್ಲ ಎಂದು ಮೇಲ್ಮನವಿ ಸಲ್ಲಿಸಿದ್ದೆವು'” ಎಂದರು.

“ಶೇ.90 ರಷ್ಟು ತನಿಖೆ ನಡೆಸಿದ್ದೇವೆ ಎಂದು ಸಿಬಿಐ ನ್ಯಾಯಾಲಯದ ಮುಂದೆ ಹೇಳಿದೆ. ನಾನು, ನನ್ನ ಹೆಂಡತಿ ಹಾಗೂ ಕುಟುಂಬದವರು ನನ್ನ ಆಸ್ತಿ ಯಾವುದು, ನನ್ನ ಹೆಂಡತಿಯ ಆಸ್ತಿ ಯಾವುದು ಎಂದು ಹೇಳಬೇಕು. ನನ್ನನ್ನೇ ಕರೆಸದೆ, ವಿಚಾರಣೆ ಮಾಡದೇ ಹೇಗೆ ಶೇಕಡಾ 90 ರಷ್ಟು ತನಿಖೆ ಮಾಡಿದರೋ ಗೊತ್ತಿಲ್ಲ” ಎಂದರು.




“ನನಗೆ ನ್ಯಾಯಲಯದ ಬಗ್ಗೆ ಗೌರವ, ನಂಬಿಕೆಯಿದೆ. ಅಗತ್ಯ ಸಂದರ್ಭದಲ್ಲಿ ಸೂಕ್ತ ಉತ್ತರ ಕೊಡುತ್ತೇನೆ. ಏನೇ ಪ್ರೇರಣೆ ಇರಬಹುದು, ಆದರೆ ನಾನು ಕಾನೂನು ಚೌಕಟ್ಟಿನಲ್ಲೇ ಹೋರಾಟ ಮಾಡುತ್ತೇನೆ. ಬಿಜೆಪಿ ಏನೇ ಷಡ್ಯಂತ್ರ ಮಾಡಿದರೂ ನ್ಯಾಯಾಲಯ ಹಾಗೂ ನನ್ನ ಪಟ್ಟಿ ತಕ್ಕ ಉತ್ತರ ನೀಡಲಿ” ಎಂದು ತಿಳಿಸಿದರು.

ಇತ್ತೀಚೆಗೆ ನಡೆದ ಇ.ಡಿ ದಾಳಿ ವೇಳೆ ಕರ್ನಾಟಕದಲ್ಲಿ ದೊರೆತ ಹಣ ಕಾಂಗ್ರೆಸ್ ಪಕ್ಷದ್ದು ಎನ್ನುವ ಪ್ರತಿಪಕ್ಷದವರ ಆರೋಪಗಳ ಬಗ್ಗೆ ಕೇಳಿದಾಗ “ಇಡಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಎಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಹಾಗೂ ಪಕ್ಷಕ್ಕೆ ಸಂಬಂಧಿಸಿದವರ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಏನು ಸ್ಪಷ್ಟನೆ ನೀಡಬೇಕೋ ಅದನ್ನು ಇ.ಡಿ ಅವರೇ ಬಿಜೆಪಿ ಮತ್ತು ಜೆಡಿಎಸ್ ಗೆಳೆಯರಿಗೆ ನೀಡಿದ್ದಾರೆ” ಎಂದು ತಿರುಗೇಟು ನೀಡಿದರು.

ಅದಾನಿಯವರು ಕಲ್ಲಿದ್ದಲು ಹಗರಣ ನಡೆಸಿದ್ದಾರೆ ಎನ್ನುವ ರಾಹುಲ್ ಗಾಂಧಿ ಅವರ ಆರೋಪದ ಬಗ್ಗೆ ಕೇಳಿದಾಗ “ರಾಹುಲ್ ಗಾಂಧಿ ಅವರು ಸುಮ್ಮನೆ ಆರೋಪ ಮಾಡುವವರಲ್ಲ, ಒಳನೋಟ ಹಾಗೂ ಆಳವಾದ ಜ್ಞಾನ ಹೊಂದಿರುವ ನಾಯಕ. ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಮಾಹಿತಿಯಿಲ್ಲದ ವಿಚಾರವನ್ನು ತಿಳಿದುಕೊಂಡು ಮಾತನಾಡಬೇಕು ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ  ಕಾಂಗ್ರೆಸ್ ಸ್ಥಿತಿಗತಿ ಹೇಗಿದೆ ಎನ್ನುವ ಪ್ರಶ್ನೆಗೆ “ಇಡೀ ದೇಶಕ್ಕೆ ಕರ್ನಾಟಕ ಮಾದರಿಯನ್ನು ಕೊಟ್ಟಿದ್ದೇವೆ. ‘ಇಂಡಿಯಾ’ ಒಕ್ಕೂಟ ರೂಪು ಪಡೆದುಕೊಂಡಿದ್ದೇ ಕರ್ನಾಟಕದಲ್ಲಿ, ನಾವು ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುತ್ತೇವೆ ಎನ್ನುವ ಆತ್ಮವಿಶ್ವಾಸ ಬಲವಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ನಿಮ್ಮನ್ನು ಕಿಂಗ್ ಮೇಕರ್ ಎಂದು ಜನ ಕರೆಯುತ್ತಾರೆ, ರಾಜನ ಸ್ಥಾನದಲ್ಲಿ ಯಾವಾಗ ಕುಳಿತುಕೊಳ್ಳುತ್ತೀರಿ ಎಂದು ಕೇಳಿದಾಗ “ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ” ಎಂದರು.

ಇತ್ತೀಚಿನ ಸುದ್ದಿ