ಸ್ಫೋಟ ಪ್ರಕರಣ: ಇಲಾಖೆ ವರದಿ ಬರೋವರೆಗೂ ನಾನು ಏನು ಹೇಳಲು ಆಗಲ್ಲ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಇಂದು ಮಧ್ಯಾಹ್ನ ಬ್ಲಾಸ್ಟ್ ಆಗಿದೆ, ಬ್ಲಾಸ್ಟ್ ಯಾವ ರೀತಿ ಆಯ್ತು ಹೇಗೆ ಮಾಡಿದ್ದಾರೆ ಅಂತಾ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಕಮಿಷನರ್ ಡಿಜಿಯವರು ಜೊತೆಗೆ FSL ಬಾಂಬ್ ಸ್ಕ್ಯಾಡ್ ಕೂಡ ಹೋಗಿದೆ. ಸ್ಥಳದಲ್ಲಿ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. ಬಳಿಕ ಮೂಲ ತಿಳಿಯಬೇಕಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ತುಮಕೂರಿನ ಕುಣಿಗಲ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 9 ಜನರಿಗೆ ಗಾಯ ಆಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರಿಗೂ ಗಂಭೀರ ಆಗಿಲ್ಲ ಎಂಬ ಮಾಹಿತಿ ಬಂದಿದೆ. ನಾನು ಕೂಡ ಸಂಜೆ ಅಥವಾ ನಾಳೆ ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡ್ತಿನಿ ಎಂದು ತಿಳಿಸಿದರು.
ಈಗ ಸ್ಯಾಂಪಲ್ ಕಲೆಕ್ಟ್ ಮಾಡಿಕೊಂಡಿದ್ದಾರೆ. ಪರಿಶೀಲನೆ ಆಗ್ತಿದೆ. ಒಂದು ವೇಳೆ ಕುರುಹುಗಳು ಸಿಕ್ಕಲ್ಲಿ ಮುಂದಿನ ತನಿಖೆ ಮಾಡಲಾಗುತ್ತದೆ ಎಂದರು.
ಹೇಳಿಕೆಗಳು ಬಂದಿವೆ ಅಷ್ಟೇ ಅವರಿವರು ಹೇಳುತ್ತಿದ್ದಾರೆ. ಐಇಡಿ ಅಂತಾ ಹೇಳ್ತಿದ್ದಾರೆ. ಆದರೆ ಖಚಿತತೆ ಇಲ್ಲ. ಬ್ಯಾಗ್ ಇತ್ತು ಅಂತಿದ್ದಾರೆ. ನಿರ್ದಿಷ್ಟ ಮಾಹಿತಿ ಇನ್ನೂ ಬರಬೇಕಿದೆ ಎಂದರು.
ನಿರ್ದಿಷ್ಟ ಮಾಹಿತಿ ನಮ್ಮ ಇಲಾಖೆಯಿಂದ ಬರಬೇಕಿದೆ. ಇಂತಹ ವಿಚಾರದಲ್ಲಿ ಸ್ಪೆಕ್ಯುಲೆಟ್ ಮಾಡುವುದು ಸರಿಯಲ್ಲ. ನಮ್ಮ ಇಲಾಖೆ ವರದಿ ಬರೋವರೆಗೂ ನಾನು ಏನು ಹೇಳಲು ಆಗಲ್ಲ ಎಂದರು.