ಅಮೆರಿಕಾಕ್ಕೆ ಹೋಗಲು ಇನ್ಮುಂದೆ ಬೆಂಗಳೂರಲ್ಲೇ ವೀಸಾ ಸಿಗುತ್ತದೆ: ಮೋದಿ ಅಮೆರಿಕಾ ಭೇಟಿ ಬೆನ್ನಲ್ಲೇ ಮಹತ್ವದ ಬೆಳವಣಿಗೆ
ನಿಮಗೆ ಅಮೆರಿಕಾಕ್ಕೆ ಹೋಗಲು ಆಸೆ ಇದ್ಯಾ..? ವೀಸಾ ಪಡೆಯುವುದೇ ದೊಡ್ಡ ಚಿಂತೆನಾ..? ಹಾಗಾದ್ರೆ ಇನ್ಮುಂದೆ ಆ ಚಿಂತೆ ಬಿಟ್ಟು ಬಿಡಿ. ಯೆಸ್. ಯಾಕ್ ಗೊತ್ತಾ..? ಇನ್ಮುಂದೆ ಅಮೆರಿಕಕ್ಕೆ ತೆರಳಲು ಬೆಂಗಳೂರಿನಲ್ಲೇ ವೀಸಾ ಪಡೆಯುವ ಪ್ರಕ್ರಿಯೆಗಳನ್ನು ಪೂರೈಸಬಹುದು.
ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಹೊಸದಾಗಿ ದೂತಾವಾಸ ಕಚೇರಿ ಆರಂಭಿಸುವುದಾಗಿ ಅಮೆರಿಕ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ಸಂದರ್ಭದಲ್ಲೇ ಅಲ್ಲಿನ ಸರ್ಕಾರ ಈ ಘೋಷಣೆ ಮಾಡಿದೆ. ಈ ಮೂಲಕ ಕನ್ನಡಿಗರ ಬಹುದಿನಗಳ ಕನಸೊಂದು ನನಸಾಗಲಿದೆ.
ಅಮೆರಿಕವು ಬೆಂಗಳೂರು ಮತ್ತು ಅಹಮದಾಬಾದ್ ನಲ್ಲಿ ಎರಡು ಹೊಸ ಕಾನ್ಸುಲೇಟ್ ಗಳನ್ನು ತೆರೆಯಲಿದೆ. ಅದೇ ರೀತಿ ಭಾರತ ಸಿಯಾಟಲ್‌ನಲ್ಲಿ ಕಚೇರಿ ತೆರೆಯಲಿದ್ದು, ಜನರ ನಡುವಿನ ಬಾಂಧವ್ಯ ಹೆಚ್ಚಳಕ್ಕೆ ನೆರವಾಗಲಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಕಳೆದ ವರ್ಷ ಅಮೆರಿಕವು ಭಾರತೀಯ ವಿದ್ಯಾರ್ಥಿಗಳಿಗೆ ದಾಖಲೆಯ 1,25,000 ವೀಸಾಗಳನ್ನು ನೀಡಿದೆ. ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷವೊಂದರಲ್ಲೇ ಶೇಕಡಾ 20 ರಷ್ಟು ಹೆಚ್ಚಳವಾಗಿದೆ. ಇದರೊಂದಿಗೆ ಅಮೆರಿಕದಲ್ಲಿ ಅತಿದೊಡ್ಡ ವಿದೇಶಿ ವಿದ್ಯಾರ್ಥಿ ಸಮುದಾಯವಾಗಿ ಭಾರತೀಯ ವಿದ್ಯಾರ್ಥಿ ಸಮುದಾಯ ಹೊರಹೊಮ್ಮಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಹೊಸ ಕಾನ್ಸುಲೇಟ್‌ಗಳನ್ನು ತೆರೆಯಲು ಅಮೆರಿಕ ಉದ್ದೇಶಿಸಿದೆ. ಭಾರತವು 2023 ರಲ್ಲಿ ಸಿಯಾಟಲ್‌ನಲ್ಲಿ ದೂತಾವಾಸ ಕಚೇರಿ ತೆರೆಯುವುದನ್ನು ಅಮೆರಿಕ ಎದುರು ನೋಡುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ಆರಂಭಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗುರುವಾರ ಧನ್ಯವಾದ ಅರ್ಪಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw