ಕೇಂದ್ರ ಸರ್ಕಾರ ಭಯೋತ್ಪಾದಕ ದಾಳಿಗಳನ್ನು ಏಕೆ ತಡೆಗಟ್ಟುತ್ತಿಲ್ಲ, ಗೊತ್ತಾಗುತ್ತಿಲ್ಲ: ಅಸಾದುದ್ದೀನ್ ಓವೈಸಿ

ಹೈದರಾಬಾದ್: ಕೇಂದ್ರ ಸರ್ಕಾರವು ತನ್ನ ಭಯೋತ್ಪಾದನಾ ನಿಗ್ರಹ ಕ್ರಮಗಳನ್ನು ಪರಿಶೀಲಿಸಬೇಕು ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಅಸಾದುದ್ದೀನ್ ಓವೈಸಿ ಒತ್ತಾಯಿಸಿದ್ದಾರೆ.
ಪಹಲ್ಗಾಮ್ ದಾಳಿಯನ್ನು ಖಂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯನ್ನು ಖಂಡಿಸಲು ಪದಗಳು ಸಿಗುತ್ತಿಲ್ಲ. ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ಮಳೆಗರೆದ ಭಯೋತ್ಪಾದಕರು ಖಂಡಿತವಾಗಿಯೂ ಶೂರರಾಗಿರಲು ಸಾಧ್ಯವಿಲ್ಲ. ಈ ದಾಳಿಯಲ್ಲಿ ಮೃತಪಟ್ಟವರಿಗೆ ಎಐಎಂಐಎಂ ಪಕ್ಷ ಸಂತಾಪ ಸೂಚಿಸುತ್ತದೆ. ಅಲ್ಲದೇ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದಿದ್ದಾರೆ.
ಇದು ಉರಿ ಮತ್ತು ಪುಲ್ವಾಮಾ ದಾಳಿಗಿಂತಲೂ ಭೀಕರವಾಗಿದೆ. ಈ ದಾಳಿಯಲ್ಲಿ ಅಮಾಯಕ ಪ್ರವಾಸಿಗರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರವು ತನ್ನ ಭಯೋತ್ಪಾದನಾ ನಿಗ್ರಹ ಕ್ರಮಗಳನ್ನು ಪರಿಶೀಲಿಸಬೇಕು ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
“ಇದು ಗುಪ್ತಚರ ವೈಫಲ್ಯ. ಕೇಂದ್ರ ಸರ್ಕಾರ ತನ್ನ ಭಯೋತ್ಪಾದನಾ ನಿಗ್ರಹ ನೀತಿ ಯಶಸ್ವಿಯಾಗಿದೆಯೇ ಎಂದು ವಿಶ್ಲೇಷಿಸಬೇಕು. ಕಣಿವೆಯಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ ಎಂದು ಹೇಳುವ ಕೇಂದ್ರ ಸರ್ಕಾರ, ಮೇಲಿಂದ ಮೇಲೆ ನಡೆಯುತ್ತಿರುವ ಇಂತಹ ದಾಳಿಗಳನ್ನು ಏಕೆ ತಡೆಗಟ್ಟುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಭಯೋತ್ಪಾದಕರು ಮುಗ್ಧ ಜನರನ್ನು ವಿವೇಚನೆಯಿಲ್ಲದೆ ಕೊಂದಿದ್ದಾರೆ. ಕೊಲ್ಲುವ ಮೊದಲು ಅವರ ಧರ್ಮದ ಬಗ್ಗೆ ವಿಚಾರಿಸಿದ್ದಾರೆ. ಪಹಲ್ಗಾಮ್ ನಲ್ಲಿ ನಿನ್ನೆ ನಡೆದ ಘಟನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಕೇಂದ್ರ ಸರ್ಕಾರವು ಈ ಭಯೋತ್ಪಾದಕರಿಗೆ ಶಿಕ್ಷೆ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: