ನನಗೆ ಹುಟ್ಟುಹಬ್ಬ ಅಂದ್ರೆನೇ ಅಸಹ್ಯ ಅನ್ನಿಸಿ ಬಿಟ್ಟಿದೆ: ನಟ ಯಶ್

ಗದಗ: ನನಗೆ ಹುಟ್ಟುಹಬ್ಬ ಅಂದ್ರೆನೇ ಅಸಹ್ಯ ಅನ್ನಿಸಿ ಬಿಟ್ಟಿದೆ ಎಂದು ರಾಕಿಂಗ್ ಸ್ಟಾರ್ ಯಶ್ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದಾರೆ.
ಯಶ್ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟುವಾಗ ಕರೆಂಟ್ ಶಾಕ್ ಹೊಡೆದು ಮೂವರು ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಗದಗ ಸೂರಣಗಿ ಗ್ರಾಮಕ್ಕೆ ತೆರಳಿದ ಯಶ್, ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, ಬ್ಯಾನರ್ ಹಾಕೋದು ಕಟೌಟ್ ಕಟ್ಟೊದು ಬೇಡ. ಇನ್ನುಂದೆ ಈ ರೀತಿ ಮಾಡಬೇಡಿ ಎಂದು ಅಭಿಮಾನಿಗಳಿಗೆ ಯಶ್ ಕಿವಿಮಾತು ಹೇಳಿದ್ದಾರೆ.
ನನ್ನ ಹುಟ್ಟುಹಬ್ಬ ಯಾಕೆ ಬರುತ್ತೋ ಅಂತ ಭಯವಾಗುತ್ತಿದೆ. ಯಾರೂ ಈ ರೀತಿ ಮಾಡಬೇಡಿ. ಬರ್ತಡೇ ಮಾಡಬೇಡಿ ಎಂದು ಹೇಳಿದರೆ, ಬೇಸರ ಮಾಡಿಕೊಳ್ಳುತ್ತಾರೆ. ನೀವು ಬ್ಯಾನರ್, ಕಟೌಟ್ ಹಾಕುವುದನ್ನು ನಾನು ಇಷ್ಟಪಡುವುದಿಲ್ಲ. ನನ್ನ ಮೇಲೆ ಪ್ರೀತಿ ಇದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳಿ, ಮನೆ ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಸ್ಥರಿಗೆ ಏನು ನೆರವು ಬೇಕೋ ಅದನ್ನು ಮಾಡುತ್ತೇನೆ. ಆದ್ರೆ ಏನು ಕೊಟ್ಟರೂ ಮನೆ ಮಕ್ಕಳನ್ನು ಕೊಡಲು ಸಾಧ್ಯವೇ ಎಂದು ಯಶ್ ಬೇಸರ ವ್ಯಕ್ತಪಡಿಸಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಕಳೆದ ರಾತ್ರಿ ಕಟೌಟ್ ಕಟ್ಟುವಾಗ ವಿದ್ಯುತ್ ಶಾಕ್ನಿಂದ ಅಭಿಮಾನಿಗಳಾದ ಹನುಮಂತ (21), ಮುರಳಿ ನಡವಿನಮನಿ (20) ಮತ್ತು ನವೀನ್ (19) ಮೃತಪಟ್ಟಿದ್ದರು.
ಯಶ್ ಆಗಮನದ ಮಾಹಿತಿ ತಿಳಿದು ಸೂರಣಗಿ ಗ್ರಾಮಕ್ಕೆ ಜನಸಾಗರ ಹರಿದು ಬಂದಿದೆ. ಯಶ್ ಅವರ ಆಗಮನದ ಹಿನ್ನೆಲೆಯಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಅಕ್ಕಪಕ್ಕದ ಗ್ರಾಮಸ್ಥರು ಯಶ್ ಅವರನ್ನು ನೋಡಲು ಆಗಮಿಸಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುವಂತಾಯ್ತು.
ಹುಟ್ಟುಹಬ್ಬದ ಸಂದರ್ಭದಲ್ಲಿ ನಡೆಯುತ್ತಿರುವ ಅನಾಹುತಗಳಿಗೆ ಹೆದರಿ ಯಶ್ ಹುಟ್ಟು ಹಬ್ಬ ಆಚರಣೆಯೇ ಕೈಬಿಟ್ಟಿದ್ದರು. ಆದರೂ ಬೇರೆ ಬೇರೆ ರೂಪದಲ್ಲಿ ಅನಾಹುತಗಳು ಸೃಷ್ಟಿಯಾಗುತ್ತಿದೆ. 2019ರಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವಾಗ ಯಶ್ ಅವರನ್ನು ನೋಡಲು ಬಿಡದ ಕಾರಣ ಪೆಟ್ರೋಲ್ ಸುರಿದುಕೊಂಡು ರವಿ ಎಂಬ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದ. ಯಶ್ ಅವರ ನಿವಾಸದ ಬಳಿಯೇ ಈ ಘಟನೆ ನಡೆದಿತ್ತು.