ಪಕ್ಷದ ನೋಟಿಸ್ ಗೆ ಹೆದರಲ್ಲ: ಪ್ರಧಾನಿ, ಕೇಂದ್ರದ ವರಿಷ್ಠರಿಗೆ ಪತ್ರ ಬರೆಯುತ್ತೇನೆ: ಮತ್ತೆ ಗುಡುಗಿದ ರೇಣುಕಾಚಾರ್ಯ
ಬೆಂಗಳೂರು: ಪಕ್ಷದ ನೋಟಿಸ್ ಗೆ ಹೆದರಲ್ಲ, ಚುನಾವಣೆಯಲ್ಲಿ ಸೋತಿದ್ದು ಮತ್ತು ಅದಕ್ಕೆ ಯಾರು ಜವಾಬ್ದಾರರು ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ವರಿಷ್ಠರಿಗೆ ಪತ್ರ ಬರೆಯುತ್ತೇನೆ ಎಂದು ಬಿಜೆಪಿಯ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷೀಯರ ವಿರುದ್ಧ ಮತ್ತೆ ಗುಡುಗಿದ್ದಾರೆ.
ಶನಿವಾರ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ ವೈ ಅವರ ಸೂಚನೆಗಳಿಗೆ ಬದ್ಧನಾಗಿದ್ದು, ಮಾಧ್ಯಮಗಳ ಮುಂದೆ ಪಕ್ಷದ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡುವುದಿಲ್ಲ ಎಂದರು.
ನನಗೆ ನೋಟಿಸ್ ನೀಡಿದ ನಂತರ ಶಿಸ್ತು ಸಮಿತಿಯ ಅಸ್ತಿತ್ವದ ಬಗ್ಗೆ ನಮಗೆ ತಿಳಿಯಿತು. ಹನ್ನೊಂದು ಮಂದಿಗೆ ನೋಟಿಸ್ ನೀಡಲಾಗಿದೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ. ಕರ್ನಾಟಕದಲ್ಲಿನ ಪರಿಸ್ಥಿತಿಯ ಕುರಿತು ಪ್ರಧಾನಿ,, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಂತಹ ದೆಹಲಿ ನಾಯಕರಿಗೆ ಪತ್ರ ಬರೆಯುತ್ತೇನೆ. ಅವಕಾಶ ಸಿಕ್ಕರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಕಾರಣ ಮತ್ತು ಅದಕ್ಕೆ ಯಾರು ಹೊಣೆ ಎಂದು ಹೇಳುತ್ತೇನೆ ಎಂದು ರೇಣುಕಾಚಾರ್ಯ ನುಡಿದರು.
ಕಾಂಗ್ರೆಸ್ ಸೇರುವುದಾಗಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿರುವ ರೇಣುಕಾಚಾರ್ಯ, ಯಡಿಯೂರಪ್ಪ ಅವರ ನಿರ್ದೇಶನದಂತೆ ಪಕ್ಷದಲ್ಲೇ ಇರುವುದಾಗಿ ಹೇಳಿದ್ದಾರೆ. ಆದರೆ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು.
ನಿನ್ನೆ ಬಿಜೆಪಿ ನಾಯಕರ ಸಭೆಯಲ್ಲಿ ಪಕ್ಷಕ್ಕೆ ಮುಜುಗರ ತರುವಂತೆ ಹೇಳಿಕೆ ನೀಡುವವರನ್ನು ಕರೆದು ಮಾತನಾಡುವ ಜವಾಬ್ದಾರಿಯನ್ನು ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡುವ ನಿರ್ಣಯವನ್ನು ಕೈಗೊಂಡಿತ್ತು. ಆದರೆ, ಈ ಸಭೆಗೆ ಗೈರಾಗಿದ್ದ ಎಂ.ಪಿ. ರೇಣುಕಾಚಾರ್ಯ ಇಂದು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸುದೀರ್ಘ ಕಾಲ ಮಾತುಕತೆ ನಡೆಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw