ದಲಿತರ ಸೈದ್ಧಾಂತಿಕತೆ ಮತ್ತು ವೈಯುಕ್ತಿಕ ಸಂಘರ್ಷಗಳು - Mahanayaka
2:29 PM Wednesday 5 - February 2025

ದಲಿತರ ಸೈದ್ಧಾಂತಿಕತೆ ಮತ್ತು ವೈಯುಕ್ತಿಕ ಸಂಘರ್ಷಗಳು

dalith sangharsha
08/10/2022

  • ಅಪ್ಪಗೆರೆ ಡಿ.ಟಿ.ಲಂಕೇಶ್

ಸೈದ್ಧಾಂತಿಕ ವಿಚಾರಗಳೇ ಹಾಗೆ, ಬಹುತೇಕ ಸಂದರ್ಭಗಳಲ್ಲಿ ವ್ಯಕ್ತಿಗಳ ನಡುವಿನ ವೈಯುಕ್ತಿಕ ಸಂಬಂಧಗಳನ್ನು ನಿರ್ಧರಿಸುತ್ತವೆ. ನಮ್ಮವರನ್ನು ಸದಾ ಒಂದು ಅನುಮಾನದ ಕಣ್ಣಿಟ್ಟು ನೋಡುವಂತೆ ಮಾಡುತ್ತವೆ.‌ ಇತರರ ನಡುವೆ ಚರ್ಚೆಗೆ ಕುಂತಾಗ ಹಗುರವಾದ ಮಾತುಗಳನ್ನಾಡಿಸುತ್ತವೆ.‌ ಎದುರಿಗೆ ಸಿಕ್ಕಾಗ ತೋರಿಕೆ ನಗುನಗುತ್ತಾ ಮಾತನಾಡಿದರೂ ಸಹ ಒಳಗೊಳಗೆ ಕುಬ್ಜರನ್ನಾಗಿಸುತ್ತವೆ.‌ ಬಹುಶಃ ಇದು ನಮ್ಮ ಸಮುದಾಯದ ಹೋರಾಟಗಾರರ, ಚಿಂತಕರ, ಬರಹಗಾರರ ಸಮಸ್ಯೆ ಮಾತ್ರ ಅನ್ನಿಸುತ್ತೆ. ನಮ್ಮವರನ್ನ ನಾವೇ ಪ್ರಶ್ನೆ ಮಾಡೋದು ಜಾಸ್ತಿ ಅನ್ನಿಸುತ್ತೆ. ನಮಗೆ ನಮ್ಮವರ ಬಗ್ಗೆ ಇರುವ ತಕರಾರಿನ ಕಾರಣಕ್ಕೆ, ನೋವು, ಸಂಕಟದ ಕಾರಣಕ್ಕೆ, ಮೌನದ ಕಾರಣಕ್ಕೆ, ನಿಲುವುಗಳ ಕಾರಣಕ್ಕೆ ಹೀಗೆ ನಾನಾ ಕಾರಣಕ್ಕೆ ನಾವು ಪ್ರಶ್ನೆಗಳ ಚೆಂಡುಗಳನ್ನು ಸದಾ ಎಸೆಯುತ್ತಲೇ ಇರುತ್ತೇವೆ.‌ ಈ ಮೂಲಕವೂ ನಾವು ‘ಚಾಲ್ತಿ’ಯಲ್ಲಿರಲು ಬಯಸುತ್ತೇವೆ ಕೂಡ.

ದಲಿತರಿಗೆ ಅಂತ ಎಲ್ಲರೂ ಒಪ್ಪಿ ಪಾಲಿಸಬಯಸುವ ಒಂದೇ ಒಂದು ಸೈದ್ಧಾಂತಿಕತೆ ಈ ದೇಶದಲ್ಲಿ ಇದುವರೆಗೂ ರೂಪುಗೊಂಡಿಲ್ಲ. ಸೈದ್ಧಾಂತಿಕ ಗ್ರಹಿಕೆಗಳಲ್ಲೇ ದಲಿತರು ನಾನಾ ಗುಂಪುಗಳ ಅಡಿಯಲ್ಲಿ ನಿಂತುಬಿಟ್ಟಿದ್ದಾರೆ. ಕೆಲವು ದಲಿತರು ಎಡಪಂಥ ಅನುಸರಿಸುತ್ತಾರೆ, ಕಮ್ಯುನಿಸ್ಟರೂ ಇದ್ದಾರೆ, ಬಹುಜನ ಚಳುವಳಿಯ ಸೈದ್ಧಾಂತಿಕತೆಯನ್ನು ಅನುಸರಿಸುವವರೂ ಇದ್ದಾರೆ, ಬಲಪಂಥೀಯ ಸಿದ್ಧಾಂತವನ್ನೂ ಸರಿಯೆಂದು ಒಪ್ಪಿ ನಡೆಯುವವರೂ ಇದ್ದಾರೆ. ದ್ರಾವಿಡ ಚಳುವಳಿವನ್ನು ನಡೆಸುವವರೂ ಇದ್ದಾರೆ, ಫುಲೆ-ಅಂಬೇಡ್ಕರ್ ವಾದಿ ಚಳುವಳಿಯನ್ನು ಮಾಡುವವರೂ ಇದ್ದಾರೆ, ಇತ್ಯಾದಿ. ಕೆಲವರಿಗೆ ಮಾರ್ಕ್ಸ್-ಅಂಬೇಡ್ಕರ್ ಜೊತೆಯಲ್ಲಿ ಇದ್ದರೆ ಸರಿ ಅನ್ನಿಸುತ್ತೆ, ಮತ್ತೆ ಕೆಲವರಿಗೆ ಪೆರಿಯಾರ್ – ಅಂಬೇಡ್ಕರ್ ಜೊತೆಯಲ್ಲಿ ಇದ್ದರೆ ಸರಿ ಅನ್ನಿಸುತ್ತೆ, ಹಲವರಿಗೆ ಅಂಬೇಡ್ಕರ್-ಗಾಂಧಿ ಜೊತೆಯಿರಲೇಬೇಕು, ಅದೇ ಸರಿ ಅನ್ನಿಸುತ್ತೆ. ಇನ್ನೂ ಕೆಲವರಿಗೆ ಫುಲೆ-ಅಂಬೇಡ್ಕರ್ ಚಳುವಳಿ ಮಾತ್ರ ಸರಿ ಅನ್ನಿಸುತ್ತೆ, ಬಹುತೇಕರಿಗೆ ಅಂಬೇಡ್ಕರ್-ಕಾನ್ಷಿರಾಮ್ ಅವರೇ ಸರಿ.

ಹೀಗೆ ದಲಿತರು ಅನುಸರಿಸುವ ಆಯಾಯ ಸೈದ್ಧಾಂತಿಕ ಪ್ರೇರಣೆಗಳಲ್ಲಿ ವ್ಯಕ್ತಿಗಳನ್ನು ಸಮೀಕರಿಸಿಕೊಂಡು ಒಪ್ಪುವ ಅಥವಾ ಒಪ್ಪದಿರುವ ವಿಚಾರಗಳಲ್ಲಿ ದಲಿತರು ವಿಘಟನೆಯಾಗಿ ಹೋಗಿದ್ದೇವೆ.‌ ಉಳಿದಂತೆ ಮುಂದುವರೆದ ಈ ಸೈದ್ಧಾಂತಿಕತೆ ರೂಪಿಸಿರುವ ರಾಜಕೀಯ ಸಂಘಟನೆಗಳಲ್ಲಿ ಕೂಡ ಇಂತಹುದೇ ಸಮಸ್ಯೆ ಇರುವುದರಿಂದ ದಲಿತರು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಭವಿಷ್ಯ ಕಾಣಲು ಬಯಸುತ್ತಾರೆ. ಅಸಲಿಗೆ ಸಮಸ್ಯೆ ಇರುವುದೇ ಇಲ್ಲಿ, ಒಂದು ಪಕ್ಷದಲ್ಲಿ ಇರುವ ದಲಿತ ರಾಜಕಾರಣಿಯನ್ನು, ಬೇರೊಂದು ಪಕ್ಷದಲ್ಲಿ ಇರುವ ದಲಿತ ರಾಜಕಾರಣಿಯನ್ನು ಅಥವಾ ಪಕ್ಷ ಬಿಡುವ, ಬೇರೊಂದು ಪಕ್ಷ ಸೇರುವ ‘ದಲಿತ ರಾಜಕಾರಣಿಗಳನ್ನು’ ಅನುಮಾನಿಸಲಾಗುತ್ತದೆ, ಅಪರಾಧಿಗಳಂತೆ ಕಾಣಲಾಗುತ್ತದೆ, ತಪ್ಪೆಂದು ಬಿಂಬಿಸಲಾಗುತ್ತದೆ.

ಬೇರೆ ಸಮುದಾಯದವರಿಗೆ ಇದು ಸಮಸ್ಯೆ ಅಲ್ಲ, ಇದು ದಲಿತ ಸಮುದಾಯದ ಸಮಸ್ಯೆ ಮಾತ್ರ. (ಸಿದ್ದರಾಮಯ್ಯ ಅವರು ಪಕ್ಷ ಬದಲಿಸುವುದನ್ನು ಅವರ ಸಮುದಾಯ ಸರಿ ತಪ್ಪು ಎಂಬ ತಕ್ಕಡಿ ಹಿಡಿದು ತೂಗಿ ನೋಡುವುದನ್ನು ನಾವು ಕಾಣಲಾರೆವು) ಹಾಗಾಗಿ ಇದು ದಲಿತರ ರಾಜಕೀಯ ‘ಅಜ್ಞಾನ’ವಲ್ಲದೆ ಮತ್ತೇನು ಎಂಬ ಪ್ರಶ್ನೆ ಮೂಡುತ್ತದೆ. ಈ ಅಜ್ಞಾನದ ನೆರಳಿನಲ್ಲಿಯೇ ನಾವು ‘ಅವರು’ ಅದನ್ನು ಮಾಡಬೇಕಿತ್ತು, ಇದನ್ನು ಮಾಡಬೇಕಿತ್ತು, ಅವರು ಇದನ್ನು ಮಾಡಬಾರದಿತ್ತು, ಅದನ್ನು ಮಾಡಬೇಕಿತ್ತು, ಇದನ್ನು ಅವರು ಮಾತನಾಡಬೇಕಿತ್ತು, ಮಾತನಾಡಬಾರಿತ್ತು, ಅವರು ಯಾಕೆ ಹಾಗೆ ಮಾಡಿದರು? ಅವರು ಯಾಕೆ ಹೀಗೆ ಮಾಡಲಿಲ್ಲ ಎಂಬ ನಮ್ಮ ಮೂಗಿನ ನೇರದ ‘ಹುಸಿತತ್ವ’ವೊಂದರಲ್ಲಿ ವಿಮರ್ಶೆಯ ಬಾಯಾಗಿಬಿಡುತ್ತೇವೆ.‌ ಸಾಂಸ್ಕೃತಿಕ-ಸಾಹಿತ್ಯಕ ಲೋಕದ ವಿಚಾರಗಳಲ್ಲಿಯೂ ಇದು ಹಾಗೆಯೇ ಮುಂದುವರೆಯುತ್ತದೆ ಕೂಡ. ದೇಮ ಅವರು ಬದುಕಿದ ಹಾಗೆಯೇ ಸಿದ್ದಲಿಂಗಯ್ಯ ಅವರು ಬದುಕಬೇಕು/ ಬದುಕಬೇಕಿತ್ತು ಅಂದುಕೊಳ್ಳುತ್ತೇವೆ. ಡಾ. ಸಿದ್ದಲಿಂಗಯ್ಯ ಅವರ ಹಾಗೆಯೇ ಎಲ್.ಹನುಮಂತಯ್ಯ ಕೂಡ ನಡೆದುಕೊಳ್ಳಬೇಕು ಅಂತಲೇ ನಿರೀಕ್ಷೆ ಕೂಡ ಮಾಡುತ್ತೇವೆ.‌ ಇವೆಲ್ಲಾ ನಮ್ಮ ಅರಿವಿನ ಆಳದ ‘ಮಿಥ್ಯೆ’ಗಳು ಅಷ್ಟೇ. ನಾವು ಇನ್ನೂ ವಿಕಾಸ ಹೊಂದಿಲ್ಲ ಎಂಬುದನ್ನು ನಾಳಿನ ಪೀಳಿಗೆಗೆ ದಾಖಲಿಸಿಡುವ ‘ಗುರುತುಗಳು” ಅಷ್ಟೇ..

ನಾವು ಎಷ್ಟರಮಟ್ಟಿಗೆ ಒಳಗೊಂದು ಹೊರಗೊಂದು ಆಗಿದ್ದೇವೆಂದರೆ ದಲಿತ ಚಿಂತಕರಲ್ಲಿ, ಬರಹಗಾರರಲ್ಲಿ ‘ಅವರು’ ಬರುತ್ತಾರೆ ಎಂಬ ಕಾರಣಕ್ಕೆ ಒಂದಷ್ಟು ಜನ ಹೋಗುವುದಿಲ್ಲ. ‘ಇವರು’ ಇರುತ್ತಾರೆ ಅಂದರೆ ಇನ್ಯಾರೋ ಒಂದಷ್ಟು ಜನ ಹಾಜರಾಗುವುದಿಲ್ಲ. ಹೀಗೆ ನಮಗೆ ನಾವೇ ಅವರಿವರಾಗಿ ಬೇಲಿ‌ ಹಾಕಿಕೊಂಡಿದ್ದೇವೆ. ಅಕಸ್ಮಾತ್ ಎದುರಾದರೆ ತಬ್ಬಿಕೊಂಡು, ಕೈಕುಲುಕಿ ಮಾತನಾಡುವ ನಾವುಗಳು ತೋರಿಕೆಗಾಗಿಯೇ ನಕ್ಕು, ನಟಿಸಿ, ನಂಬಿಸಿ ಬರುತ್ತೇವೆ.‌ ನಂತರ ಎಂದಿನಂತೆ ಸೈದ್ದಾಂತಿಕ ಚರ್ಚೆಗಳು ನಡೆದಾಗ ಮತ್ತದೇ ರೂಪ, ಅದೇ ಮಾತು!

ನಾಲ್ಕು ಸಂದರ್ಭಗಳನ್ನು ನಾನು ನೆನಪಿಗೆ ತರಲು ಬಯಸುತ್ತೇನೆ,‌ ಮೊದಲನೇಯದು, 2000 ನೇ ಇಸವಿ ಕಾಲಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ನ ಗೋಡೆಗಳಲ್ಲಿ BVS ಬರೆಸಿದ್ದ ನೀಲಿ ಬಣ್ಣ ಗೋಡೆ ಬರಹಗಳನ್ನು ಕಂಡು ಭಾಷಣವೊಂದರಲ್ಲಿ “ಈ ಹುಡುಗ್ರು, ನಾಲ್ಕಾಣೆ ನೀಲಿ, ಎಂಟಾಣೆ ನೀಲಿಲಿ ಗೋಡೆ ಮೇಲೆ ಬರೆದುಬಿಟ್ಟರೆ ಎಲ್ಲಾ ಬದಲಾವಣೆ ಆಗಿಬಿಡುವುದಿಲ್ಲ” ಎಂದು ಲೇವಡಿ ಮಾಡಿದ್ದ ಹಳೆ ಮೈಸೂರಿನ ದಲಿತ ರಾಜಕಾರಣಿಯೊಬ್ಬರು ಅದೇ ‘ನೀಲಿ’ಯಿಂದ ಆದ ಬದಲಾವಣೆಯ ಪರಿಣಾಮಕ್ಕೆ ಬೆಲೆತೆತ್ತುತ್ತಿದ್ದಾರೆ.‌

ಎರಡನೇಯದು, ಸಿದ್ಧಲಿಂಗಯ್ಯ ಅವರನ್ನು ಬಹುಜನ ಚಳುವಳಿಗಾರರು ಟೀಕಿಸುತ್ತಿದ್ದುದು ನಿಜ. ದಲಿತ ಸಾಹಿತ್ಯ ಪರಂಪರೆ ಹತಾಶೆಯ ಸಾಹಿತ್ಯಕ್ಕೆ ಸೀಮಿತವಾಗಿದೆ ಎಂಬುದು ಅವರ ಒಂದು ಸಾಲಿನ ವಿಮರ್ಶೆಯಾಗಿತ್ತು,‌ ದೇಮಾ ಅವರ ಬಗ್ಗೆ ಕೂಡ ಇದೇ ಕಾರಣಕ್ಕೆ ಇದೇ ನಿಲುವೂ ಇತ್ತು.‌ ಆದರೆ ಅದೇ ಸಿದ್ಧಲಿಂಗಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಇದನ್ನು ಮನಸಾರೆ ಒಪ್ಪಿಕೊಂಡಿದ್ದರು. ಹೌದು ನನ್ನನ್ನು ಬಿವಿಎಸ್ ವಿದ್ಯಾರ್ಥಿಗಳು ಕಂಡಂತೆ ನಾವು ನಮ್ಮ ಸಾಹಿತ್ಯದಲ್ಲಿ ಆಶಾವಾದಕ್ಕಿಂತಲೂ ಹತಾಶೆಯನ್ನು ದಾಖಲಿಸಿದ್ದೇವೆ ಎಂದಿದ್ದರು.

ಮೂರನೇಯದಾಗಿ, ದೇಮಾ ಅವರನ್ನು ನಾಡಿನ ಚಿಂತನಾವಲಯ ಸಾಕ್ಷಿಪ್ರಜ್ಞೆ ಎಂದೇ ಭಾವಿಸುತ್ತದೆ.‌ BVS ಬಗ್ಗೆ ಅವರು ಹೊಂದಿದ್ದ ನಿಲುವುಗಳನ್ನು ಸ್ವತಃ ಅವರೆ ಬದಲಾಯಿಸಿಕೊಂಡಿದ್ದಾರೆ. ಬಿವಿಎಸ್ ಮೈಸೂರಿನ ಮುಖಂಡರು ಜೊತೆಯಲ್ಲಿ ಮಾತನಾಡುತ್ತಾ ಬಿವಿಎಸ್ ಸಾಧನೆಗಳನ್ನು ಮನಸಾರೆ ಮಾತನಾಡಿದ್ದಾರೆ‌. ಬಿವಿಎಸ್ ಕಾರ್ಯಕ್ರಮಗಳನ್ನು ಬಂದು ಉದ್ಘಾಟಿಸಿಕೊಟ್ಟಿದ್ದಾರೆ.‌ ಎನ್.ಮಹೇಶ್ ಇವತ್ತು ಏನಾದರೂ ಆಗಿರಲಿ, ಆತನ ಪರಿಶ್ರಮದಿಂದ ಸಮಾಜದಲ್ಲಿ ಉಂಟಾದ ಚಾರಿತ್ರಿಕ ಬದಲಾವಣೆಗಳಾಗಿವೆ ಎಂದು ದೇಮಾ ಅವರು ಸಂತೋಷದಿಂದ ಮಾತನಾಡಿದ್ದಾರೆ. ಫುಲೆ, ಸಾವಿತ್ರಿಬಾಯಿ, ಪೆರಿಯಾರ್, ನಾರಾಯಣಗುರು, ನಾಲ್ವಡಿ, ಶಾಹು, ಟಿಪ್ಪು, ಅಂಬೇಡ್ಕರ್, ಕಾನ್ಷಿರಾಮ್ ಮುಂತಾದವರು ಈ ನಾಡಿನ ಮೂಲೆ ಮೂಲೆಗೆ ತಲುಪಲು ಸಾಧ್ಯವಾಗಿದ್ದು ದೊಡ್ಡ ಕೊಡುಗೆ ಎಂದಿದ್ದಾರೆ.

ನಾಲ್ಕನೇಯದಾಗಿ ಅಕ್ಕಾ ಗೌರಿ‌ಲಂಕೇಶ್ ಬಿವಿಎಸ್ ಬಗ್ಗೆ ತೀವ್ರವಾದ ಭಿನ್ನಾಭಿಪ್ರಾಯಗಳನ್ನು ಪ್ರಕಟಿಸುತ್ತಿದ್ದವರು.‌ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಾರಿ ಚರ್ಚೆಗಳು ನಡೆದಿವೆ. ಆದರೆ ಅವರು ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಸೆಮನಾರ್ ನಲ್ಲಿ ಭಾಗವಹಿಸಿ ಬಿವಿಎಸ್ ನ, ವಿಚಾರ, ಶಿಸ್ತು, ಬದ್ಧತೆಯನ್ನು ಕಣ್ಣಾರೆ ಕಂಡು “ಈ ನಾಡಿನಲ್ಲಿ ನಿಜವಾದ ಬದಲಾವಣೆ ಏನಾದರೂ ಸಾಧ್ಯ ಅನ್ನೋದಾದರೆ ಅದು ಬಿವಿಎಸ್ ನಿಂದ ಮಾತ್ರ ಅಂತ ನನಗೆ ನಂಬಿಕೆ ಹುಟ್ಟಿದೆ ಎಂದಿದ್ದರು, ಮಾತ್ರವಲ್ಲ, ನಂತರದ ವಾರ ಮೈಸೂರು ವಿಭಾಗದ ಅದೇ ಸೆಮಿನಾರ್ ಗೂ ಕೂಡ ಅವರೇ ಅತಿಥಿಯಾಗಿ ಬಂದು ಬಿವಿಎಸ್ ಅನ್ನು ಮೆಚ್ಚಿ ಹೊಗಳಿ ಭರವಸೆ ಹೆಚ್ಚಿಸಿದ್ದರು. ಅಣ್ಣ ದ್ವಾರಕನಾಥ್ ಅವರು, ಬಹಳಷ್ಟು ಮಂದಿ ಪ್ರಗತಿಪರರು ಈ ಮಾತನ್ನು ಬಹಳ‌ ಸಲ ಹೇಳಿದ್ದಾರೆ.

ಸದ್ಯ ನಾವು ಗುಂಪು ಗುಂಪುಗಳಾಗಿ ನಮ್ಮದೇ ಆದ ಚಿಂತನಾಕ್ರಮಗಳನ್ನು ಅನುಸರಿಸಿಕೊಂಡು ವಿಮರ್ಶೆ, ಟೀಕೆಗಳಲ್ಲಿ ನಿರತರಾಗಿದ್ದೇವೆ.‌ ಇಲ್ಲಿ ಎಲ್ಲರೂ ನಾವು ‘ಅಂಬೇಡ್ಕರ್ ವಾದಿಗಳು’ ಎಂದು ಘೋಷಿಸಿಕೊಳ್ಳುತ್ತಲೇ ಇತರರ ನೆರಳನ್ನೂ ಟೀಕೆಗೆ ಗುರಿಪಡಿಸಿ ಬದುಕುವವರಾಗಿ ಉಳಿದಿದ್ದೇವೆ.‌ ನಾವು ಯಾವಾಗ ಎಲ್ಲವನ್ನೂ ತಾಳ್ಮೆ, ಪ್ರೀತಿ, ನಂಬುಗೆಯ ಕಣ್ಣಿನಿಂದ ಕಾಣುವಂತಾಗುತ್ತೇವೆಯೋ ಅಲ್ಲಿಗೆ ನಮ್ಮವರ ಬಗ್ಗೆ ನಮ್ಮದೇ ತಕರಾರುಗಳು ಸಹ ಇಲ್ಲವಾಗುತ್ತವೆ. ಅಷ್ಟರಮಟ್ಟಿಗೆ ನಾವು ನಮ್ಮ ಅರಿವನ್ನು ವಿಸ್ತಾರಗೊಳಿಸಿಕೊಳ್ಳಬೇಕಿದೆ ಅನ್ನಿಸುತ್ತೆ.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ