ರೋಹಿತ್ ಚಕ್ರತೀರ್ಥ ವೇಣೂರಿಗೆ ಬಂದರೆ ದಲಿತ ಸಂಘಟನೆಯಿಂದ 'ಗೋ ಬ್ಯಾಕ್' ಹೋರಾಟ - Mahanayaka

ರೋಹಿತ್ ಚಕ್ರತೀರ್ಥ ವೇಣೂರಿಗೆ ಬಂದರೆ ದಲಿತ ಸಂಘಟನೆಯಿಂದ ‘ಗೋ ಬ್ಯಾಕ್’ ಹೋರಾಟ

belthangady
24/02/2023

ಬೆಳ್ತಂಗಡಿ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಹಿತ ದಾರ್ಶನಿಕರಿಗೆ ಅವಮಾನ ಮಾಡಿದ ವಿವಾದಿತ ವ್ಯಕ್ತಿ ರೋಹಿತ್ ಚಕ್ರತೀರ್ಥ ಅವರನ್ನು ಆಹ್ವಾನಿಸಿರುವುದು ಖಂಡನೀಯ.  ಒಂದು ವೇಳೆ ನಮ್ಮ ವಿರೋಧವನ್ನು ಲೆಕ್ಕಿಸದೆ ಅವರು ಆಗಮಿಸಿದರೆ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ವತಿಯಿಂದ ಕಪ್ಪುಪಟ್ಟಿ ತೋರಿಸಿ‌ “ಗೋ ಬ್ಯಾಕ್” ಅಭಿಯಾನ ಕೈ ಗೊಳ್ಳಲಾಗುವುದು ಎಂದು ಡಿಎಸ್‌ಎಸ್ ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ನೇಮಿರಾಜ್ ಕಿಲ್ಲೂರು ಮತ್ತು ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್. ಹೇಳಿದರು.

ಬೆಳ್ತಂಗಡಿ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ವೇಣೂರಿನ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ರೋಹಿತ್ ಚಕ್ರತೀರ್ಥರನ್ನು ಆಹ್ವಾನಿಸಿರುವುದು ಸರಿಯಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಹತ್ತನೇ ತರಗತಿ ಪಠ್ಯದಿಂದ ತೆಗೆದುಹಾಕಿದ ಪುಸ್ತಕ ಪರಿಷ್ಕರಣೆ ಸಮಿತಿಯ ಮುಖ್ಯಸ್ಥ ರೋಹಿತ್ ಚಕ್ರತೀರ್ಥರನ್ನು “ಶಿಕ್ಷಣ ಮತ್ತು ಧರ್ಮ” ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಲು ಬ್ರಹ್ಮಕಲಶೋತ್ಸವ ಸಮಿತಿಯವರು ಕರೆದಿರುವುದು ಸರಿಯಲ್ಲ. ಇದಕ್ಕೆ ನಮ್ಮ ಸಂಘಟನೆಯ ವಿರೋಧವಿದೆ ಎಂದರು.

ಸಂವಿಧಾನ ಶಿಲ್ಪ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ರಾಷ್ಟ್ರ ಕವಿ ಕುವೆಂಪು, ರಾಣಿ ಅಬ್ಬಕ್ಕ ಮತ್ತು ಕಯ್ಯಾರ ಕಿಂಞಣ್ಣ ರೈ ಮುಂತಾದ ದಾರ್ಶನಿಕರ ವ್ಯಕ್ತಿತ್ವಕ್ಕೆ ಕುಂದು ತರುವ ರೀತಿಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ನಡೆಸಿ ಕೊನೆಗೆ ಸರಕಾರದ ಆದೇಶದಂತೆ ಪಠ್ಯ ಮಸ್ತಕ ಪರಿಷ್ಕರಣಾ ಸಮಿತಿಯಿಂದ ಪದಚ್ಯುತಗೊಂಡು, ವಿಕೃತ ವಿಚಾರಧಾರೆಗಳನ್ನು ಹೊಂದಿರುವ ರೋಹಿತ್ ಚಕ್ರತೀರ್ಥರನ್ನು ಬ್ರಹ್ಮ ಕಲಶೋತ್ಸವದ ಸಭಾ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ಒಕ್ಕೊರಲ ಮನವಿಯನ್ನು ಬ್ರಹ್ಮ ಕಲಶೋತ್ಸವ ಸಮಿತಿಯ ವರಲ್ಲಿ ಮನವಿ ಮಾಡುತ್ತಿದ್ದೇವೆ ಎಂದರು.

ಈ ಮನವಿಯ ಬಳಿಕವೂ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಮುಂದಾದರೆ ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಬೃಹತ್‌ ಪ್ರತಿಭಟನೆ ಮೂಲಕ ಸಂಘ ಪರಿವಾರದ ನಿಜಬಣ್ಣವನ್ನು ಬಯಲು ಮಾಡಲಿದ್ದೇವೆ ಎಂದೂ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಿಎಸ್ ‌ಎಸ್ ಹೋಬಳಿ ಸಂಚಾಲಕ ವಿಜಯಕುಮಾರ್ ಉಜಿರೆ, ಸಂಘಟನಾ ಸಂಚಾಲಕರುಗಳಾದ ಜಯಾನಂದ ಕೊಯ್ಯೂರು ಮತ್ತು ನಾಗರಾಜ್ ಎಸ್ ಲಾಯಿಲ, ಕಾರ್ಯಕರ್ತ ಎಸ್ ಪ್ರಭಾಕರ್ ಶಾಂತಿಕೋಡಿ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ