ಉಳ್ಳಾಲ ಕಡಲ ಕಿನಾರೆಯಲ್ಲಿರುವ ತ್ಯಾಜ್ಯ ಘಟಕ ತೆರವುಗೊಳಿಸದಿದ್ದರೆ ನಗರ ಸಭೆ ಮುಂಭಾಗ ತಂದು ಸುರಿಯತ್ತೇವೆ: ಬಿ.ಕೆ.ಇಮ್ತಿಯಾಝ್

ಮಂಗಳೂರು: ಉಳ್ಳಾಲ ಕಡಲ ಕಿನಾರೆಯಲ್ಲಿರುವ ತ್ಯಾಜ್ಯ ಘಟಕವನ್ನು ತೆರವುಗೊಳಿಸಲು ಆಗ್ರಹಿಸಿ ಉಳ್ಳಾಲ ನಗರ ಸಭೆಯ ವಿರುದ್ದ ಡಿವೈಎಫ್ ಐ ಉಳ್ಳಾಲ ತಾಲೂಕು ಸಮಿತಿ ವತಿಯಿಂದ ಭಿತ್ತಿ ಪತ್ರ ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ, ಉಳ್ಳಾಲದ ಕಡಲ ಕಿನಾರೆಗೆ ದೇಶದ ಮೂಲೆಮೂಲೆಗಳಿಂದ ಪ್ರವಾಸಿಗರು ಬರುತ್ತಾರೆ, ಆದರೆ ಆ ಪ್ರವಾಸಿಗರು ಬೀಚ್ ಪ್ರವೇಶಿಸುವಾಗ ಮೂಗು ಮುಚ್ಚಿಕೊಂಡು ಬರಬೇಕಾದ ಪರಿಸ್ಥಿತಿಯನ್ನು ಇಲ್ಲಿನ ನಗರ ಸಭೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರ ಮುಖ್ಯ ರಸ್ತೆ ಬದಿಯಲ್ಲಿಯೇ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಸುಂದರವಾದ ಕಡಲ ಕಿನಾರೆಯಲ್ಲಿ ದುರ್ನಾತ ಬೀರುತ್ತಿದೆ. ಮೂಕ ಪ್ರಾಣಿಗಳು ಆ ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಗಳನ್ನು ಎಳೆದುಕೊಂಡು ಹೋಗಿ ಎಲ್ಲಂದರಲ್ಲಿ ಬಿಸಾಕುತ್ತಿವೆ. ತ್ಯಾಜ್ಯ ಘಟಕದ ಹತ್ತಿರ ಜನವಸತಿ ಪ್ರದೇಶ ಇದ್ದು ಮನೆಯಿಂದ ಹೆೊರಬರದ ಪರಿಸ್ಥಿತಿ ಉಂಟಾಗಿದೆ.ಹತ್ತಿರದಲ್ಲೇ ಸಾರ್ವಜನಿಕ ಶೌಚಾಲಯ ಇದ್ದರೂ ಘಟಕದ ದುರ್ನಾತದಿಂದ ಪ್ರವಾಸಿಗರು ಉಪಯೋಗ ಮಾಡಲಾಗದೆ ಪಾಳುಬಿದ್ದಿದೆ. ಸಾಂಕ್ರಾಮಿಕ ಹರಡುವ ಭೀತಿ ಎದುರಾಗಿದೆ.ಇಷ್ಟೆಲ್ಲಾ ಅವ್ಯವಸ್ಥೆಗಳ ಆಗರವಾಗಿರುವ ಈ ತ್ಯಾಜ್ಯ ಘಟಕವನ್ನು ಕೂಡಲೇ ಇಲ್ಲಿಂದ ವರ್ಗಾಯಿಸಬೇಕು, ಇಲ್ಲವಾದಲ್ಲಿ ಉಳ್ಳಾಲ ನಗರ ಸಭೆಯ ಮುಂಭಾಗ ತಂದು ಸುರಿಯತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರವಾಸಿಗರಿಗೆ ಡಿವೈಎಫ್ ಐ ಕಾರ್ಯಕರ್ತರು ಮಾಸ್ಕ್ ವಿತರಣೆ ಮಾಡಿದರು. ಡಿವೈಎಫ್ ಐ ಉಳ್ಳಾಲ ಕಾರ್ಯದರ್ಶಿ ರಿಝ್ವಾನ್ ಹರೇಕಳ, ಕೋಶಾಧಿಕಾರಿ ಅಶ್ಫಾಕ್ ಅಲೇಕಳ, ಮುಖಂಡರಾದ ಅಮೀರ್ ಉಳ್ಳಾಲಬೈಲ್, ನೌಫಲ್ ಉಳಿಯ, ಖಲೀಲ್ ಉಳ್ಳಾಲಬೈಲ್ ಹಾಗೂ ಪರಿಸರ ಹೋರಾಟಗಾರ ಮಂಗಳೂರ ರಿಯಾಝ್ ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD