ಐಐಟಿ ಬಾಂಬೆ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಸಹಪಾಠಿಯ ಬಂಧನ
ಬಾಂಬೆ: ಐಐಟಿ ಬಾಂಬೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ವಿದ್ಯಾರ್ಥಿ ದರ್ಶನ್ ಸೋಲಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸಹಪಾಠಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ದರ್ಶನ್ ಸೋಲಂಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ 19 ವರ್ಷದ ಅರ್ಮಾನ್ ಖತ್ರಿಯನ್ನು ಬಂಧಿಸಲಾಗಿದೆ.
ಐಐಟಿ ಬಾಂಬೆಯಲ್ಲಿ ದರ್ಶನ್ ಸೋಲಂಕಿ ಬ್ಯಾಚುಲರ್ ಇನ್ ಟೆಕ್ನಾಲಜಿ (ಕೆಮಿಕಲ್) ಕೋರ್ಸ್‌ನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದರು. ಇಲ್ಲಿ ದರ್ಶನ್ ಜಾತಿ ತಾರತಮ್ಯ ಎದುರಿಸಿದ್ದರು ಎಂದು ಅವರ ಕುಟುಂಬದವರು ಹೇಳಿಕೊಂಡಿದ್ದರು. ಆದಾಗ್ಯೂ, ಐಐಟಿ-ಬಾಂಬೆ ರಚಿಸಿದ ತನಿಖಾ ಸಮಿತಿಯು ಇದನ್ನು ನಿರಾಕರಿಸಿತ್ತು. ಸೋಲಂಕಿ ಅವರ ಸಾವಿಗೆ ಕಾರಣ ‘ಶೈಕ್ಷಣಿಕ ಹಿಂದುಳಿದಿರುವಿಕೆ’ ಎಂದು ಹೇಳಿಕೊಂಡಿತ್ತು.
ಸೋಲಂಕಿ ಅವರ ಕೊಠಡಿಯಲ್ಲಿ ಪತ್ತೆಯಾಗಿದ್ದ ಸೂಸೈಡ್ ನೋಟ್‌ನಲ್ಲಿ ‘ಅರ್ಮಾನ್ ಖತ್ರಿ’ ಹೆಸರು ಉಲ್ಲೇಖಗೊಂಡಿದೆ. ಈ ಟಿಪ್ಪಣಿಯನ್ನು ಸೋಲಂಕಿ ಅವರೇ ಬರೆದಿದ್ದಾರೆ ಎಂಬುದು ಕೈಬರಹದ ವಿಶ್ಲೇಷಣೆಯಿಂದ ದೃಢಪಟ್ಟ ನಂತರ ಖತ್ರಿಯನ್ನು ಬಂಧಿಸಲಾಗಿದೆ.
“ಕೋಮುವಾದಿ ಆಯಾಮದ ಕೆಲವು ಟೀಕೆಗಳನ್ನು ದರ್ಶನ್ ಮಾಡಿದ ನಂತರ ಖತ್ರಿ, ಆತನಿಗೆ ಕಟರ್‌ನಿಂದ ಬೆದರಿಕೆ ಹಾಕಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಅಂದಿನಿಂದ, ಸೋಲಂಕಿ ಭಯಭೀತರಾಗಿದ್ದರು, ಒಂದೆರಡು ಸಂದರ್ಭಗಳಲ್ಲಿ ಖತ್ರಿಯಲ್ಲಿ ಕ್ಷಮೆಯಾಚಿಸಿದ್ದನು ಮತ್ತು ಇಬ್ಬರೂ ತಬ್ಬಿಕೊಂಡಿದ್ದರು. ಆದಾಗ್ಯೂ, ಸೋಲಂಕಿ ಹೆದರುತ್ತಲೇ ಇದ್ದಂತೆ ತೋರುತ್ತಿದೆ” ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಖತ್ರಿ ಮತ್ತು ಸೋಲಂಕಿ ನಡುವಿನ ಜಗಳಕ್ಕೆ ಕಾರಣವೇನು ಎಂದು ಕೇಳಿದಾಗ ಖತ್ರಿ ಸಹಕರಿಸುತ್ತಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. “ನಾವು ಅವನನ್ನು ಬಂಧಿಸಿದ್ದೇವೆ. ಆದ್ದರಿಂದ ನಾವು ಆತನನ್ನು ಪ್ರಶ್ನಿಸಬಹುದು ಮತ್ತು ಘಟನೆಗಳ ನಿಖರವಾದ ವಿವರಗಳನ್ನು ಪಡೆಯಬಹುದು” ಎಂದು ಹೇಳಿದ್ದಾರೆ.ಪ್ರಕರಣದಲ್ಲಿ ಜಾತಿ ತಾರತಮ್ಯದ ಬಗ್ಗೆ ತನಿಖಾಧಿಕಾರಿಗಳಿಗೆ ಇದುವರೆಗೆ ಪುರಾವೆಗಳು ಸಿಕ್ಕಿಲ್ಲ .ಮೃತ ವಿದ್ಯಾರ್ಥಿಯ ತಂದೆ ರಮೇಶಭಾಯ್ ಸೋಲಂಕಿ ಪ್ರತಿಕ್ರಿಯಿಸಿ, “ಕುಟುಂಬವು ನ್ಯಾಯಯುತವಾದ ವಿಚಾರಣೆಯನ್ನು ಮಾತ್ರ ಬಯಸುತ್ತಿದೆ” ಎಂದು ಹೇಳಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ.
“ಅರ್ಮಾನ್ ನನ್ನನ್ನು ಕೊಂದಿದ್ದಾನೆ” ಎಂದು ಪಶ್ನೆ ಪತ್ರಿಕೆಯೊಂದರ ಹಿಂಭಾಗದಲ್ಲಿ ಬರೆದಿರುವುದನ್ನು ಪೊಲೀಸರು ನಮಗೆ ತೋರಿಸಿದ್ದಾರೆ ಎಂದು ಸೋಲಂಕಿ ತಂದೆ ತಿಳಿಸಿದ್ದಾರೆ. “ನಾವು ಕೈಬರಹವನ್ನು ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಈಗ ವಿಧಿವಿಜ್ಞಾನ ತಜ್ಞರು ಅದನ್ನು ದೃಢಪಡಿಸಿದ್ದಾರೆ” ಎಂದಿದ್ದಾರೆ.
“ಮುಂಬೈ ನಗರ ಪೊಲೀಸರು ನಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ; ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ನಿರಾಕರಿಸುತ್ತಿದ್ದಾರೆ” ಎಂದು ಕುಟುಂಬ ಇತ್ತೀಚೆಗೆ ಆರೋಪಿಸಿತ್ತು.
18 ವರ್ಷ ವಯಸ್ಸಿನ ದರ್ಶನ್ ಸೋಲಂಕಿಯವರು ಫೆಬ್ರವರಿ 12 ರಂದು ತಮ್ಮ ಹಾಸ್ಟೆಲ್ ಕಟ್ಟಡದ ಏಳನೇ ಮಹಡಿಯಿಂದ ಜಿಗಿದಿದ್ದರು. ಅಹಮದಾಬಾದ್ ಮೂಲದವರಾದ ದರ್ಶನ್, ಐಐಟಿ-ಬಾಂಬೆಯಲ್ಲಿ ಬ್ಯಾಚುಲರ್ಸ್ ಇನ್ ಟೆಕ್ನಾಲಜಿ (ಕೆಮಿಕಲ್) ಕೋರ್ಸ್‌ನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಬರೆದ ಪತ್ರದಲ್ಲಿ ದರ್ಶನ್ ಸೋಲಂಕಿಯವರ ತಂದೆ ರಮೇಶಭಾಯ್ ಸೋಲಂಕಿ ತಮ್ಮ ಅಳಲು ತೋಡಿಕೊಂಡಿದ್ದರು. “ನಮ್ಮ ಕುಟುಂಬವು ಪೊಲೀಸರು ಮತ್ತು ವಿಶೇಷ ತನಿಖಾ ತಂಡದ ಸದಸ್ಯರ ವರ್ತನೆಯಿಂದ ಸಂಪೂರ್ಣವಾಗಿ ಆಘಾತಕ್ಕೊಳಗಾಗಿದೆ ಮತ್ತು ನಿರಾಶೆಗೊಂಡಿದೆ. ಸುಮಾರು ಎರಡು ವಾರಗಳಿಂದ ಎಫ್‌ಐಆರ್ ದಾಖಲಿಸಲು ನಿರಾಕರಿಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದರು.
“ತಾವು ಹೇಳಿದಂತೆ ದೂರಿನಲ್ಲಿ ಬರೆದುಕೊಡಬೇಕೆಂದು ಪೊಲೀಸರು ಮತ್ತು ವಿಶೇಷ ತನಿಖಾ ತಂಡ ಒತ್ತಾಯಿಸುತ್ತಿದೆ” ಎಂದು ರಮೇಶ್‌ಭಾಯ್ ಆರೋಪಿಸಿದ್ದರು.
“ಪೊಲೀಸರ ವರ್ತನೆಯು ನಮ್ಮಲ್ಲಿ ಯಾವುದೇ ವಿಶ್ವಾಸವನ್ನು ತರುತ್ತಿಲ್ಲ. ದರ್ಶನ್ ಎದುರಿಸುತ್ತಿದ್ದ ಜಾತಿ ತಾರತಮ್ಯದ ದೃಷ್ಟಿಕೋನದಲ್ಲಿ ತನಿಖೆಯನ್ನು ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಪ್ರಕರಣವನ್ನು ಬೇರೆಡೆಗೆ ತಿರುಗಿಸಲು ಎಸ್ ಐಟಿ ಪ್ರಯತ್ನಿಸುತ್ತಿದೆ ಎಂದು ನಾವು ಆತಂಕಗೊಂಡಿದ್ದೇವೆ” ಎಂದಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw