ವಿವಾದಕ್ಕೆ ಕಾರಣವಾಯ್ತು ಖರಗ್‌ಪುರ ಐಐಟಿಯ ಸುತ್ತೋಲೆ: ಬಿಳಿ ಸೀರೆ, ಬಿಳಿ ಕುರ್ತಾ ಧರಿಸಲು ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿಗಳು..!
![](https://www.mahanayaka.in/wp-content/uploads/2023/11/7507e1771a20384cc94b0c78be91937f743cb0c0a7ca703f26d6fa5ad2f991b8.0.jpg)
ಪಶ್ಚಿಮ ಬಂಗಾಳದ ಖರಗ್‌ಪುರ ಐಐಟಿಯು 2023ರ ಘಟಿಕೋತ್ಸವಕ್ಕೆ ವಿದ್ಯಾರ್ಥಿನಿಯರು ಬಿಳಿ ಕಾಟನ್ ಸೀರೆ ಹಾಗೂ ವಿದ್ಯಾರ್ಥಿಗಳು ಬಿಳಿ ಕುರ್ತಾ ಧರಿಸಿ ಬರಬೇಕು ಎಂದು ಐಐಟಿ ಖರಗ್‌ಪುರ ಅಧಿಸೂಚನೆ ಹೊರಡಿಸಿದೆ. ಈ ಸುತ್ತೋಲೆಯು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಶಿಕ್ಷಣ ಸಂಸ್ಥೆಯು ನಾವು ಧರಿಸುವ ಬಟ್ಟೆಯ ಆಯ್ಕೆಯನ್ನು ಕಸಿದುಕೊಳ್ಳುತ್ತಿದೆ ಎಂದು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಕೆಲವು ಪ್ರೊಫೆಸರ್‌ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳು ಪೂರ್ತಿ ತೋಳಿನ, ಮೊಳಕಾಲಿನವರೆಗೆ ಬರುವ, ಕಾಟನ್ ಕುರ್ತಾವನ್ನು ಘಟಿಕೋತ್ಸವ ಸಮಾರಂಭಕ್ಕೆ ಧರಿಸಿ ಬರಬೇಕು. ಕಾಟನ್ ಪೈಜಾಮಾ ಕೂಡ ಧರಿಸಿ ಬರಬೇಕು. ಇನ್ನು ವಿದ್ಯಾರ್ಥಿನಿಯರು ಬಂಗಾರದ ಬಣ್ಣದ ಬಾರ್ಡರ್ ಇರುವ ಕಾಟನ್ ಸೀರೆ ಧರಿಸಿ ಆಗಮಿಸಬೇಕು ಎಂದು ಈ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಈ ವಿಚಾರ ವಿವಾದಕ್ಕೆ ಗ್ರಾಸವಾಗುತ್ತಿದ್ದಂತೆ ಆಡಳಿತ ಮಂಡಳಿ ಸ್ಪಷ್ಟನೆ ನೀಡುವ ಮೂಲಕ ಈ ವಿವಾದಕ್ಕೆ ತೆರೆ ಎಳೆದಿದೆ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸಿ ಬರಬೇಕಾಗಿರುವುದು ಕಡ್ಡಾಯವಲ್ಲ. ಘಟಿಕೋತ್ಸವವು ವಿಶೇಷ ಕಾರ್ಯಕ್ರಮವಾದ ಕಾರಣ ಹಾಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ವಿದ್ಯಾರ್ಥಿಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಅವರಿಗೆ ಇಷ್ಟವಾದ ದಿರಸುಗಳನ್ನು ಧರಿಸಿ ಬರಬಹುದು ಎಂದು ಕೊನೆಗೆ ಸ್ಪಷ್ಟನೆ ನೀಡಿದೆ.