ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಅಪರಾಧಿಗೆ ಜೈಲು ಶಿಕ್ಷೆ, ದಂಡ - Mahanayaka
12:21 PM Wednesday 5 - February 2025

ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಅಪರಾಧಿಗೆ ಜೈಲು ಶಿಕ್ಷೆ, ದಂಡ

jaill
18/11/2024

ಪುತ್ತೂರು: ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿದ ಪ್ರಕರಣದ ಅಪರಾಧಿಗೆ ಪುತ್ತೂರು ಹೆಚ್ಚುವರಿ ಹಿರಿಯ ಪ್ರಧಾನ ವ್ಯವಹಾರಿಕ ನ್ಯಾಯಾಲಯವು 2 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.

2022ರ ಸೆ.14ರಂದು ದಕ್ಷಿಣ ಕನ್ನೆ ಜಿಲ್ಲೆಯ ಪುತ್ತೂರು ತಾಲೂಕಿನ ತಿಂಗಳಾಡಿಯ ಬಜಾರ್ ಸ್ಟೋರ್ ಸ್ವೀಟ್ ಸ್ಟಾಲ್ ಎಂಬ ಅಂಗಡಿಗೆ ಸಂತ್ರಸ್ತ ಮಹಿಳೆ ತನ್ನ 7 ವರ್ಷದ ಮಗನೊಂದಿಗೆ ಬಂದಿದ್ದರು. ತಿಂಡಿ ಖರೀದಿಸಿ ಅಂಗಡಿಯವರಿಗೆ ಹಣ ನೀಡುತ್ತಿದ್ದ ವೇಳೆ ಅಪರಾಧಿ ಬದ್ರುದ್ದೀನ್ ಯಾನೆ ಬದ್ರು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದ. ಈ ಬಗ್ಗೆ ಮಹಿಳೆ ದೂರು ನೀಡಿದ್ದು, ಈ ದೂರಿನನ್ವಯ ಪುತ್ತೂರು ಗ್ರಾಮಾಂತರ ಪೊಲೀಸರು ಬದ್ರು ವಿರುದ್ಧ ಕಲಂ 354 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣ ಸಂಬಂಧ ಸಂಪ್ಯ ಪೊಲೀಸ್ ಠಾಣೆಯ ಆಗಿನ ಎಸ್.ಐ.ರಾಮಕೃಷ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.  ಈ ಪ್ರಕರಣದ ವಿಚಾರಣೆಯನ್ನು ಪುತ್ತೂರು ಹೆಚ್ಚುವರಿ ಹಿರಿಯ ಪ್ರಧಾನ ವ್ಯವಹಾರಿಕ ನ್ಯಾಯಾಧೀಶರಾದ ದೇವರಾಜ್ ಅರಸ್  ವೈ.ಎಚ್. ಅವರ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಆರೋಪಿ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ 2 ವರ್ಷಗಳ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಲಾಗಿದೆ. ದಂಡ ವಿಧಿಸಲು ವಿಫಲವಾದಲ್ಲಿ 6 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು. ದಂಡದ ಮೊತ್ತದಲ್ಲಿ ನೊಂದ ಮಹಿಳೆಗೆ 5 ಸಾವಿರ ರೂ.ಗಳನ್ನು ಪರಿಹಾರವಾಗಿ ನೀಡುವಂತೆ ಆದೇಶಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ