ವಿಜ್ಞಾನದಲ್ಲಿ ಶಾಸ್ತ್ರಗಳು ಅಗತ್ಯವೇ ? | ದಮ್ಮಪ್ರಿಯ ಬೆಂಗಳೂರು
“ಶಾಸ್ತ್ರ ಪುರಾಣವ ಸಡಿಲಿಸಿ
ಮನುವಾದದ ಹುಟ್ಟನ್ನೇ ಅಡಗಿಸಿ”
ಹೀಗೊಂದು ಬಹುಜನ ಚಳುವಳಿಯ ಸ್ಯಾಂಗ್ ಕೇಳಿದ್ದೆ. ಇದರ ಹಿಂದೆ ಒಂದು ಇತಿಹಾಸವೇ ಅಡಗಿದೆ ಎನ್ನುವುದನ್ನು ಅರಿಯಬೇಕಿದೆ. ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದಂತೆ, ‘ದೈಹಿಕ ಗುಲಾಮಗಿರಿ ಕೆಟ್ಟದ್ದು ನಿಜ, ಆದರೆ ಮಾನಸಿಕ ಗುಲಾಮಗಿರಿ ಅದಕ್ಕಿಂತಲೂ ಹೀನಾಯವಾದದ್ದು; ಅದರ ಸುಳಿಗೆ ಸಿಕ್ಕವರ ಬಾಳು ಹಂದಿ ನಾಯಿಗಳಿಗೂ ಕೀಳು’ ಎಂದಿದ್ದರು. ಇಂತಹ ಮಾನಸಿಕ ಗುಲಾಮಗಿರಿಯನ್ನು ಭಾರತೀಯ ಬಹುಸಂಖ್ಯಾತರು ಇವತ್ತುಗೂ ಅನುಭವಿಸುತ್ತಿದ್ದಾರೆ.
ನಾನು ಹಾಗೇ ಸುಮ್ಮನೆ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಗೆ ಭೇಟಿ ನೀಡಿದ್ದೆ. ಅಲ್ಲಿ ಪ್ರಾಧ್ಯಾಪಕರಿಬ್ಬರು ಬಹಳ ಗಂಭೀರವಾದ ಚರ್ಚೆಯಲ್ಲಿ ಮುಳುಗಿದ್ದರು. ಆ ಪ್ರಾಧ್ಯಾಪಕರ ಮುಖ್ಯ ಉದ್ದೇಶವೇ ಬೋಧಕರಾದ ತಾವು ವಿದ್ಯಾರ್ಥಿಗಳನ್ನು ಯಾವ ಕಡೆಗೆ ಕೊಂಡೊಯ್ಯುತ್ತಿದ್ದೇವೆ ಎನ್ನುವುದಾಗಿತ್ತು. ಅದರಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಬೇಕಾಗಿರುವುದು ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯ ಜೊತೆಗೆ, ಕಲಿಕೆಯ ವಿಷಯದಲ್ಲಿ ‘ವಿಜ್ಞಾನದ ಹೊಸ ಆವಿಸ್ಕಾರಗಳು ಬೇಕೇ ಅಥವಾ ಶಾಸ್ರ್ತ ಎನ್ನುವ ಅವೈಜ್ಞಾನಿಕ ವಿಚಾರಗಳನ್ನು ಬೋದಿಸಬೇಕೇ?’ ಎನ್ನುವುದಾಗಿತ್ತು.
‘ನಮ್ಮ ವಿದ್ಯಾರ್ಥಿಗಳಲ್ಲಿ ಮೊದಲು ಮಾನಸಿಕ ಸದೃಢತೆಯನ್ನು, ಹೊಸ ಹೊಸ ಆಲೋಚನೆಗಳನ್ನು ಹುಟ್ಟಿಹಾಕುವ ವೈಜ್ಞಾನಿಕ ಚಿಂತನೆಗಳನ್ನು ಹುಟ್ಟಿಹಾಕುವಲ್ಲಿ ಬೋಧಕರು ಪ್ರಮುಖ ಪಾತ್ರ ನಿರ್ವಹಿಸಬೇಕಾದ ಅನಿವಾರ್ಯತೆ ಬಂದೊದಗಿದೆ’ ಎನ್ನುವ ಗಂಭೀರ ವಿಚಾರ ಚರ್ಚೆಯಲ್ಲಿತ್ತು. ಬಾಬಾಸಾಹೇಬರು ಹೇಳಿದ ಹಾಗೆ ‘ಎಜುಕೇಟ್, ಅಜಿಟೇಟ್ ಮತ್ತು ಆರ್ಗನೈಜ್’ ಎನ್ನುವ ಕ್ರಿಯಾ ಪದಗಳು ಸದಾ ಕ್ರಿಯಾಶೀಲತೆಯಿಂದ ಕೂಡಿದ್ದವು. ಇವುಗಳನ್ನು ಕನ್ನಡಕ್ಕೆ ಭಾಷಾಂತರಿಸುವಾಗ ಹೆಸರು ಪದವನ್ನಾಗಿ ಬದಲಾಯಿಸಿ ಆ ಮೂರೂ ಪದಗಳನ್ನು ತಟಸ್ಥವನ್ನಾಗಿಸಲಾಯಿತು ಎನ್ನಬಹುದು. ‘ಎಜುಕೇಷನ್, ಅಜಿಟೇಷನ್, ಮತ್ತು ಆರ್ಗನೈಜೇಷನ್’ ಎಂದು ಹೇಳಿ ಜನರನ್ನು ಅವುಗಳಿಗೆ ಅಂಟಿಕೊಂಡು ಕೂರುವಂತೆ ಮಾಡಲಾಯಿತು. ಇದು ಒಂದು ರೀತಿಯ ಭಾಷಾ ರಾಜಕಾರಣ ಅಥವಾ ಗೌರ್ಮೆಂಟಾಲಿಟಿ ಎಂದರು ತಪ್ಪಾಗಲಾರದೆನೋ !
ಏನಿದು ಗೌರ್ಮೆಂಟಾಲಿಟಿ? ಎನ್ನುವ ಮಾತು ಎಂದು ಒಮ್ಮೆ ಯೋಚಿಸಿದಾಗ , ಸರ್ಕಾರ ರೂಪಿಸುವ ನೀತಿ ನಿಯಮಗಳು, ರೂಪುರೇಷೆಗಳೇ ಸತ್ಯವಾದವುಗಳು ಎಂದು ನಂಬಿ , ಅದರ ಹಿಂದಿರುವ ಭಾಷೆಯ ರಾಜಕಾರಣ , ಅಥವಾ ಪ್ರಾದೇಶಿಕ ರಾಜಕಾರಣ, ಅದರಲ್ಲಿನ ಅಳಿವು ಮತ್ತು ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ವೈಜ್ಞಾನಿಕವಾಗಿ ಯೋಚಿಸದೆ ಮುಂದುವರೆಯುವುದೇ ಎನ್ನುವುದಾಗಿದೆ. ಈ ನಿಟ್ಟಿನಲ್ಲಿ ಈ ದೇಶದ ಇತಿಹಾಸದಲ್ಲಿ ಹಲವಾರು ಸತ್ಯಘಟನೆಗಳು ಮರೆಮಾಚಿರುವುದು ಎಲ್ಲರಿಗು ಸರ್ವೇಸಾಮಾನ್ಯವಾಗಿ ತಿಳಿದ ವಿಚಾರವಾಗಿದೆ. ಆದರೆ ಒಂದು ಸಂಸ್ಥೆಗೆ ಅಥವಾ ಒಂದು ಯೋಜನೆಗೆ ಹೆಸರಿಡುವುದರಿಂದ ಮೊದಲುಗೊಂಡು ನವ ಭಾರತದ ನವ ತರುಣರು ಅಧ್ಯಯನ ಮಾಡುವ ವಿಷಯಗಳಲ್ಲಿಯೂ ಭಾಷೆಯ ರಾಜಕಾರಣ ಮಾಡುವುದು, ಬೋಧಕರಿಂದ ಹಿಡಿದು ವಿದ್ಯಾರ್ಥಿಗಳಿಗೂ, ಅವರ ಪೋಷಕರಿಗೂ ಮಾನಸಿಕವಾಗಿ ಬೇಡಿ ಹಾಕಿದಂತೆ ಎನ್ನುವುದೇ ಚರ್ಚೆಯ ಮುಖ್ಯ ವಿಷಯವಾಗಿತ್ತು.
ಈಗ ಹಳ್ಳಿಯ ಕಡೆಗಳಲ್ಲಿ ‘ಗಿಣಿ ಶಾಸ್ತ್ರ ಹೇಳೋಣು ಬಂದಿದ್ದಾನೆ, ಕೇಳಿ’, ಅನ್ನುವ ಮಾತಿದೆ. ಯಾರಾದರೂ, ಒಂದೇ ವಿಚಾರ ಮಾತನಾಡಿದರೆ, ‘ಸಾಕು ಬಿಡಪ್ಪ ನಿನ್ನ ಪುರಾಣ’ ಎಂದು ಹೇಳುತ್ತಿದ್ದರು, ಇಂತಹ ಶಾಸ್ತ್ರ ಪುರಾಣಗಳು ಯಾವುದೇ ಕಾರಣಕ್ಕೂ ವೈಜ್ಞಾನಿಕತೆಯಿಂದ ಕೂಡಿದವುಗಳಲ್ಲ ಎನ್ನುವುದಕ್ಕೆ ಈ ಮಾತುಗಳೇ ನಿದರ್ಶನಗಳು. ಆದರೆ ‘ಪ್ರಬುದ್ಧ ಭಾರತ’ದ ಕನಸುಗಳನ್ನೊತ್ತ ಶೇಕಡ 60 ರಷ್ಟು ವಿದ್ಯಾರ್ಥಿಗಳು ಆರ್ಥಿಕ ಅಭದ್ರತೆಯಿಂದ ಕೂಡಿದ್ದರೂ, ಇಂದಿಗೂ ಹಳೆಯ ವಿಚಾರಗಳಿಗೆ ಅಂಟಿಕೊಂಡು ಕುಳಿತಿರುವುದನ್ನು ಗಮನಿಸಬಹುದು. ಆದರೆ ಇಂದು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಾದ ವಿಷಯಗಳನ್ನು ಶಾಸ್ತ್ರಗಳ ಹೆಸರಲ್ಲಿ ಬೋಧಿಸುತ್ತ ಎಲ್ಲವನ್ನು ಶಾಸ್ತ್ರಮಯವಾಗಿಸಿ, ವೈಜ್ಞಾನಿಕ ವಿಚಾರಗಳನ್ನು ಮರೆಮಾಚಲಾಗಿದೆ, ಎಂದು ಹೇಳಲಾಗುತ್ತಿದೆ.
ಇಂದಿನ ವಿದ್ಯಾರ್ಥಿಗಳಿಗೆ ವಿಶ್ವ ವಿದ್ಯಾಲಯಗಳಲ್ಲಿ ಬೋಧಿಸುವ ಮುಖ್ಯ ವಿಷಯಗಳೇ ಮೊದಲು ಬದಲಾಗಬೇಕಾದ ಅನಿವಾರ್ಯತೆಯಾಗಿದೆ. ಇಂಗ್ಲೀಷ್ ನಲ್ಲಿರುವ ECONOMICS ಎನ್ನುವುದನ್ನು ಅರ್ಥಶಾಸ್ತ್ರ, ಜಿಯಾಗ್ರಫಿ ಎನ್ನುವುದನ್ನು ಭೂಗೋಳಶಾಸ್ತ್ರ, ಸೋಶಿಯಾಲಜಿ ಎನ್ನುವುದನ್ನು ಸಮಾಜಶಾಸ್ತ್ರ, ಬಯಾಲಜಿ ಎನ್ನುವುದನ್ನು ಜೀವಶಾಸ್ತ್ರ, ಪಿಜಿಕ್ಸ್ ಎನ್ನುವುದನ್ನು ಬೌತಶಾಸ್ತ್ರ… ಹೀಗೆ ಎಲ್ಲವನ್ನು ಶಾಸ್ತ್ರಗಳಿಗೆ ಸಮಾನವೆಂದು ಹೋಲಿಸಿ, ವಿಜ್ಞಾನವನ್ನೇ ಮಾಯವಾಗುವಂತೆ ಮಾಡಲಾಗಿದೆ. ಇವೆಲ್ಲವೂ ಹೇಗೆ ಶಾಸ್ತ್ರವಾಗುತ್ತವೆ? ಎನ್ನುವ ಸಾಮಾನ್ಯ ವೈಜ್ಞಾನಿಕ ಪರಿಜ್ಞಾನವೂ ಇಲ್ಲದ ನಮ್ಮ ವಿದ್ಯಾರ್ಥಿಗಳು, ಇಂದಿಗೂ ಅವುಗಳಿಗೆ ಗಂಟುಬಿದ್ದು ಅವುಗಳೇ ಸತ್ಯವೆಂದು ನಂಬಲು ಹೊರಟಿದ್ದಾರೆ.
“ಶಾಸ್ತ್ರವೆನ್ನುವುದು ಸುಳ್ಳಿನ ಕಂತೆ
ಪುರಾಣವೆಂಬುದು ಪುಂಡರ ಗೋಷ್ಠಿ
ಕೈಲಾಸವೆಂಬುದು ಹಾಳು ಬೆಟ್ಟ
ಅಲ್ಲಿರುವ ಶಿವನು ದಟ್ಟ, ಅಲ್ಲಿರುವ ಗಣಂಗಳು ಮೈಗಳ್ಳರು, ಬೇಡೆನಗೆ ಕೈಲಾಸ, ಮಾಡುವುದು ಕಾಯಕ, ಕಾಯಕ ದೀಕ್ಷೆಯನ್ನು ನೀಡು, ನಾಡಹಂದರಕ್ಕೆ ಹಬ್ಬಿಸುವೆ ಕಾಯಕವೇ ಕೈಲಾಸ” ಎನ್ನುವ ಬಸವಣ್ಣನ ಮಾತುಗಳು ಸಹ ಇವತ್ತಿಗೂ ಆಧುನಿಕ ಭಾರತಕ್ಕೆ ಬಹಳ ಪ್ರಸ್ತುತವೆನಿಸುತ್ತವೆ.
ಹೇಗೆ ಒಂದು ದೇಶದ ಅರ್ಥವ್ಯವಸ್ಥೆ ಸಾಮಾಜಿಕ ಬದುಕು, ಬೌಗೋಳಿಕ ಚೌಕಟ್ಟು, ಜೀವಕೋಶಗಳ ವ್ಯವಸ್ಥೆ, ಶಾಸ್ತ್ರಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎನ್ನುವ ಆಲೋಚನೆಯು ನಮ್ಮಲ್ಲಿ ಬಂದಾಯಿತು? ಮೊದಲು ಇಂತಹ ಅವೈಜ್ಞಾನಿಕ ಮನಸ್ಥಿತಿಯಿಂದ ಯುವ ಜನತೆಯನ್ನು ಹೊರ ತರಬೇಕಾದ ಜವಾಬ್ದಾರಿ ಇಂದಿನ ಬೋಧಕರ ನಿಜವಾದ ಜವಾಬ್ದಾರಿಯಾಗಿದೆ ಎನ್ನುವ ಮೂಲಕ ಚರ್ಚೆ ಬಹಳ ಹೊಸ ತಿರುವನ್ನು ಪಡೆದುಕೊಂಡಿತು.
‘ನೀನು ಯಾವುದನ್ನಾದರೂ ಒಪ್ಪಿಕೊಳ್ಳುವ ಮೊದಲು ಪ್ರಶ್ನಿಸಿ ನಂತರ ಒಪ್ಪಿಕೊಳ್ಳಬೇಕು ಎನ್ನುವ ಸೂಕ್ಷ್ಮವನ್ನು ವಿದ್ಯಾರ್ಥಿಗಳು ಅರಿಯಬೇಕಿದೆ’
ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ,
Teacher will be pillar of the nation
Teacher will be director of the nation
ಈ ಮಾತುಗಳನ್ನು ನಮ್ಮ ಬೋಧಕರು ಅರಿತು, ವಿದ್ಯಾರ್ಥಿಗಳನ್ನು ವಿಜ್ಞಾನದ ಹಾದಿಯಲ್ಲಿ ನಡೆಸಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: