ಶಮಿ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ಆಸೀಸ್ ವಿರುದ್ಧ ಭಾರತಕ್ಕೆ ಐದು ವಿಕೆಟ್ ಗಳ ಜಯ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಐದು ವಿಕೆಟ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿತು.
ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್ ಕೇವಲ 4 ರನ್ ಗಳಿಸಿದಾಗ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಶುಭ್ ಮನ್ ಗಿಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ವಾರ್ನರ್ ಆಕರ್ಷಕ ಅರ್ಧ ಶತಕ ಗಳಿಸಿ ರವೀಂದ್ರ ಜಡೇಜೌ ಬೌಲಿಂಗ್ ನಲ್ಲಿ ಶುಭ್ ಮನ್ ಗಿಲ್ ಗೆ ಕ್ಯಾಚ್ ನೀಡಿದರು. ಸ್ಟಿವನ್ ಸ್ಮಿತ್ 41, ಲಾಬಸ್ ಚೆಂಜ್ 39, ಗ್ರೀನ್ 31, ಜೊಸ್ ಇಂಗ್ಲಿಸ್ 45, ಸ್ಟೊಯ್ನಿಸ್ 29, ಕಮ್ಮಿನ್ಸ್ 21 ರನ್ ಗಳಿಸಿದರು. ಭಾರತದ ಪರ ಮೊಹಮ್ಮದ್ ಶಮಿ 5 ವಿಕೆಟ್ ಪಡೆದರೆ, ಬುಮ್ರಾ, ಅಶ್ವಿನ್, ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.
ಆಸ್ಟ್ರೇಲಿಯಾ ನೀಡಿದ 277 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ ಪರ ಋತುರಾಜ್ ಗಾಯಕ್ವಾಡ್ 71, ಶುಭ್ ಮನ್ ಗಿಲ್ 74, ಶ್ರೇಯಸ್ ಅಯ್ಯರ್ 3, ನಾಯಕ ಕೆಎಲ್ ರಾಹುಲ್ ಔಟಾಗದೆ ಅಜೇಯ 58, ಇಶಾನ್ ಕಿಶಾನ್ 18, ಸೂರ್ಯಕುಮಾರ್ ಯಾದವ್ 50, ರವೀಂದ್ರ ಜಡೇಜಾ 3 ರನ್ ಗಳಿಸಿದರು. ಇದರೊಂದಿಗೆ ಭಾರತ 48.4 ಓವರ್ ಗಳಲ್ಲಿ ಐದು ವಿಕೆಟ್ ಗಳಿಂದ ಗೆಲುವಿನ ನಗೆ ಬೀರಿತು.
2023ರ ವಿಶ್ವಕಪ್‌ಗೆ ಸಿದ್ಧತೆಯಾಗಿ ನಡೆಯುತ್ತಿರುವ ಈ ಸರಣಿಯ ಮೊದಲ ಮತ್ತು ಎರಡನೇ ಪಂದ್ಯಗಳಿಗೆ ಟೀಂ ಇಂಡಿಯಾದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಆಸ್ಟ್ರೇಲಿಯಾ ಕೂಡ ತನ್ನ ಪ್ರಮುಖ ಆಟಗಾರರಿಲ್ಲದೆ ಈ ಪಂದ್ಯದಲ್ಲಿ ಕಣಕ್ಕಿಳಿದಿತ್ತು.
ಹೀಗಿರುವಾಗ ಬಹುತೇಕ ಸಮಬಲದ ಪೈಪೋಟಿಯನ್ನು ನಿರೀಕ್ಷಿಸಲಾಗಿತ್ತು. ಆದರೆ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಂ ಇಂಡಿಯಾ ಜಯಭೇರಿ ಬಾರಿಸಿದೆ. ಇಷ್ಟೇ ಅಲ್ಲ, ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 27 ವರ್ಷಗಳ ನಂತರ ಏಕದಿನ ಪಂದ್ಯವನ್ನು ಗೆದ್ದ ಸಾಧನೆ ಮಾಡಿದೆ.