ಸ್ವಾತಂತ್ರ್ಯ ದಿನಾಚರಣೆ , ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ: ಹಣ್ಮು ಪಾಜಿ ಗೆಳೆಯರ ಬಳಗದಿಂದ ರಕ್ತದಾನ ಶಿಬಿರ - Mahanayaka
5:24 PM Thursday 12 - December 2024

ಸ್ವಾತಂತ್ರ್ಯ ದಿನಾಚರಣೆ , ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ: ಹಣ್ಮು ಪಾಜಿ ಗೆಳೆಯರ ಬಳಗದಿಂದ ರಕ್ತದಾನ ಶಿಬಿರ

bidar
15/08/2024

ಬೀದರ್: 77ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಂಗೊಳ್ಳಿ ರಾಯಣ್ಣನ ಜಯಂತ್ಯುತ್ಸವ ಪ್ರಯುಕ್ತ ಹಣ್ಮು ಪಾಜಿ ಗೆಳಯರ ಬಳಗದಿಂದ ಬೀದರಿನ ಬ್ರಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ 77 ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಜಿ ಸಚಿವ ಬಂಡೆಪ್ಪಾ ಖಾಸೆಂಪೂರೆ ಮಾತನಾಡಿ, ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತ ಪಡುತ್ತಿದ್ದಾರೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಇಂದು ಚಿತ್ರನಟ ಹಣ್ಮು ಪಾಜಿ ಅವರು ಬೀದರ್ ಜಿಲ್ಲೆಯಲ್ಲಿ ಮಾಡುತ್ತಿರುವ ಪ್ರತಿಯೊಂದು ಕಾರ್ಯಕ್ರಮಗಳು ಐತಿಹಾಸಿಕ ಕಾರ್ಯಗಳಾಗಿವೆ ಅಂತ ತಿಳಿಸಿದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ಅಮೃತರಾವ ಚೀಮಕೋಡೆ ಮಾತನಾಡಿ, ರಕ್ತ ಯಾವುದೋ ಅಂಗಡಿ–ಮುಂಗಟ್ಟುಗಳಲ್ಲಿ ಸಿಗುವ ವಸ್ತುವಲ್ಲ. ಮನುಷ್ಯರ ದೇಹದಲ್ಲಿ ಉತ್ಪತ್ತಿಯಾಗುವ ಸಂಪನ್ಮೂಲವಾಗಿದೆ. ಇಂದಿನ ದಿನಗಳಲ್ಲಿ ರಕ್ತದ ಅಗತ್ಯ ಹೆಚ್ಚಿದ್ದು, ಶಸ್ತ್ರ ಚಿಕಿತ್ಸೆ, ಮಹಿಳೆಯರಿಗೆ ಹಾಗೂ ಕಡಿಮೆ ರಕ್ತ ಇರುವ ರೋಗಿಗಳಿಗೆ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ರಕ್ತದಾನ ಶಿಬಿರಗಳು ನಡೆಯಬೇಕು ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಮಹೇಶ ಬಿರಾದಾರ ಮಾತನಾಡಿ, ರಕ್ತದಾನಕ್ಕೆ ಯುವಕರು ಮುಂದಾಗಬೇಕು ಮನುಷ್ಯನ ವಯಸ್ಸು ರಕ್ತದ ಶುದ್ಧತೆಯ ಮಾನದಂಡವಾಗಿದ್ದು ವಯೋವೃದ್ದರ ದೇಹದಿಂದ ರಕ್ತವನ್ನು ಪಡೆದರೂ ಸಹ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ, ಅಷ್ಟಕ್ಕೂ ವಯೋವೃದ್ಧರ ದೇಹದಲ್ಲಿ ಅದಾಗಲೇ ರಕ್ತ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿ ತಗುಲಿರುತ್ತವೆ ಹೀಗಾಗಿ ಅವರಲ್ಲಿ ರಕ್ತದ ಉತ್ಪದನಾ ಸಾಮಥ್ರ್ಯವೂ ಕೂಡ ಕಡಿಮೆಯಾಗಿರುತ್ತದೆ ಇದರಿಂದ ರೋಗಿಯ ದೇಹಕ್ಕೆ ಹಾಕಲು ಅಷ್ಟೊಂದು ಸೂಕ್ತವಾಗಿರುವುದಿಲ್ಲ ಈ ಎಲ್ಲ ಕಾರಣಗಳಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗುವಂತೆ ಕರೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು ಮಾತನಾಡಿ ಜನಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು ಹೋಗಲಾಡಿಸಬೇಕು. ಹೆಚ್ಚು ಜನರು ಸೇರುವ ಧಾರ್ಮಿಕ ಕೇಂದ್ರಗಳಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸಿದರೆ ದೇಶದಲ್ಲಿನ ರಕ್ತದ ಕೊರತೆ ನೀಗಿಸಬಹುದು. ಧಾರ್ಮಿಕ ಕೇಂದ್ರಗಳು ಪೂಜೆ ಪ್ರಾರ್ಥನೆಗಳಿಗೆ ಸೀಮಿತವಾಗಿರದೆ ಸಮಾಜಮುಖಿಯಾಗಿ ಸ್ಪಂದಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಬಾಬುರಾವ ಮಲ್ಕಾಪುರೆ, ಪೀರಪ್ಪ ಔರಾದೆ, ಉಮೇಶ ಶಾಹಪೂರೆ, ಮನ್ಮಿಥಸಿಂಗ್, ರಾಜಕುಮಾರ ಅಷ್ಟೂರೆ, ರಮೇಶ ಬಿರಾದಾರ, ಓಂ ಪ್ರಕಾಶ ಕೌಠೆ, ಬಸವರಾಜ ಶಾಹಪೂರೆ, ಇಮ್ರಾನ್ ಖಾನ್, ಅಮರ ಚಾಂಬಳೆ, ಸಂಗಮೇಶ ಶಾಹಪೂರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು, ಅಭಿಷೇಕ ಮಠಪತಿ ಸ್ವಾಗತಿಸಿದರು ಪರಮೇಶ ವಿಳಸಪೂರೆ ನಿರೂಪಿಸಿದರು.


ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದು ದೇಶ ಸೇವೆಗೆ ಸಮಾನವಾದ ಪ್ರಕ್ರಿಯೆ, ರಕ್ತದಾನದಿಂದ ಮಾತ್ರ ವೈದ್ಯಕೀಯ ಲೋಕ ಬಹಳಷ್ಟು ವರ್ಷಗಳ ಕಾಲ ಭದ್ರವಾಗಿರಲು ಸಾಧ್ಯವೆಂದು ಅರಿತು ಇಂದು ಹಣ್ಮು ಪಾಜಿ ಗೆಳಯರ ಬಳಗದ ಎಲ್ಲಾ ಪದಾಧಿಕಾರಿಗಳು ಸೇರಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ರಕ್ತ ಇನ್ನೊಬ್ಬರ ದೇಹಕ್ಕೆ ವರ್ಗಾವಣೆ ಮಾಡಬಹುದಾಗಿದ್ದು ಅವುಗಳನ್ನು ದಾನ ರೂಪವಾಗಿ ನೀಡುವುದು ಪುಣ್ಯದ ಕೆಲಸ.

–ಹಣ್ಮು ಪಾಜಿ, ಚಿತ್ರನಟ ಬೀದರ್


77 ಯುವಕರಿಂದ ರಕ್ತದಾನ:

ಜಿಲ್ಲೆಯ ಅನೇಕ ಯುವಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ, ಹಣ್ಮು ಪಾಜಿ ಗೆಳಯರ ಬಳಗದಿಂದ ಆಯೋಜಿಸಿರುವ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವುದರ ಮೂಲಕ ದೇಶದ ಬಹುದೊಡ್ಡ ಹಬ್ಬವನ್ನು ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಿದರು. ರಕ್ತದಾನ ಮಾಡಿರುವ ಎಲ್ಲಾ ಯುವಕರಿಗೆ ಪ್ರಮಾಣ ಪತ್ರ ಸಲ್ಲಿಸುವುದರ ಮೂಲಕ ಸನ್ಮಾನಿಸಲಾಯಿತು.

ವರದಿ: ರವಿಕುಮಾರ ಶಿಂದೆ


 

ಇತ್ತೀಚಿನ ಸುದ್ದಿ