ಸಿಂಹಳೀಯರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಬರೋಬ್ಬರಿ 302 ರನ್ಗಳಿಂದ ಸೋಲಿಸಿದ ಟೀಂ ಇಂಡಿಯಾ ಅಧಿಕೃತವಾಗಿ ಏಕದಿನ ವಿಶ್ವಕಪ್ನ ಸೆಮಿಫೈನಲ್ಗೆ ಟಿಕೆಟ್ ಖಚಿತಪಡಿಸಿಕೊಂಡಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 357 ರನ್ ಕಲೆಹಾಕಿತು. ತಂಡದ ಪರ ವಿರಾಟ್ ಕೊಹ್ಲಿ 88, ಶುಭ್ಮನ್ ಗಿಲ್ 92 ಮತ್ತು ಶ್ರೇಯಸ್ ಅಯ್ಯರ್ 82 ರನ್‌ಗಳ ಶತಕ ವಂಚಿತ ಇನ್ನಿಂಗ್ಸ್ ಆಡಿದರು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕೇವಲ 19.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 55 ರನ್ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಮೊಹಮ್ಮದ್ ಶಮಿ ಐದು ವಿಕೆಟ್ ಪಡೆದರೆ, ಇವರಲ್ಲದೆ ಮೊಹಮ್ಮದ್ ಸಿರಾಜ್ ಮೂರು, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಆರಂಭ ಕಳಪೆಯಾಗಿತ್ತು. ಇನಿಂಗ್ಸ್‌ನ ಎರಡನೇ ಎಸೆತದಲ್ಲಿ ನಾಯಕ ರೋಹಿತ್ ಶರ್ಮಾ ಅವರನ್ನು ದಿಲ್ಶಾನ್ ಮಧುಶಂಕ ಕ್ಲೀನ್ ಬೌಲ್ಡ್ ಮಾಡಿದರು. ಇದಾದ ಬಳಿಕ ವಿರಾಟ್ ಕೊಹ್ಲಿ 2ನೇ ವಿಕೆಟ್‌ಗೆ ಶುಭ್ಮನ್ ಗಿಲ್ ಜೊತೆ 189 ರನ್ ಜೊತೆಯಾಟ ನಡೆಸಿದರು. ಮಧುಶಂಕ ಈ ಜೊತೆಯಾಟವನ್ನು ಮುರಿದರು. 92 ಎಸೆತಗಳಲ್ಲಿ 11 ಬೌಂಡರಿ ಮತ್ತು ಎರಡು ಸಿಕ್ಸರ್ ಸಹಿತ 92 ರನ್ ಸಿಡಿಸಿದ್ದ ಶುಭ್ಮನ್ 8 ರನ್ಗಳಿಂದ ಶತಕ ವಂಚಿತರಾದರು. ಇದಾದ ಬಳಿಕ ವಿರಾಟ್ ಕೂಡ ಶತಕ ವಂಚಿತರಾಗಿ ಮಧುಶಂಕಗೆ ಬಲಿಯಾದರು.
ಇದಾದ ನಂತರ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ 46 ಎಸೆತಗಳಲ್ಲಿ 60 ರನ್‌ಗಳ ಅದ್ಭುತ ಜೊತೆಯಾಟ ನೀಡಿದರು. ರಾಹುಲ್ 19 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರೆ ಅವರನ್ನು ದುಷ್ಮಂತ ಚಮೀರಾ ವಜಾಗೊಳಿಸಿದರು. ಸೂರ್ಯಕುಮಾರ್ ಯಾದವ್ ಅವರಿಗೆ ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅವರು ಒಂಬತ್ತು ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು.
ಏತನ್ಮಧ್ಯೆ, ಶ್ರೇಯಸ್ 36 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತಮ್ಮ ಏಕದಿನ ವೃತ್ತಿಜೀವನದ 16 ನೇ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಮಧುಶಂಕ 56 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಆರು ಸಿಕ್ಸರ್‌ಗಳ ನೆರವಿನಿಂದ 82 ರನ್ ಸಿಡಿಸಿದ್ದ ಶ್ರೇಯಸ್ರನ್ನು ಬಲಿ ಪಡೆದರು. ಮೊಹಮ್ಮದ್ ಶಮಿ ಎರಡು ರನ್ ಗಳಿಸಿ ಔಟಾದರೆ, ರವೀಂದ್ರ ಜಡೇಜಾ 24 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 35 ರನ್ ಗಳಿಸಿದರು. ಶ್ರೀಲಂಕಾ ಪರ ಮಧುಶಂಕ ಐದು ವಿಕೆಟ್ ಪಡೆದರೆ, ಚಮೀರಾ ಒಂದು ವಿಕೆಟ್ ಪಡೆದರು.
ಭಾರತ ನೀಡಿದ 357 ರನ್‌ಗಳ ಗುರಿ ಬೆನ್ನಟ್ಟಿದ ಲಂಕಾ ಪಡೆ ಆರಂಭದಲ್ಲೇ ತತ್ತರಿಸಿತು. ತಂಡದ ಮೂವರು ಆರಂಭಿಕರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ ಕೇವಲ 16 ರನ್ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಸೋಲೊಪ್ಪಿಕೊಂಡಿತು. ಆ ನಂತರವೂ ತಂಡದ ಪರ ಯಾರೂ ಸಹ ಗೆಲುವಿಗಾಗಿ ಹೋರಾಟ ನಡೆಸಲಿಲ್ಲ. ಅಂತಿಮವಾಗಿ ಇಡೀ ಶ್ರೀಲಂಕಾ ತಂಡ 55 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಕಸುನ್ ರಜಿತಾ ಗರಿಷ್ಠ 14 ರನ್ ಗಳಿಸಿದರು. ಇವರಲ್ಲದೆ ಮಹಿಶ್ ತೀಕ್ಷಣ ಮತ್ತು ಏಂಜೆಲೊ ಮ್ಯಾಥ್ಯೂಸ್ ತಲಾ 12 ರನ್ ಗಳಿಸಿದರು. ಹೀಗೆ ಪಂದ್ಯವು ರೋಚಕವಾಗಿ ಮುಗಿಯಿತು.