ದಾಳಿ ನಡೆಸಿದ ಭಯೋತ್ಪಾದಕರು, ಯಾರೂ ಊಹಿಸಲು ಸಾಧ್ಯವಾಗದ ಶಿಕ್ಷೆ ಪಡೆಯುತ್ತಾರೆ: ಪ್ರಧಾನಿ ಮೋದಿ ಎಚ್ಚರಿಕೆ

ಮಧುಬನಿ (ಬಿಹಾರ): ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಒಬ್ಬ ಕಾಶ್ಮೀರಿಯ ಹತ್ಯೆ ಘಟನೆ ನಡೆದು ಎರಡು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರಿಗೆ ಬಲವಾದ ಸಂದೇಶ ರವಾನಿಸಿದ್ದಾರೆ.
ಪ್ರಧಾನಿ ಬಿಹಾರದ ಮಧುಬನಿಯಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಭಯತ್ಪಾದಕರ ದಾಳಿಯಿಂದ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿ, ಪ್ರತಿಯೊಬ್ಬ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರನ್ನು ಗುರುತಿಸಿ, ಟ್ರ್ಯಾಕ್ ಮಾಡಿ ಶಿಕ್ಷಿಸುತ್ತೇವೆ. ಈ ದುಷ್ಕೃತ್ಯವು ನಮ್ಮ ಚೈತನ್ಯವನ್ನು ಕುಂದಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಮುಗ್ಧ ಪ್ರವಾಸಿಗರನ್ನು ಕೊಂದ ನಿರ್ದಯ ವಿಧಾನದಿಂದಾಗಿ ಇಡೀ ದೇಶವು ನೋವನ್ನು ಅನುಭವಿಸುತ್ತಿದೆ. ಯಾರೋ ಒಬ್ಬ ಸಹೋದರನನ್ನು ಕಳೆದುಕೊಂಡಿದ್ದಾರೆ, ಯಾರು ಜೀವನ ಸಂಗಾತಿಯನ್ನು ಕಳೆದುಕೊಂಡಿದ್ದಾರೆ. ಯಾರೋ ಬಂಗಾಳಿ ಮಾತನಾಡುತ್ತಿದ್ದರು, ಯಾರೋ ಕನ್ನಡ ಮಾತನಾಡುತ್ತಿದ್ದರು, ಯಾರೋ ಮರಾಠಿ, ಯಾರೋ ಒಡಿಯಾ, ಯಾರೋ ಗುಜರಾತಿ ಮತ್ತು ಯಾರೋ ಬಿಹಾರದ ಮಗ ಇವರ ಜೊತೆ ಇಡೀ ದೇಶವು ಇದೆ. ಗಾಯಗೊಂಡವರ ಯೋಗಕ್ಷೇಮವನ್ನು ಸರ್ಕಾರ ನೋಡಿಕೊಳ್ಳುತ್ತದೆ ಎಂದರು.
ಕಾರ್ಗಿಲ್ ನಿಂದ ಕನ್ಯಾಕುಮಾರಿಯವರೆಗೆ, ದುಃಖ ಮತ್ತು ಕ್ರೋಧವಿದೆ. ಈ ದಾಳಿ ಕೇವಲ ಮುಗ್ಧ ಪ್ರವಾಸಿಗರ ಮೇಲೆ ಅಲ್ಲ; ದೇಶದ ಶತ್ರುಗಳು ಭಾರತದ ಆತ್ಮದ ಮೇಲೆ ದಾಳಿ ಮಾಡುವ ಧೈರ್ಯವನ್ನು ತೋರಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.
ದಾಳಿ ನಡೆಸಿದ ಭಯೋತ್ಪಾದಕರು ಮತ್ತು ಅದನ್ನು ರೂಪಿಸಿದವರು ಊಹಿಸಲೂ ಸಾಧ್ಯವಾಗದ ಶಿಕ್ಷೆಯನ್ನು ಪಡೆಯುತ್ತಾರೆ ಎಂದು ಪ್ರಧಾನಿ ಹೇಳಿದರು.
ನಾನು ಇಡೀ ಜಗತ್ತಿಗೆ ಹೇಳುತ್ತೇನೆ. ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತದೆ, ಟ್ರ್ಯಾಕ್ ಮಾಡುತ್ತದೆ ಮತ್ತು ಶಿಕ್ಷಿಸುತ್ತದೆ. ನಾವು ಅವರನ್ನು ಭೂಮಿಯ ತುದಿಯವರೆಗೆ ಬೆನ್ನಟ್ಟುತ್ತೇವೆ ಎಂದು ಇಂಗ್ಲಿಷ್ ಭಾಷೆಯ ಮೂಲಕ ಜಗತ್ತಿಗೆ ಸಂದೇಶ ರವಾನಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: