ದುರಂತ: ಅಮೆರಿಕ ವಿಶ್ವವಿದ್ಯಾಲಯದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಆತ್ಮಹತ್ಯೆ
ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾಲಯದ ಭಾರತೀಯ ಮೂಲದ ಡಾಕ್ಟರೇಟ್ ವಿದ್ಯಾರ್ಥಿ ಸಮೀರ್ ಕಾಮತ್ ಎಂಬುವವರು ಪ್ರಕೃತಿ ಸಂರಕ್ಷಿತ ಪ್ರದೇಶದಲ್ಲಿ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದು, ತಲೆಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರೆನ್ ಕೌಂಟಿ ಕೊರೋನರ್ ಜಸ್ಟಿನ್ ಬ್ರುಮೆಟ್ ಅವರ ಪ್ರಕಾರ, ಸಮೀರ್ ಕಾಮತ್ ಅವರ ಶವ ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಕ್ರೋಸ್ ಗ್ರೋವ್ ನೇಚರ್ ಪ್ರಿಸರ್ವ್ ನಲ್ಲಿ ಪತ್ತೆಯಾಗಿದೆ.
ಅಮೆರಿಕ ಪ್ರಜೆಯಾಗಿರುವ ಸಮೀರ್ ಕಾಮತ್ (23) 2023ರ ಆಗಸ್ಟ್ ನಲ್ಲಿ ಪರ್ಡ್ಯೂನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ಇಂಡಿಯಾನಾದ ಕ್ರಾಫೋರ್ಡ್ಸ್ವಿಲ್ಲೆಯಲ್ಲಿ ಫೆಬ್ರವರಿ 6 ರಂದು ಕಾಮತ್ ಅವರ ವಿಧಿವಿಜ್ಞಾನ ಶವಪರೀಕ್ಷೆ ನಡೆಸಲಾಯಿತು ಎಂದು ಜಸ್ಟಿನ್ ಬ್ರುಮೆಟ್ ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾವಿಗೆ ಪ್ರಾಥಮಿಕ ತನಿಖೆಯಲ್ಲಿ ತಲೆಗೆ ಗುಂಡು ತಗುಲಿದ ಗಾಯವಾಗಿದ್ದು, ಕಾಮತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ವಾರೆನ್ ಕೌಂಟಿ ಕರೋನರ್ ಕಚೇರಿಯು ಇತರ ಅನೇಕ ಸ್ಥಳೀಯ ಮತ್ತು ಫೆಡರಲ್ ಏಜೆನ್ಸಿಗಳೊಂದಿಗೆ ನಡೆಸಿದ ತನಿಖೆಯ ಮೂಲಕ, ನಾವು ಈಗ ಸಾವಿಗೆ ಪ್ರಾಥಮಿಕ ಕಾರಣ ಮತ್ತು ವಿಧಾನವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ” ಎಂದು ಪ್ರಕಟಣೆ ತಿಳಿಸಿದೆ.