ಮೂರನೇ ಪತ್ನಿಗಾಗಿ 7 ವರ್ಷದ ಮಗನನ್ನು ಕೊಂದ ಪಾಪಿ: ನನ್ನ ಕೋಣೆಯಲ್ಲಿ ಮಲಗು ಎಂದು ಕರೆದೊಯ್ದು ಬರ್ಬರ ಹತ್ಯೆ
ಇಂದೋರ್: ಅವನು ಮೂರನೇ ತರಗತಿಯಲ್ಲಿ ಓದುತ್ತಿರುವ ಹುಡುಗ. ಆತನ ತಾಯಿ ತೀರಿ ಹೋದ ನಂತರ ತಂದೆ ಬೇರೆ ಮದುವೆಯಾಗಿದ್ದ. ಆತನಿಗೆ ಅದು ಮೂರನೇಯ ವಿವಾಹವಾಗಿತ್ತು. ಮಲ ತಾಯಿ ಬಂದ ಬಳಿಕ ತಂದೆಯ ವರ್ತನೆ ಬದಲಾಗ ತೊಡಗಿತು. ಅತ್ತ ತಾಯಿಯೂ ಇಲ್ಲ ಇತ್ತ ತಂದೆಯ ಪ್ರೀತಿಯೂ ಇಲ್ಲದ ಪುಟ್ಟ ಬಾಲಕನಿಗೆ ಅಜ್ಜಿ ಆಸರೆಯಾಗಿದ್ದಳು.
ತಂದೆ ಹಾಗೂ ಮಲತಾಯಿ ಮಲಗುತ್ತಿದ್ದ ಕೋಣೆ ಎಂದರೆ ಅವನಿಗೆ ತುಂಬಾ ಇಷ್ಟ. ಆ ಕೋಣೆಯಲ್ಲಿ ಏರ್ ಕೂಲರ್ ಇದೆ. ಅದರ ತಂಪಾದ ಗಾಳಿ ಅಂದ್ರೆ ಅವನಿಗೆ ತುಂಬಾ ಇಷ್ಟ. ಪ್ರತೀ ದಿನ ತನ್ನನ್ನು ದೂಷಿಸುತ್ತಿದ್ದ ತಂದೆ ಒಂದು ದಿನ ಏಕಾಏಕಿ ಬಂದು, ನೀನು ಇಂದು ನಮ್ಮ ಜೊತೆಗೆ ಮಲಗು ಎಂದು ಕರೆದಾಗ ಆತನ ಆನಂದಕ್ಕೆ ಪರವೇ ಇರಲಿಲ್ಲ. ಇತ್ತ ಅಜ್ಜಿ ಕೊನೆಗೂ ತನ್ನ ಮಗನಿಗೆ ಬುದ್ಧಿ ಬಂತಲ್ಲ ಎಂದು ಖುಷಿಯಲ್ಲಿದ್ದರು. ಆದ್ರೆ, ಬೆಳಗ್ಗೆ ಎದ್ದಾಗ ಭಾರೀ ಆಘಾತ ಎದುರಾಗಿತ್ತು.
ಹೌದು…! ಈ ಘಟನೆ ನಡೆದಿರೋದು ಮಧ್ಯಪ್ರದೇಶದ ಇಂದೋರ್ ನಲ್ಲಿ. ಮೂರನೇ ಪತ್ನಿಯನ್ನು ಮೆಚ್ಚಿಸಲು ಪತಿ ತನ್ನ 7 ವರ್ಷ ವಯಸ್ಸಿನ ಮುದ್ದಾದ ಮಗುವನ್ನೇ ಬಲಿ ನೀಡಿದ್ದಾನೆ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಮೂರನೇ ತರಗತಿಯ ವಿದ್ಯಾರ್ಥಿ ಪ್ರತೀಕ್(7) ತಂದೆ ಶಶಿಪಾಲ್ ಎಂಬಾತನಿಂದ ಹತ್ಯೆಗೀಡಾದ ಬಾಲಕನಾಗಿದ್ದಾನೆ. ಮೂರನೇ ಪತ್ನಿ ಪಾಯಲ್ ಗೆ ಇತ್ತೀಚೆಗೆ ಗಂಡು ಮಗುವಾಗಿತ್ತು. ಹಿಂದಿನ ಪತ್ನಿಯ ಮಗನನ್ನು ಮನೆಯಿಂದ ಹೊರ ಹಾಕು, ಇಲ್ಲವೇ ಕೊಂದು ಹಾಕಿದರೆ ಮಾತ್ರವೇ ನಾನು ನಿನ್ನ ಮನೆಗೆ ಬರುತ್ತೇನೆ ಎಂದು ಪಾಯಲ್, ಶಶಿಪಾಲ್ ಗೆ ಒತ್ತಡ ಹಾಕಿದ್ದಳು.
ಮಂಗಳವಾರ ರಾತ್ರಿ ಅಜ್ಜಿಯ ಜೊತೆಗೆ ಮಲಗಿದ್ದ ಬಾಲಕ ಪ್ರತೀಕ್ ನನ್ನು ತನ್ನ ಜೊತೆಗೆ ಮಲಗುವಂತೆ ತಂದೆ ಕರೆದುಕೊಂಡು ಹೋಗಿದ್ದಾನೆ. ತಂದೆಯ ರೂಮ್ ನಲ್ಲಿದ್ದ ಕೂಲರ್ ಅಂದ್ರೆ ಪ್ರತೀಕ್ ಗೆ ಎಲ್ಲಿಲ್ಲದ ಖುಷಿ ಹಾಗಾಗಿ ಖುಷಿ ಖುಷಿಯಿಂದಲೇ ತಂದೆಯ ಕೋಣೆಗೆ ತೆರಳಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ತಂದೆಯ ಕೋಣೆಯ ಟಿವಿಯ ಶಬ್ಧ ಜೋರಾಗಿ ಕೇಳಿದೆ. ಪುತ್ರನನ್ನು ಕೊಲ್ಲುವ ಸಂದರ್ಭದಲ್ಲಿ ಪಾಯಲ್ ಗೆ ಶಶಿಪಾಲ್ ವಿಡಿಯೋ ಕಾಲ್ ಮಾಡಿದ್ದಾನೆ. ಆದರೆ, ಆತನನ್ನು ಆಕೆ ಈ ಹಿಂದೆಯೇ ಬ್ಲಾಕ್ ಮಾಡಿರುವ ಕಾರಣ ಕರೆ ಹೋಗಿಲ್ಲ. ಹಾಗಾಗಿ ಮಗನನ್ನು ಕೊಂದಿರುವ ಪುರಾವೆಯನ್ನು ಪತ್ನಿಗೆ ಕಳುಹಿಸಲು ವಿಡಿಯೋ ಮಾಡಿಕೊಂಡಿದ್ದು, ಹತ್ಯೆಯ ಬಳಿಕ ವಿಡಿಯೋವನ್ನು ಆಕೆಯ ಮೊಬೈಲ್ ಗೆ ಕಳುಹಿಸಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಇದೀಗ ಶಶಿಪಾಲ್ ಹಾಗೂ ಆತನ ಮೂರನೇ ಪತ್ನಿ ಪಾಯಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಶಶಿಪಾಲ್ ತಾನು ಮೂರನೇ ಪತ್ನಿಗಾಗಿ ಮಗನನ್ನು ಕೊಂದೆ ಎಂದು ಹೇಳಿದರೆ, ಆಕೆ, ನನಗೂ ಈ ಕೊಲೆಗೂ ಸಂಬಂಧವಿಲ್ಲ, ನಾನು 7 ವರ್ಷದ ಬಾಲಕನನ್ನು ಕೊಲ್ಲುವಂತೆ ಆತನಿಗೆ ಎಂದಿಗೂ ಹೇಳಿಲ್ಲ ಎಂದು ಹೇಳಿದ್ದಾಳೆ.
ಪುತ್ರನನ್ನು ಕೊಂದಿರುವುದನ್ನು ಒಪ್ಪಿಕೊಂಡಿರುವ ಶಶಿಪಾಲ್, ನಾನು ಪುತ್ರನನ್ನು ಕೊಂದು ಪಾಯಲ್ ಗೆ ವಿಡಿಯೋ ಕಳಿಸಿದ್ದೇನೆ, ಇನ್ನೆಂದಿಗೂ ಅವನು ಆಕೆಗೆ ತೊಂದರೆ ಕೊಡುವುದಿಲ್ಲ ಎಂದು ಹೇಳಿದ್ದಾನೆ.
ಶಶಿಪಾಲ್ ಮುಂಡೆ ಅವರ ಮೂರನೇ ಪತ್ನಿಗೆ ಮೊದಲಿನಿಂದಲೂ 7 ವರ್ಷದ ಹುಡುಗನ ಬಗ್ಗೆ ತೀವ್ರ ಸೇಡು ಇತ್ತು. ಈ ವಿಷಯದ ಬಗ್ಗೆ ಶಶಿಪಾಲ್ ಜೊತೆಗೆ ಆಗಾಗ ಜಗಳವಾಡುತ್ತಿದ್ದಳು ಎಂದು ಪೊಲೀಸ್ ಅಧಿಕಾರಿ ಜೈವೀರ್ ಸಿಂಗ್ ಭಡೋರಿಯಾ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw