ಇಂದ್ರಜಿತ್ ಲಂಕೇಶ್ ಗಂಡ್ಸಾಗಿದ್ರೆ ಆಡಿಯೋ ಬಿಡುಗಡೆ ಮಾಡಲಿ | ನಟ ದರ್ಶನ್ ಸವಾಲು
ಬೆಂಗಳೂರು: ಇಂದ್ರಜಿತ್ ಲಂಕೇಶ್ ಗಂಡಸಾಗಿದ್ದರೆ, ಲಂಕೇಶ್ ಅವರಿಗೆ ಹುಟ್ಟಿದ್ದರೆ ನನ್ನ ಆಡಿಯೊ ಬಿಡುಗಡೆ ಮಾಡಲಿ ಎಂದು ನಟ ದರ್ಶನ್ ಸವಾಲು ಹಾಕಿದ್ದು, ಶನಿವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ವೇಳೆ ಅವರು ಇಂದ್ರಜಿತ್ ಲಂಕೇಶ್ ವಿರುದ್ಧ ಕಿಡಿಕಾರಿದರು.
ಮೈಸೂರಿನ ಸಂದೇಶ್ ಹೊಟೇಲ್ ನಲ್ಲಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರ ಆಡಿಯೊವೊಂದಿದೆ ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದರು. ಅಲ್ಲದೆ, ಇಂದ್ರಜಿತ್ ದರ್ಶನ್ ಅವರ ವಿರುದ್ಧ ಅಸಾಂವಿಧಾನಿಕ ಪದ ಬಳಸಿದ್ದಾರೆ ಎನ್ನಲಾಗಿದ್ದು, ಈ ವಿಚಾರವಾಗಿ ದರ್ಶನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ವಿರುದ್ಧ ಅವನು (ಇಂದ್ರಜಿತ್ ಲಂಕೇಶ್) ಗಂಡಸ್ತನಕ್ಕೆ ಸಂಬಂಧಿಸಿದ ಪದ ಬಳಕೆ ಮಾಡಿದ್ದಾರೆ. ಆದರೆ, ನಾನು ಅವನಿಗೆ ಸವಾಲು ಹಾಕುತ್ತಿದ್ದೇನೆ, ಆಡಿಯೊ ಬಿಡುಗಡೆ ಮಾಡಲಿ. ನನ್ನನ್ನು ಅನಕ್ಷರಸ್ಥ ಎಂದು ಅವನು ಹೇಳಿದ್ದಾನೆ. ಆದರೆ, ನಾನು ಎಸೆಸೆಲ್ಸಿ ಪಾಸು ಮಾಡಿದ್ದೇನೆ. ಚೆನ್ನೈ ಸಿನಿಮಾ ತರಬೇತಿ ಸಂಸ್ಥೆಯಿಂದ ನಾನು ಪ್ರಮಾಣ ಪತ್ರ ಪಡೆದುಬಂದಿದ್ದೇನೆ. ನಾನು ಸಂಗೊಳ್ಳಿ ರಾಯಣ್ಣ ಆಗೋಕೂ ರೆಡಿ, ಕುರುಕ್ಷೇತ್ರ ಮಾಡೋಕೂ ರೆಡಿ, ಮೆಜೆಸ್ಟಿಕ್ ಮಾಡಿ ಲಾಂಗ್ ಹಿಡ್ಕೊಂಡು ನಿಲ್ಲೋಕೂ ರೆಡಿ. ನನ್ನ ಸಿನಿಮಾ ಶಿಕ್ಷಣ ಸಾಕು. ಇಂದ್ರಜಿತ್ ತುಂಬಾ ಓದಿದ್ದಾರಲ್ಲಾ. ಅವರು ನೆಟ್ಟಗೆ ಒಂದು ಸಿನಿಮಾ ನಿರ್ದೇಶನ ಮಾಡಲು ಹೇಳಿ ನೋಡೋಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
25 ಕೋಟಿ ಪ್ರಕರಣ ದೊಡ್ಡಮನೆ (ರಾಜ್‌ಕುಮಾರ್ ಮನೆ) ಕಡೆಗೆ ಹೋಗುತ್ತಿದೆ. ಹಾಗಾಗಿಯೇ ನಾನು ಈಗ ಮಾತಾಡುತ್ತಿದ್ದೇನೆ. ನನ್ನ ತಂದೆ ಮತ್ತು ನಾನು ಆ ಮನೆ ಅನ್ನ ತಿಂದೇ ಮುಂದೆ ಬಂದವರು. ವಿಚಾರ ಅಲ್ಲಿಗೆ ಹೋದ ನಂತರ ನನಗೆ ಬೇಸರವಾಗಿ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ ಎಂದು ಅವರು ನಿರ್ಮಾಪಕ ಉಮಾಪತಿ ಅವರ ವಿರುದ್ಧ ಕಿಡಿ ಕಾರಿದರು.
ನಾನು ಆಸ್ತಿಯೊಂದನ್ನು ಖರೀದಿಗೆ ಕೇಳಿದೆ ಕೊಡಲಿಲ್ಲ ಎಂದು ಉಮಾಪತಿ ಹೇಳುತ್ತಾರೆ. ಆದರೆ ಒಂದೂವರೆ ವರ್ಷ ಉಮಾಪತಿ ನನ್ನ ಹೆಸರಲ್ಲಿ ಆ ಆಸ್ತಿಗೆ ಬಾಡಿಗೆ ಕಟ್ಟಿದ್ದು ಏಕೆ? ಎಂದು ದರ್ಶನ್ ಪ್ರಶ್ನೆ ಮಾಡಿದರು. ನಮ್ಮತಂದೆ ಅಂಬಾಸಿಡರ್ ಖರೀದಿಸಿದ್ದರು. ನಾನು ಈಗ ಐಷಾರಾಮಿ ಕಾರು ಖರೀದಿಸುವ ಹಂತಕ್ಕೆ ಬೆಳೆದಿದ್ದೇನೆ. ಅದಕ್ಕೆ ನಾನು ಪಟ್ಟ ಶ್ರಮ ದೊಡ್ಡದು. ರಾಜ್‌ಕುಮಾರ್ ಅವರ ಮಗನೂ ನಾನು ಓಡಾಡುವಂಥ ಕಾರಿನಲ್ಲೇ ಓಡಾಡುತ್ತಾರೆ ಎಂದು ಹೇಳಿದರು.