ಇಂದು ಪ್ರಮುಖ ಜಂಕ್ಷನ್ ಗಳಲ್ಲಿ ಭಿಕ್ಷಾಟನೆ ನಡೆಸಲಿರುವ ಸಾರಿಗೆ ನೌಕರರು!
ಬೆಂಗಳೂರು: ಸಾರಿಗೆ ನೌಕರರು 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಚಳುವಳಿ ಆರಂಭಿಸಿದ್ದು, ನಿನ್ನೆ ತಟ್ಟೆಲೋಟ ಹಿಡಿದು ಪ್ರತಿಭಟನೆ ನಡೆಸಿದ್ದ ಕಾರ್ಮಿಕರು ಇಂದು ಮತ್ತೊಂದು ಸುತ್ತಿನ ಪ್ರತಿಭಟನೆಗೆ ಮುಂದಾಗಿದ್ದಾರೆ.
ಯುಗಾದಿ ದಿನವೂ ಸರ್ಕಾರಿ ನೌಕರರಿಗೆ ವೇತನ ನೀಡದ ಕ್ರಮವನ್ನು ಖಂಡಿಸಿ, ಚಳುವಳಿ ಆರಂಭಿಸಿರುವ ನೌಕರರು, ಭಿಕ್ಷಾಟನಾ ಚಳುವಳಿಯನ್ನು ಹಮ್ಮಿಕೊಂಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ಕೂಡ ಸರ್ಕಾರ ತಾವು ದುಡಿದ ವೇತನವನ್ನು ನೀಡಿಲ್ಲ ಎಂದು ನೌಕರರು ಹೇಳಿದ್ದಾರೆ.
ಇಂದು ಪ್ರಮುಖ ಜಂಕ್ಷನ್ ಗಳಲ್ಲಿ ಸಾರಿಗೆ ನೌಕರರು ತಮ್ಮ ಕುಟುಂಬಸ್ಥರ ಜೊತೆಗೆ ತಟ್ಟೆ, ಲೋಟ ಹಿಡಿದು ಭಿಕ್ಷಾಟನೆ ಮಾಡಲು ಮುಂದಾಗಿದ್ದು, ಇದರಿಂದ ಸರ್ಕಾರಕ್ಕೆ ಭಾರೀ ಮುಜುಗರ ಸೃಷ್ಟಿಯಾಗಲಿದೆ ಎಂದು ಹೇಳಲಾಗಿದೆ.
ವೇತನ ಹೆಚ್ಚಳ ಮಾಡುವವರೆಗೂ ಕರ್ತವ್ಯಕ್ಕೆ ಹಾಜರಾಗದಿರಲು ಸಾರಿಗೆ ನೌಕರರು ತೀರ್ಮಾನಿಸಿದ್ದಾರೆ. ಈ ನಡುವೆ ನಿನ್ನೆ, ಸರ್ಕಾರದ ಬೆದರಿಕೆಗಳಿಗೆ ಜಗ್ಗಿರುವ ಕೆಲವು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರನ್ನು ತಡೆದ ಸಾರಿಗೆ ನೌಕರರು, ನೀನು ನಿನ್ನ ಹೆಂಡ್ತಿ ಮಕ್ಕಳು ಚೆನ್ನಾಗಿರಲಿ ಎಂದು ಹಾರಹಾಕಿ ಸನ್ಮಾನ ಮಾಡುವ ಮೂಲಕ ಅವರಿಗೆ ಮುಜುಗರ ಸೃಷ್ಟಿಸಿದ್ದಾರೆ.