ಕೆಪಿಎಸ್‌ ಸಿ ಪರೀಕ್ಷೆಯಲ್ಲಿ ಕನ್ನಡಿಗ ಅಭ್ಯರ್ಥಿಗಳಿಗೆ ಅನ್ಯಾಯ: ಟಿ.ಎ ನಾರಾಯಣಗೌಡ ಆಕ್ರೋಶ - Mahanayaka
4:33 AM Saturday 14 - September 2024

ಕೆಪಿಎಸ್‌ ಸಿ ಪರೀಕ್ಷೆಯಲ್ಲಿ ಕನ್ನಡಿಗ ಅಭ್ಯರ್ಥಿಗಳಿಗೆ ಅನ್ಯಾಯ: ಟಿ.ಎ ನಾರಾಯಣಗೌಡ ಆಕ್ರೋಶ

narayanagowda
31/08/2024

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆಯ ಕನ್ನಡ ಪ್ರಶ್ನೆ ಪತ್ರಿಕೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಟಿ.ಎ ನಾರಾಯಣಗೌಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗಾಗಿ ಪರೀಕ್ಷೆ ನಡೆಸಿತ್ತು. ಆದರೆ, ಈ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದವರಿಗೆ ಅನ್ಯಾಯವಾಗಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ (ಕರವೇ) ಟಿ.ಎ ನಾರಾಯಣ ಗೌಡ,  ಕನ್ನಡದ ಮಕ್ಕಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕರವೇ ಎಚ್ಚರಿಸಿದ್ದಾರೆ. ಕೆಪಿಎಸ್‌ ಸಿ ನಡೆಸಿರುವ ಪರೀಕ್ಷೆಯನ್ನು 1.36 ಲಕ್ಷ ವಿದ್ಯಾರ್ಥಿಗಳು ಬರೆದಿದ್ದಾರೆ. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳು. ಈ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು. ಪ್ರಶ್ನೆ ಪತ್ರಿಕೆಯಲ್ಲಿ ಉಂಟಾದ ತರ್ಜುಮೆ ಸಮಸ್ಯೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Provided by

ಕರ್ನಾಟಕ ಲೋಕಸೇವಾ ಆಯೋಗವು ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಮಾಡಿರುವ ತಪ್ಪುಗಳನ್ನು ನೋಡಿದರೆ, ಇದರ ಹಿಂದೆ ಯಾವುದೋ ಹುನ್ನಾರವಿರುವಂತೆ ಇದೆ ಎಂದು ಕರವೇ ಅನುಮಾನ ವ್ಯಕ್ತಪಡಿಸಿದೆ. ಪ್ರಶ್ನೆ ಪತ್ರಿಕೆಯಲ್ಲಿ ಒಂದೆರಡು ತಪ್ಪುಗಳಾದರೆ, ಕಣ್ತಪ್ಪಿನಿಂದ ತಪ್ಪಾಗಿದೆ ಎಂದು ಹೇಳಬಹುದು. ಅನುವಾದ ಮಾಡುವಾಗ ಸಣ್ಣಪುಟ್ಟ ತಪ್ಪಾಗಿದೆ ಎಂದು ಹೇಳಬಹುದಿತ್ತು. ಆದರೆ, 120 ಅಂಕಗಳನ್ನು ಒಳಗೊಂಡ ಬರೋಬ್ಬರಿ 60 ಪ್ರಶ್ನೆಗಳು ತಪ್ಪಾಗುವುದು ಎಂದರೆ ಇದರ ಅರ್ಥವೇನು ಎಂದು ನಾರಾಯಣಗೌಡ ಅವರು ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕದಲ್ಲಿ ಕನ್ನಡಭಾಷೆಗೆ ಮೊದಲ ಆದ್ಯತೆ ಕೊಡಬೇಕು. ಕರ್ನಾಟಕದಲ್ಲಿ ನಡೆಯುವ ಯಾವುದೇ ಮಾದರಿಯ ಪರೀಕ್ಷೆಗಾದರೂ ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು. ಆದರೆ, ಕೆಪಿಎಸ್‌ ಸಿ ನಡೆಸಿರುವ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಮೊದಲು ಇಂಗ್ಲಿಷ್‌ನಲ್ಲಿ ತಯಾರಿಸಿ, ನಂತರ ಅದನ್ನು ಕನ್ನಡಕ್ಕೆ ಭಾಷಾಂತರಿಸಲಾಗಿದೆ. ಆದರೆ, ಕೆಪಿಎಸ್‌ಸಿಯು ದುಂಡಾವರ್ತನೆ ಪ್ರದರ್ಶಿಸಿದೆ. ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರ ಮಾಡುವ ಬದಲು ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ. ಈ ರೀತಿ ಭಾಷಾಂತರ ಮಾಡುವ ಸಂದರ್ಭದಲ್ಲಿಯೂ ಕನ್ನಡ ಮಾಧ್ಯಮದವರಿಗೆ ಅರ್ಥವಾಗದಂತೆ ಭಾಷಾಂತರ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮರು ಪರೀಕ್ಷೆ ನಡೆಸಲು ಆಗ್ರಹಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ